ಬೆಂಗಳೂರಿನಲ್ಲಿ ಕೆಲಸ ಮಾಡುವ ಮೇಘಾಲಯದ ವಿಕ್ಕಿ ಎಂಬ ಯುವಕ, ಅನೇಕ ವಲಸಿಗರಿಗಿಂತ ಭಿನ್ನವಾಗಿ ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ಕಲಿತಿದ್ದಾರೆ. ಉದ್ಯಮಿಯೊಬ್ಬರು ಹಂಚಿಕೊಂಡ ಅವರ ವೀಡಿಯೋ ವೈರಲ್ ಆಗಿದ್ದು, ವಿಕ್ಕಿಯವರ ಭಾಷಾ ಪ್ರೀತಿಗೆ ಕನ್ನಡಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಅನೇಕರಿಗೆ ಕನ್ನಡ ಬರೆಯುವುದಕ್ಕೆ ಓದುವುದಕ್ಕೆ ಬಿಡಿ ಕನಿಷ್ಠ ಮಾತನಾಡುವುದಕ್ಕೂ ಬರುವುದಿಲ್ಲ, ಅನೇಕರು ತಮಗೆ ಕನ್ನಡ ಗೊತ್ತಿಲ್ಲ ಎಂದು ದುರಂಕಾರ ಹಾಗೂ ಆಸಡ್ಡೆಯಿಂದಲೇ ಹೇಳುತ್ತಾರೆ. ಜೊತೆಗೆ ಕನ್ನಡವನ್ನು ತಾವು ಇಲ್ಲೇ ಜನಿಸಿದರು ಕಲಿಯಲ್ಲ ಎಂಬ ದೌಲತ್ತಿನ ಮಾತನಾಡುವ ಅನೇಕ ಉತ್ತರ ಭಾರತೀಯರನ್ನು ನೀವು ನೋಡಿರಬಹುದು. ವಲಸಿಗರು ತಾವು ಸ್ಥಳೀಯ ಭಾಷೆಯನ್ನು ಕಲಿಯುವುದರಿಂದ ಸ್ಥಳೀಯರಿಗಿಂತಲೂ ತಮಗೆ ಬಹಳವಾದ ಪ್ರಯೋಜನವಿದೆ ಎಂಬುದನ್ನು ಅವರು ಅರಿತುಕೊಳ್ಳುವುದು ಬಹಳ ಕಡಿಮೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೆಲಸ ಮಾಡುವ ಮೇಘಾಲಯದ ಯುವಕರೊಬ್ಬರು ಕನ್ನಡ ಮಾತನಾಡುವುದರ ಜೊತೆಗೆ ಓದುವುದಕ್ಕೆ ಹಾಗೂ ಬರೆಯುವುದಕ್ಕೂ ಕಲಿತಿದ್ದಾರೆ.
ಉದ್ಯಮಿ ಮೃನಾಲ್ ಬಂಕಾಪುರ ಅವರು ಆ ಯುವಕನ ವೀಡಿಯೋ ಮಾಡಿ ಹಾಕಿದ್ದು, ಅವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಈ ಕನ್ನಡ ಮಾತನಾಡುವ ಹುಡುಗನನ್ನು ಸೋಶಿಯಲ್ ಮೀಡಿಯಾ ಮೂಲಕ ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಬೆಂಗಳೂರಿಗೆ ಹೊಟೇಲ್‌ಗಳಿಗೆ ಬಂದಾಗ ಹೊರಗನಿಂದ ಬಂದ ಅನೇಕರು ಕನ್ನಡ ಬರಲ್ಲ ಎಂದು ಹೇಳುತ್ತಾರೆ. ಇವತ್ತು ನಾನು ಒಂದು ರೆಸ್ಟೋರೆಂಟ್‌ಗೆ ಬಂದಿದ್ದೇನೆ. ಆದರೆ ಇಲ್ಲಿರುವ ವಿಕ್ಕಿಗೆ ಕನ್ನಡ ಚೆನ್ನಾಗಿ ಬರುತ್ತೇ ಎಂದು ಆ ಮೇಘಾಲಯದ ಯುವಕನನ್ನು ಮಾತನಾಡಿಸಿದ್ದಾರೆ.. ಹೌದು ಕನ್ನಡ ಬರುತ್ತೆ ಎಂದು ಆ ತರುಣ ಕನ್ನಡದಲ್ಲೆ ಮಾತನಾಡಿದ್ದಾನೆ. ಇಲ್ಲಿಗೆ ಬಂದು ಎಷ್ಟು ವರ್ಷ ಆಯ್ತು ಎಂದು ಮೃನಾಲ್ ಅವರು ಯುವಕನ್ನು ಪ್ರಶ್ನೆ ಮಾಡಿದ್ದು, ತಾನು ಇಲ್ಲಿ ಬಂದು ಹತ್ತು ವರ್ಷ ಆಯ್ತು ಎಂದು ಆ ಯುವಕ ಹೇಳಿದ್ದಾನೆ.
ಈ ಮೇಘಾಲಯದ ಹುಡುಗ ವಿಕ್ಕಿ ಅವರಿಗೆ ಕನ್ನಡ ಮಾತನಾಡುವುದಕ್ಕೆ ಮಾತ್ರವಲ್ಲ, ಬರೆಯುವುದಕ್ಕೆ ಹಾಗೂ ಓದುವುದಕ್ಕೆ ಕೂಡ ಬರುತ್ತದೆ ಎಂದು ಸ್ವತಃ ವಿಕ್ಕಿಯವರೇ ವೀಡಿಯೋದಲ್ಲಿ ಕನ್ನಡ ಭಾಷೆಯಲ್ಲೇ ಹೇಳಿದ್ದಾರೆ. ಹೀಗೆ ಕನ್ನಡ ಕಲಿತ ವಿಕ್ಕಿಯವರಿಗೆ ತುಂಬಾ ಧನ್ಯವಾದಗಳು ಎಂದು ಮೃನಾಲ್ ಅವರು ವೀಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ತನ್ನ ಊರು ಮೇಘಾಲಯ ನಾನು ಮೇಘಾಲಯದಿಂದ ಬಂದಿದ್ದೇನೆ ಎಂದು ಅವರು ಕನ್ನಡದಲ್ಲೇ ಹೇಳಿದ್ದಾರೆ.
ಈ ವಿಡಿಯೋ ನೋಡಿದ ಅನೇಕ ಕನ್ನಡಿಗರು ವಿಕ್ಕಿಯವರಿಗೆ ಕನ್ನಡ ಭಾಷೆಯ ಮೇಲಿದ್ದ ಆಸಕ್ತಿಗೆ ಧನ್ಯವಾದ ಹೇಳಿದ್ದಾರೆ. ಇವರು ಭಾಷೆಯನ್ನು ಕಲಿತಿರುವುದು ಶ್ಲಾಘನೀಯದುಕೋಕ್ಕೆ ಬರೋವರು ಸ್ಥಳೀಯ ಭಾಷೆ ಸಂಸ್ಕೃತಿಯನ್ನು ಗೌರವಿಸುತ್ತಾ ಬದುಕು ಕಟ್ಟಿಕೊಳಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕನ್ನಡದವರು ಒಂದು ಕಡೆ ವರ್ಷ ನೆಲೆಸಿದ್ರು ಸಾಕು ಆ ಊರಿನ ಭಾಷೆ ಕಲಿತು ಮಾತನಾಡೋಕೆ ಶುರು ಮಾಡ್ತಾರೆ. ಕನ್ನಡದವರು ತುಂಬಾ ಜಾಣರು ಆದರೆ ಅವರು ತಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮೇಘಾಲಯದಿಂದ ಬೆಂಗಳೂರಿಗೆ ಬಂದು ಹತ್ತು ವರ್ಷ ಆಯ್ತು. ಕನ್ನಡವನ್ನಾ ಸ್ಪಷ್ಟವಾಗಿ ಮಾತಾಡೋದು ಮಾತ್ರವಲ್ಲಾ, ಕನ್ನಡವನ್ನಾ ಓದೋಕೆ ಹಾಗೂ ಬರಿಯೋಕೆ ಕೂಡ ಕಲಿತಿದ್ದಾರೆ ಈ ವ್ಯಕ್ತಿ. ಆ ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇಂತವರ ಮೇಲಿರಲಿ.
ಈ ವಿಡಿಯೋ ಮಾಡಿದ್ದು ಕರ್ನಾಟಕದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಬಿ. ಎಸ್ ಚೆನ್ನಬಸಪ್ಪ & ಸನ್ಸ್ ಮಾಲೀಕರಾದ @mrunal_bankapur ಅವರು. ಈ ಕನ್ನಡ ಪ್ರೇಮಿಯ ವಿಡಿಯೋ ಮಾಡಿದ ನಿಮಗೂ ಧನ್ಯವಾದಗಳು ಸರ್ ಎಂದು ಬರೆದು belagavika
ಎಂಬ ಥ್ರೆಡ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.


