ಆತ್ಮಭೂಷಣ್‌

ಮಂಗಳೂರು(ಆ.10): ಕೇರಳದ ಕೋಝಿಕ್ಕೋಡ್‌ ಟೇಬಲ್‌ ಟಾಪ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತ ಮಂಗಳೂರು ವಿಮಾನ ನಿಲ್ದಾಣಕ್ಕೆ ಎಚ್ಚರಿಕೆ ಗಂಟೆ ಬಾರಿಸಿದೆ. ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ಅವಶ್ಯವಾದ ರನ್‌ವೇ ವಿಸ್ತರಣೆಯಿಂದ ಹಿಂದಕ್ಕೆ ಸರಿದಿರುವುದು ಅಪಾಯವನ್ನು ಜೀವಂತ ಇರಿಸಿದಂತಾಗಿದೆ.

ಕೋಝಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಮೊನ್ನೆಯಷ್ಟೆ ಏರ್‌ ಇಂಡಿಯಾ ವಿಮಾನ ರನ್‌ವೇ ಇಂದ ಜಾರಿ ಪ್ರಪಾತಕ್ಕೆ ಬಿದ್ದು 20ಕ್ಕೂ ಅಧಿಕ ಪ್ರಯಾಣಿಕರ ಜೀವ ತೆಗೆದಿತ್ತು. ಕೋಯಿಕ್ಕೋಡ್‌ನಲ್ಲಿ ರನ್‌ವೇ ವಿಸ್ತರಣೆಗೆ ಸ್ಥಳದ ಅಭಾವ. ಅಲ್ಲಿ ಸುತ್ತಲೂ ಪ್ರಪಾತ, ಮಧ್ಯೆ ಎತ್ತರದಲ್ಲಿ ವಿಮಾನ ನಿಲ್ದಾಣ.

ಲ್ಯಾಂಡಿಂಗ್ ವೇಳೆ ದುಬೈ-ಕೋಯಿಕ್ಕೋಡ್‌ ಏರ್ ಇಂಡಿಯಾ ವಿಮಾನ ಕ್ರ್ಯಾಶ್!

ಮಂಗಳೂರು ವಿಮಾನ ನಿಲ್ದಾಣ ಇದಕ್ಕೆ ತುಸು ವ್ಯತಿರಿಕ್ತ. ಇದು ಟೇಬಲ್‌ ಟಾಪ್‌ ವಿಮಾನ ನಿಲ್ದಾಣ ಎಂದು ಕರೆಸಿಕೊಂಡರೂ ಕೋಝಿಕ್ಕೋಡ್‌ನಷ್ಟು ಸುತ್ತಲೂ ಪ್ರಪಾತ ಇಲ್ಲ. ಆದರೆ ರನ್‌ವೇ ಎರಡು ತುದಿಗಳಲ್ಲೂ ಕೆಳಗೆ ಪ್ರಪಾತ ಇದೆ. ಇಲ್ಲಿ ರನ್‌ವೇ ವಿಸ್ತೀರ್ಣ 2,450 ಮೀಟರ್‌ ಇದೆ. ಇದನ್ನು 3,100 ಮೀಟರ್‌ಗೆ ವಿಸ್ತರಿಸಲು 2014ರಲ್ಲಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ರನ್‌ವೇ ವಿಸ್ತರಣೆ ಬಾಕಿಯುಳಿದಿತ್ತು. ಇದೇ ವೇಳೆ 2010ರ ಮೇ 23ರಂದು ದುಬೈನಿಂದ ಆಗಮಿಸಿದ ಏರ್‌ ಇಂಡಿಯಾ ವಿಮಾನ ರನ್‌ವೇ ನಿಂದ ದೂರ ಚಲಿಸಿ ಪ್ರಪಾತಕ್ಕೆ ಬಿದ್ದು 158 ಮಂದಿ ಸಾವಿಗೀಡಾಗಿದ್ದರು.

ಮಂಜೂರುಗೊಳಿಸಿ ಕೈಬಿಟ್ಟರು:

ಮಂಗಳೂರು ವಿಮಾನ ದುರಂತ ಬಳಿಕ ರನ್‌ವೇ ವಿಸ್ತರಣೆಗೆ ಮತ್ತಷ್ಟು ಜೀವ ಬಂತು. ಭೂಸ್ವಾಧೀನಕ್ಕೆ ಸಂಬಂಧಿಸಿದ ಸಿದ್ಧತೆಯೂ ನಡೆಯಿತು. ಸುಮಾರು 70 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿ ಬಳಿಕ ಪ್ರಪಾತ ತುಂಬಿಸಲು 2 ಸಾವಿರ ಕೋಟಿ ರು. ಮೊತ್ತ ಬೇಕಿತ್ತು. ಇಷ್ಟೊಂದು ಮೊತ್ತ ವ್ಯಯಿಸಿ ರನ್‌ವೇ ವಿಸ್ತರಣೆ ಅನಗತ್ಯ ಎಂಬುದನ್ನು ಕಂಡುಕೊಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಂತರ ಈ ಯೋಜನೆಯನ್ನೇ ಕೈಬಿಟ್ಟರು. ಇದರಿಂದಾಗಿ ಬಹುನಿರೀಕ್ಷಿತ ರನ್‌ವೇ ವಿಸ್ತರಣೆಗೆ ಮೂಲೆಗುಂಪಾಯಿತು.

ಕನ್ನಡಿಗ ಅಧಿಕಾರಿ ಎಂ.ಆರ್‌. ವಾಸುದೇವ ಅವರು ವಿಮಾನ ನಿಲ್ದಾಣ ನಿರ್ದೇಶಕರಾಗಿದ್ದಾಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಮದೀನಾದಿಂದ ದೊಡ್ಡ ವಿಮಾನ ಏರ್‌ಬಸ್‌ ಕೂಡ ಬಂದಿಳಿದಿತ್ತು. ನಂತರ ದಿನಗಳಲ್ಲಿ ರನ್‌ವೇ ವಿಸ್ತರಣೆಗೆ ಇನ್ನಿಲ್ಲದ ಪ್ರಯತ್ನ ನಡೆಯಿತು. ಒಮ್ಮೆ ಒಪ್ಪಿಗೆ ಪಡೆದು ಮತ್ತೆ ಅದನ್ನು ಕೈಬಿಡುವ ಮೂಲಕ ಇಚ್ಛಾಶಕ್ತಿ ಕೊರತೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರದರ್ಶಿಸಿದ್ದಾರೆ.
ವಿಮಾನ ದುರಂತ ಬಳಿಕ ವಿಮಾನಯಾನ ನಿರ್ದೇಶನಾಲಯ ತನಿಖೆ ನಡೆಸಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ ಲ್ಯಾಂಡಿಂಗ್‌ ಸಿಸ್ಟಮ್‌, ಅತ್ಯಾಧುನಿಕ ಅಗ್ನಿಶಮನ ವ್ಯವಸ್ಥೆ, ಏರ್‌ ನೇವಿಗೇಷನ್‌ ಮೇಲ್ದರ್ಜೆಗೆ, ಹೊಸ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಸೌಲಭ್ಯವನ್ನು ಕೈಗೊಳ್ಳಲಾಗಿತ್ತು. ಇಷ್ಟೆಲ್ಲ ಸುಧಾರಣೆ ತಂದರೂ ಒಂದೆರಡು ಬಾರಿ ರನ್‌ವೇ ಮತ್ತು ಏಪ್ರಾನ್‌ನಲ್ಲಿ ವಿಮಾನ ಸ್ಕಿಡ್‌ ಆಗಿ ಸುದ್ದಿಯಾಗಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿರಲಿಲ್ಲ.

ಭಾರಿ ಮಳೆ ಬಂದರೆ ವಿಮಾನ ನಿಲ್ದಾಣವೇ ಬಂದ್‌!

ಕೋಝಿಕ್ಕೋಡ್‌ ಘಟನೆ ಬಳಿಕ ಇದೀಗ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹವಾಮಾನ ವೈಪರೀತ್ಯ ಸವಾಲು ಎದುರಿಸಿ ವಿಮಾನ ಹಾರಾಟ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನ ಇದ್ದರೆ ವಿಮಾನ ಹಾರಾಟ ನಡೆಸದೇ ಇರಲು ತೀರ್ಮಾನಿಸಿದ್ದಾರೆ. ಇಷ್ಟೆಲ್ಲ ಅತ್ಯಾಧುನಿಕ ಸುರಕ್ಷಾ ಕ್ರಮಗಳು ಇದ್ದರೂ ಭಾರಿ ಮಳೆಯ ಕಾರಣಕ್ಕೆ ವಿಮಾನ ಸಂಚಾರವನ್ನೇ ಬಂದ್‌ ಮಾಡುವ ಈ ನಿರ್ಧಾರ ಆಧುನಿಕ ತಾಂತ್ರಿಕತೆಗೆ ಸವಾಲು ಹಾಕುವಂತಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಅಗತ್ಯ ಆಗಬೇಕಾಗಿದೆ. ಆಗ ಮಳೆಗಾಲದಲ್ಲೂ ರನ್‌ವೇ ಜಾರಿದರೂ ಭೀತಿಗೆ ಒಳಗಾಗಬೇಕಾಗಿಲ್ಲ. ಆದರೆ ಇದಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಆದಷ್ಟುಬೇಗ ರನ್‌ವೇ ವಿಸ್ತರಣೆಗೆ ಕ್ರಮ ಕೈಗೊಳ್ಳುವ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಏಕೈಕ ಕೊರತೆಯನ್ನು ನೀಗಿಸಬೇಕು ಎಂದು ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌. ವಾಸುದೇವ ಅವರು ತಿಳಿಸಿದ್ದಾರೆ. 

ಡಿಜಿಸಿಎ ನಿರ್ದೇಶನದಂತೆ ಮಳೆಗಾಲದಲ್ಲೂ ವಿಮಾನದ ಸುರಕ್ಷಿತ ಲ್ಯಾಂಡಿಂಗ್‌ಗೆ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರನ್‌ವೇ ವಿಸ್ತರಣೆ ವಿಚಾರ ಇನ್ನು ಮುಂದೆ ಈ ನಿಲ್ದಾಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕಂಪನಿಗೆ(ಅದಾನಿ) ಸೇರಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಎ.ವಿ.ರಾವ್‌ ಅವರು ತಿಳಿಸಿದ್ದಾರೆ.