ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ, ಮಾಲೀಕ ಶಿವಾನಂದ ನೀಲಣ್ಣನವರಿಗೆ ಸೇರಿದ 15 ಬ್ಯಾಂಕ್ ಖಾತೆಗಳಿಂದ ಸುಮಾರು ₹250 ಕೋಟಿ ಜಪ್ತಿ ಮಾಡಿದೆ. ಈ ಸಂಸ್ಥೆಯು ಸುಮಾರು 40 ಸಾವಿರ ಹೂಡಿಕೆದಾರರಿಂದ ₹1,180 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಕೇಳಿ ಬಂದಿರುವ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಶಿವಾನಂದ ನೀಲಣ್ಣನವರಿಗೆ ಸೇರಿದ್ದ 15 ಬ್ಯಾಂಕ್ ಖಾತೆಗಳಲ್ಲಿ ಇದ್ದ ಸುಮಾರು ₹250 ಕೋಟಿ ಜಪ್ತಿ ಮಾಡಿದೆ.

ಬೆಳಗಾವಿಯಲ್ಲಿರುವ ಶಿವಂ ಅಸೋಸಿಯೇಟ್ಸ್‌ಗೆ ಸೇರಿದ್ದ ಸುಮಾರು 15 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಒಂದು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು ₹200 ಕೋಟಿ ಹಾಗೂ ಉಳಿದ ಖಾತೆಯಲ್ಲಿ ಸುಮಾರು ₹50 ಕೋಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಒಂದೇ ವರ್ಷದಲ್ಲಿ ₹945 ಕೋಟಿ ಗಳಿಕೆ
ಸಿಐಡಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಶಿವಂ ಅಸೋಸಿಯೇಟ್ಸ್‌ಗೆ ಸಂಸ್ಥೆಗೆ ದೊಡ್ಡ ಮಟ್ಟದ ಹೂಡಿಕೆ ನಡೆದಿರುವುದು ಬೆಳಕಿಗೆ ಬಂದಿದೆ. 2017 ಮತ್ತು 2024ರ ನಡುವೆ ನೀಲಣ್ಣವರ್ ಒಂದು ದಿನಕ್ಕೆ ಸುಮಾರು ₹50 ಲಕ್ಷ ಗಳಿಸುತ್ತಿದ್ದರು. ಈ ಏಳು ವರ್ಷಗಳ ಅವಧಿಯಲ್ಲಿ ಶಿವಂ ಅಸೋಸಿಯೇಟ್ಸ್‌ಗೆ ಬರೋಬ್ಬರಿ ₹1,180 ಕೋಟಿ ಹೂಡಿಕೆಯ ರೂಪದಲ್ಲಿ ಹರಿದು ಬಂದಿತ್ತು. ನೀಲಣ್ಣವರ್ 2025ರಲ್ಲಿ (ಒಂದೇ ವರ್ಷದಲ್ಲಿ) ₹945 ಕೋಟಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಹೂಡಿಕೆದಾರರು ಎಷ್ಟರ ಮಟ್ಟಿಗೆ ಅವರನ್ನು ನಂಬಿದ್ದರು ಎಂಬುದನ್ನು ಸೂಚಿಸುತ್ತದೆ. 2024 ಮತ್ತು 2025ರ ಹಣಕಾಸು ವರ್ಷದ ಬ್ಯಾಲೆನ್ಸ್ ಶೀಟ್‌ನಲ್ಲಿ ನೀಲಣ್ಣವರ್ ಕೇವಲ ಒಂದು ವರ್ಷದಲ್ಲಿ ₹945 ಕೋಟಿ ಗಳಿಸಿದ್ದಾರೆ ಎಂದು ತೋರಿಸಿದೆ.
ಹೋಟೆಲ್‌ಗಳು, ಮದುವೆ ಮಂಟಪಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಅವರ ಸಮ್ಮೇಳನಗಳ ಫಲಿತಾಂಶ ಇದಾಗಿದೆ. ನೀಲಣ್ಣವರ್ ಕೆಲವೊಮ್ಮೆ ಭಾವನಾತ್ಮಕ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಅವರು ಕೆಲವು ಹಳೆಯ ಹೂಡಿಕೆದಾರರನ್ನು ಕರೆಸಿ ಸನ್ಮಾನಿಸುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.
40 ಸಾವಿರ ಹೂಡಿಕೆದಾರರು:
ಶಿವಂ ಅಸೋಸಿಯೇಟ್ಸ್ ಒಟ್ಟು 40 ಸಾವಿರ ಹೂಡಿಕೆದಾರರನ್ನು ಹೊಂದಿದೆ ಎಂದು ತಿಳಿದು ಬಂದಿದೆ. ನೀಲಣ್ಣವರ್ ಮತ್ತು ಅವರ ಪಾಲುದಾರ ಸುಭಾಷ್ ನಂದರಗಿ ಮಾಡಿದ ಹೂಡಿಕೆಗಳ ವಿವರಗಳನ್ನು ಕೋರಿ ನಾವು ಸೆಬಿ ಮತ್ತು ಇತರ ಸಂಸ್ಥೆಗಳಿಗೆ ಪತ್ರ ಬರೆದಿದ್ದೇವೆ ಎಂದು ಸಿಬಿಐ ಮೂಲಗಳು ಹೇಳಿವೆ.


