ಗದಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು ಮತ್ತು ಬಸವಾದಿ ಶರಣರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶರಣ ಪರಂಪರೆಯನ್ನು ನಾಶಮಾಡುವ ಮತ್ತು ಕೋಮುದ್ವೇಷ ಬಿತ್ತುವ RSS ಪ್ರೇರಿತ ಹುನ್ನಾರ ಎಂದು ಅವರು ಆರೋಪಿಸಿದ್ದಾರೆ.

ಗದಗ: ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಮೇ 31ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಶರಣ ಪರಂಪರೆ ನಾಶಗೊಳಿಸುವ ಪ್ರಯತ್ನ ಇದಾಗಿದೆ ಎಂದು ಸಮಾನ ಮನಸ್ಕರು, ಬಸವಾದಿ ಶರಣರು ಮತ್ತು ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಯಾಕೆ ವಿರೋಧ?

ನಗರದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಸಮಾನ ಮನಸ್ಕರು, ಬಸವಾದಿ ಶರಣರು ಮತ್ತು ಸಮಾಜದ ಮುಖಂಡರು ನಗರದಲ್ಲಿ ಹಿಂದೂ ಸಮಾವೇಶ ಮಾಡುತ್ತಿರುವುದನ್ನು ಖಂಡಿಸಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಅಶೋಕ ಬರಗುಂಡಿ ಮಾತನಾಡಿ, ಸಮಾನತೆಯ ಬಾಳನ್ನು ಬದುಕಲು ಶರಣರು ಇಷ್ಟಲಿಂಗದಲ್ಲಿ ಬೆರೆತು, ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕುತ್ತಾರೆ. ಇದನ್ನು ಸಹಿಸದ ಮನುವಾದಿಗಳು, ವೈದಿಕ ಮನಸ್ಥಿತಿಯವರು ಇದನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಗದಗಿನಲ್ಲಿ ಪ್ರತಿರೋಧ ಒಡ್ಡುವುದಿಲ್ಲವೆಂದು ತಿಳಿದು ಆರ್‌ಎಸ್ಎಸ್, ಮುನುವಾದಿಗಳು ಹಿಂದು ಸಮಾವೇಶ ಮಾಡುತ್ತಿದ್ದು, ಈ ಮೂಲಕ ಬಸವಣ್ಣನವರ ವಿಚಾರಗಳಲ್ಲಿ ಮನುವಾದಿಗಳು ನುಗ್ಗುತ್ತಿದ್ದಾರೆ. ಗದುಗಿನಲ್ಲಿ ಇದರ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸಬೇಕು ಎಂದರು.

ಹೋರಾಟಗಾರ ಶರೀಫ್ ಬಿಳೆಯಲಿ ಮಾತನಾಡಿ, ಒಂದು ವರ್ಷದ ಹಿಂದೆ ಆರ್‌ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳು ಮಹಾಯಜ್ಞ ಕುಂಭಮೇಳ ಮಾಡಿದರು. ಈಗ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ. ನಾಡಿನೊಳಗೆ ಕೇವಲ ಬಸವಣ್ಣನವರ ವಚನಗಳನ್ನು ನಾಶಗೊಳಿಸುವುದು ಅಷ್ಟೆ ಅಲ್ಲ, ಈಡೀ ಶೋಷಿತ ವರ್ಗದವರನ್ನು ನಾಶಗೊಳಿಸಲು ಹೊರಟಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಬೇಕು ಎಂದರು.

ಸೌಹಾರ್ದತೆ ಹಾಳು ಮಾಡುವ ಪ್ರಯತ್ನ

ಮುಖಂಡ ಮುತ್ತು ಬಿಳೆಯಲಿ ಮಾತನಾಡಿ, ಆರ್‌ಎಸ್ಎಸ್ ಪ್ರಚಾರಕರಾದ ಕನ್ಹೇರಿ ಸ್ವಾಮಿ ಹೊದಲ್ಲೆಲ್ಲ ಅಶ್ಲೀಲ ಭಾಷೆಯ ಮೂಲಕ ಕೋಮುದ್ವೇಷ ಹರಡುತ್ತಿದ್ದಾರೆ. ಈಗ ಗದುಗಿನಲ್ಲಿ ಹಿಂದೂ ಸಮಾವೇಶದ ಹೆಸರಿನಲ್ಲಿ ಇಲ್ಲಿನ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಬಸವರಾಜ ಎಂ. ಕಡೇಮನಿ, ಎಚ್.ಎಸ್. ಸೊಂಪೂರ, ಕೊಟ್ರಬಸಪ್ಪ ಚಟ್ಟಿ, ವಿ‌.ಕೆ. ಕರೇಗೌಡ್ರ, ದಿಲೀಪಕುಮಾರ ಹಲವಾಗಲಿ, ಪ್ರಕಾಶ ಅಸುಂಡಿ, ಮಂಜುನಾಥ ಹಗೇದಾಳ, ಎಸ್.ಐ. ಪವಾಡಗೌಡ್ರ, ಆನಂದ ಶಿಂಗಾಡಿ, ನಾಗಭೂಷಣ ಬಡಗನ್ನವರ, ಸುವರ್ಣ ಗಾಳಪ್ಪನವರ, ಸುಜಾತಾ ವಾರದ, ಮಂಗಳಾ ನಾಲವಾಡ, ಬಾಲರಾಜ ಅರಬರ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಅನಿಲ್ ಕಾಳೆ, ಬಸು ಬಿಳೆಯಲಿ, ಮಂಜುನಾಥ ಹಗೆದಾಳ ಸೇರಿದಂತೆ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವದಳ, ಸಾಹಿತ್ಯ ಮೇಳ, ದಲಿತ ಕಲಾ ಮಂಡಳಿ, ದಲಿತ ಸಂಘಟನೆಗಳ ಒಕ್ಕೂಟ, ನಗರದ ಎಲ್ಲ ಪ್ರಗತಿಪರ ಮತ್ತು ಬಸವಾದಿ ಶರಣರ ಸಂಘಟನೆಗಳ ಮುಖಂಡರು ಇದ್ದರು.