ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸಲು ಬಯಸಿದ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಕೋರಿ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಏನಿದು ಪ್ರಕರಣ, ಹೈಕೋರ್ಟ್ ಹೇಳಿದ್ದೇನು ಪೂರ್ತಿ ಓದಿ.

ಬೆಂಗಳೂರು (ಮೇ.21): ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸಲು ಬಯಸಿರುವ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯವನ್ನು ಮೌಲ್ಯ‌‌ಮಾಪನ ಮಾಡಲು ನಿರ್ದೇಶಿಸುವಂತೆ ಕೋರಿ‌ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

Add Asianetnews Kannada as a Preferred SourcegooglePreferred

ಯುವತಿ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಕೆ.ಮನ್ಮಥ ರಾವ್ ಅವರ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ತಾನು ಸ್ವಇಚ್ಛೆಯಿಂದ ಪ್ರಿಯತಮನೊಂದಿಗೆ ವಾಸಿಸುತ್ತಿದ್ದೇನೆ ಎಂದು ಪ್ರಾಪ್ತವಯಸ್ಕಳಾದ ಅರ್ಜಿದಾರ ಪುತ್ರಿ ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತದ ಮಾನಸಿಕ ಆರೋಗ್ಯವನ್ನು ಮೌಲ್ಯಮಾಪನ ಪರೀಕ್ಷೆಗೆ ಆದೇಶಿಸಲು ಆಗುವುದಿಲ್ಲ ಎಂದು ನುಡಿಯಿತು.

ಯಾರೋ ಒಬ್ಬರು ಮನವಿ ಮಾಡಿದ್ದಾರೆ ಎಂಬ ಕಾರಣಕ್ಕೆ ಯಾರನ್ನಾದರೂ ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ. ಅಂಥ ಪರೀಕ್ಷೆಗೆ ಮಾನಸಿಕ ಆರೋಗ್ಯ ಕಾಯ್ದೆ ಅಡಿ ಅರ್ಜಿ ಸಲ್ಲಿಸಿ, ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅದನ್ನು ಬಿಟ್ಟು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗದು. ಅರ್ಜಿದಾರರ ಮನವಿಯಂತೆ ಆಕೆಯ ಪುತ್ರಿಯ ಮಾನಸಿಕ ಸ್ಥಿತಿಗತಿಯ ಮೌಲ್ಯಮಾಪನ ಮಾಡಲು ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ ಯುವತಿ ತನಗೆ ಪೋಷಕರು ಒತ್ತಡ ಹೇರಿದ್ದರಿಂದ ಪ್ರಿಯತಮನ ವಿರುದ್ಧ ಅತ್ಯಾ೧ಚಾರ ಮತ್ತು ಮತಾಂತರ ಆರೋಪಗಳನ್ನು ಮಾಡಿ ಪತ್ರ ಬರೆದಿದ್ದೆ. ಅದರಲ್ಲೂ ತಂದೆ-ತಾಯಿ ನನ್ನನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕೆಲ‌ ಸದಸ್ಯರನ್ನು ಭೇಟಿ‌ ಮಾಡಿಸಿ ಈ ಪತ್ರ ಬರೆಯಿಸಿದ್ದರು.‌ ಆ‌ ಪತ್ರದಲ್ಲಿ ಹೇಳಲಾದ ಯಾವೊಂದು ವಿಚಾರವೂ ಸತ್ಯವಲ್ಲ. ನಾನು ಮತಾಂತರವೂ ಆಗಿಲ್ಲ. ನನ್ನ ಮೇಲೆ ಅತ್ಯಾ೧ಚಾರವೂ ಆಗಿಲ್ಲ. ಬೆದರಿಕೆ ಹಾಕಿ ಈ ಪತ್ರ ಬರೆಯುವಂತೆ ಮಾಡಿದರು ಎಂದು ಯುವತಿ (ಅರ್ಜಿದಾರರ ಪುತ್ರಿ) ನ್ಯಾಯಾಲಯಕ್ಕೆ ಹೇಳಿಕೆ ನೀಡಿದಳು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಯುವತಿ ತನ್ನ ಸ್ವಇಚ್ಛೆಯಿಂದ ಪ್ರೇಮಿಯೊಂದಿಗೆ ವಾಸಿಸುತ್ತಿದ್ದಾರೆ. ಇದರಿಂದ ಅರ್ಜಿ ವಜಾಗೊಳಿಸಲಾಗುತ್ತದೆ ಎಂದು ಹೇಳಿತು.

ಸಿಖ್ ಧರ್ಮಕ್ಕೆ ಸೇರಿದ ತಾಯಿ, ತನ್ನ ಪುತ್ರಿ ಮುಸ್ಲಿಂ ಯುವಕನೊಂದಿಗೆ ವಾಸಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾಯಿ ಪರ ವಕೀಲರು, ಅರ್ಜಿದಾರರ ಪುತ್ರಿ ಈ ಹಿಂದೆ ಥೆರಪಿ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆಗೆ ಒಳಗಾಗಿದ್ದರು. ನಿಮ್ಹಾನ್ಸ್ ಅಸ್ಪತ್ರೆಯ ದಾಖಲೆಗಳ ಪ್ರಕಾರ ಆಕೆಗೆ ಥೆರಪಿ ಮುಂದುವರಿಸಬೇಕಿದೆ. ಈ ಹಿನ್ನೆಲೆಯಲ್ಲಿ, ಮುಸ್ಲಿಂ‌‌ ಯುವಕನೊಂದಿಗೆ ವಾಸಿಸಲು ಆಕೆ‌ ನೀಡಿರುವ ಒಪ್ಪಿಗೆ ಸ್ವಯಂ ಪ್ರೇರಿತವಾಗಿದೆಯೇ ಅಥವಾ ಬಲವಂತವಾಗಿದೆಯೇ ಎಂಬುದನ್ನು ತಿಳಿಯಲು ಆಕೆಯ ಮಾನಸಿಕ ಆರೋಗ್ಯದ ಮೌಲ್ಯಮಾಪನ ಅಗತ್ಯವಿದೆ ಎಂದು ವಾದಿಸಿದರು.