ಚಾಮರಾಜನಗರ(ನ.28): ಜಿಲ್ಲಾ ಕೇಂದ್ರದ ಹಾದಿ ಬೀದಿಗಳಲ್ಲಿ ಗುಂಪು ಗುಂಪಾಗಿ ಬಂದು ಸಿಕ್ಕ ಸಿಕ್ಕ ಸಾರ್ವಜನಿಕರ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಬೀದಿ ನಾಯಿಗಳ ಹಾವಳಿಗೆ ಕೊನೆಗೂ ಕಡಿವಾಣ ಹಾಕಲು ಸ್ಥಳೀಯ ನಗರಸಭೆ ಎಚ್ಚೆತ್ತುಕೊಂಡಿದ್ದು, ನಾಯಿಗಳ ಸಂತತಿಗೆ ಬ್ರೇಕ್‌ ಹಾಕಲು ಸಂತಾನಹರಣ ಶಕ್ತಿ ಚಿಕಿತ್ಸೆ ಮಾಡಲಾಗುತ್ತಿದೆ.

ಚಾಮರಾಜನಗರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಸಹಸ್ರಾರು ಬೀದಿನಾಯಿಗಳು ನಗರದ 31 ವಾರ್ಡ್‌ನಲ್ಲೂ ಮೊಕ್ಕಾಂ ಹೂಡಿ ಒಂಟಿಯಾಗಿ ಮಕ್ಕಳು ಹೋದರೆ ಅಥವಾ ಮನೆಗೆ ಹಾಲು, ಬಿಸ್ಕೇಟ್‌, ತಿಂಡಿ, ತಿನಿಸು ತರುವ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಕಾಟ ಕೊಡುತ್ತಿದ್ದವು.

ದಾಳಿ ಪ್ರಕರಣಗಳಿಗೆ ಲೆಕ್ಕವಿಲ್ಲ:

ಕಳೆದ ನಾಲ್ಕೈದು ವರ್ಷಗಳಿಂದ ಬೀದಿ ನಾಯಿಗಳ ದಾಳಿ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಪ್ರತಿ ವಾರ್ಡ್‌ನಲ್ಲೂ ನಿರೀಕ್ಷೆಗೂ ಮೀರಿ ಬೀದಿ ನಾಯಿಗಳು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದವು. ದಿನ ಬೆಳೆಗಾದರೆ ಎಲ್ಲೋ ಒಂದು ಕಡೆ ನಾಯಿಗಳ ಹಿಂಡು ದಾಳಿ ನಡೆಸಿದ ಪ್ರಕರಣಗಳು ಕೇಳಿ ಬರುತ್ತಿದ್ದವು. ಮೊದಲೇ ಅಸ್ವಸ್ಥತೆಯಿಂದ ಕೂಡಿರುವ ನಗರದ ಬಹುಭಾಗದಲ್ಲಿ ನಾಯಿಗಳ ಹಿಂಡು ಕಂಡು ಬಂದು ಸಾರ್ವಜನಿಕರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದವು.

ಬೀದಿ ನಾಯಿಗಳ ತಡೆಗೆ ಚಿಕಿತ್ಸೆ:

ಬೀದಿನಾಯಿಗಳ ಹಾವಳಿಗೆ ರೋಸಿ ಹೋಗಿದ್ದ ಸಾರ್ವಜನಿಕರು ಅವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರು. ಈ ಬಗ್ಗೆ ಸ್ವತಃ ನಗರಸಭೆ ಸದಸ್ಯರೇ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ನಿವಾರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ಸಾರ್ವಜನಿಕರು ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಇದರಿಂದಾಗಿ ಜಿಲ್ಲಾಧಿಕಾರಿಗೂ ನಾಯಿ ಹಾವಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಕ್ತಿ ಚಿಕಿತ್ಸೆ ಮಾಡಲು ಹಲವು ಬಾರಿ ಟೆಂಡರ್‌ ಕರೆದರೂ ಯಾರು ಮುಂದೆ ಬಂದಿರಲಿಲ್ಲ. ಆದರೆ ಇದೀಗ ಪಶುಸಂಗೋಪನಾ ಇಲಾಖೆ ಮುಂದಾಗಿದ್ದು, ಸ್ಥಳೀಯ ನಗರಸಭೆ ಕಳೆದ ನಾಲ್ಕೈದು ದಿನಗಳಿಂದ ಕೆ.ಆರ್‌. ನಗರದಿಂದ ನಾಯಿ ಹಿಡಿಯುವುರನ್ನು ಕರೆಸಿ ಅವುಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.

ಆಸ್ಪತ್ರೆಯಲ್ಲಿ ವ್ಯವಸ್ಥೆ:

ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಶುಸಂಗೋಪನಾ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದ್ದು, ಪ್ರತಿ ನಾಯಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ, ಆ್ಯಂಟಿ ರೇಬಿಸ್‌ ಚುಚ್ಚುಮದ್ದು ನೀಡಿ ನಾಯಿಯನ್ನು ಮೂರು ದಿನಗಳ ಕಾಲ ಆರೈಕೆ ಮಾಡುತ್ತಾರೆ ಎಂದು ನಗರಸಭಾ ಆರೋಗ್ಯಾಧಿಕಾರಿ ಕೆ.ಎಂ. ಮಹದೇವಸ್ವಾಮಿ ಕನ್ನಡಪ್ರಭ ಕ್ಕೆ ತಿಳಿಸಿದರು.

ಒಂದು ಬೀದಿ ನಾಯಿಗೆ ಸಾವಿರಾರು ರು. ಖರ್ಚು:

ಬೀದಿ ನಾಯಿಗಳ ಹಾವಳಿ ತಡೆಗೆ ಮುಂದಾಗಿರುವ ಸ್ಥಳೀಯ ನಗರಸಭೆ ಒಂದು ನಾಯಿಗೆ ಸಾವಿರಾರು ರು. ಖರ್ಚು ಮಾಡುತ್ತಿದೆ. ಚಿಕಿತ್ಸೆ ನೀಡುವುದರ ಜೊತೆಗೆ ಅದನ್ನು ಮೂರು ದಿನಗಳ ಕಾಲ ಶಸ್ತ್ರ ಚಿಕಿತ್ಸೆ ಬಳಿಕ ಆರೈಕೆ ಮಾಡುವ ಕೆಲಸವನ್ನು ಪಶುಸಂಗೋಪನಾ ಇಲಾಖೆ ಮಾಡುತ್ತದೆ. ಅಲ್ಲದೇ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್‌ ಚುಚ್ಚು ಮದ್ದು ಸಹ ನೀಡಲಾಗುತ್ತಿದೆ. ಈಗಾಗಲೇ 50ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರಚಿಕಿತ್ಸೆ ಪೂರೈಸಿದೆ.

ಸಾವಿರಾರು ನಾಯಿಗಳು:

100, 200 ಅಲ್ಲ ಬರೋಬ್ಬರಿ 1000ಕ್ಕೂ ಅಧಿಕ ಬೀದಿ ನಾಯಿಗಳು ಜಿಲ್ಲಾ ಕೇಂದ್ರದಲ್ಲಿ ಠಿಕಾಣಿ ಹಾಕಿವೆ. ಇದು ಸ್ಥಳೀಯ ನಗರಸಭೆ ನಡೆಸಿರುವ ಸಮೀಕ್ಷೆಯ ಅಂಕಿ, ಅಂಶ, ಪ್ರತಿ ವಾರ್ಡ್‌ನಲ್ಲೂ ಬೀದಿ ನಾಯಿಗಳ ಹಾವಳಿ ಇದ್ದೇ ಇದೆ. ಹೆಚ್ಚಾಗಿ ಮುಖ್ಯ ರಸ್ತೆಗಳಲ್ಲಿಯೇ ನಾಯಿಗಳ ಹಾವಳಿ ಅಧಿಕವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳು ಪರದಾಡುವುದು ಮಾಮೂಲಿಯಾಗಿದೆ.

ಸಿದ್ದು ಆಡಳಿತ ಹಾಡಿ ಹೊಗಳಿದ ಹುಣಸೂರು ಬಿಜೆಪಿ ಅಭ್ಯರ್ಥಿ

ಬೀದಿ ನಾಯಿಗಳ ಹಾವಳಿ ತಡೆಯಲು ನಗರಸಭೆ ಅಧಿಕಾರಿಗಳು ಈ ಹಿಂದೆಯೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೂ ತಡವಾಗಿಯಾದರೂ ಎಚ್ಚೆತ್ತಿಕೊಂಡಿರುವುದು ನೆಮ್ಮದಿ ವಿಚಾರ. ಬೀದಿ ನಾಯಿಗಳ ದಾಳಿಯಿಂದ ನಗರದಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಓಡಾಟಕ್ಕೂ ಕಷ್ಟವಾಗಿತ್ತು. ವಾಹನ ಸವಾರರು ಪರದಾಡಬೇಕಿತ್ತು ಎಂದು ಚಾಮರಾಜನಗರ ನಿವಾಸಿ ಮಹೇಶ್‌ ಕುಮಾರ್‌ ಹೇಳಿದ್ದಾರೆ.

'ಸಿದ್ದು, ಎಚ್‌ಡಿಕೆ ಇಬ್ಬರ ದೇಹವೂ ಚಿನ್ನ, ಆದ್ರೆ ಕಿವಿ ಮಾತ್ರ ಹಿತ್ತಾಳೆ'..!

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದರಿಂದ ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲಾಗುತ್ತದೆ. ಇದರಿಂದಾಗಿ ಬೀದಿನಾಯಿಗಳ ಸಂತತಿ ಕಡಿಮೆಯಾಗಲಿದೆ ಎಂದು ಚಾಮರಾಜನಗರ ಪೌರಾಯುಕ್ತ ಎಂ. ರಾಜಣ್ಣ ತಿಳಿಸಿದ್ದಾರೆ.