ದಾವಣಗೆರೆಯಲ್ಲಿ ₹150 ಕೋಟಿ ಎಂದು ಭಾವಿಸಲಾಗಿದ್ದ ಸೈಬರ್ ವಂಚನೆ ಪ್ರಕರಣವು ಇದೀಗ ₹1000 ಕೋಟಿಗೂ ಅಧಿಕ ವಹಿವಾಟು ನಡೆಸಿರುವುದು ತನಿಖೆಯಿಂದ ಬಯಲಾಗಿದೆ. ದೂರುದಾರನೇ ಪ್ರಮುಖ ಆರೋಪಿಯಾಗಿದ್ದು, ದುಬೈನಿಂದ ಹಣ ವರ್ಗಾವಣೆಗಾಗಿ ಕರೆಂಟ್ ಅಕೌಂಟ್‌ಗಳನ್ನು ಮಾರಾಟ ಮಾಡುವ ದಂಧೆ ಬೆಳಕಿಗೆ ಬಂದಿದೆ.
ದಾವಣಗೆರೆ (ಡಿ.21): ಕಳೆದ ಆಗಸ್ಟ್ ತಿಂಗಳಲ್ಲಿ ನಗರದಲ್ಲಿ ಬೆಳಕಿಗೆ ಬಂದಿದ್ದ ₹150 ಕೋಟಿ ಸೈಬರ್ ವಂಚನೆ ಪ್ರಕರಣದ ತನಿಖೆಯನ್ನು ದಾವಣಗೆರೆ ಸೆನ್ ಠಾಣೆ ಪೊಲೀಸರು ಸಿಐಡಿಗೆ ವಹಿಸಿದ್ದಾರೆ. ಈ ಮಧ್ಯೆ, ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 2 ತಿಂಗಳಲ್ಲೇ ಸೈಬರ್ ವಂಚಕನ ಖಾತೆಯಲ್ಲಿ ವಹಿವಾಟು ಆಗಿದ್ದು ₹150 ಕೋಟಿ ಅಲ್ಲ, ₹1 ಸಾವಿರ ಕೋಟಿಗೂ ಅಧಿಕ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ನಗರದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಈ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಣ ವ್ಯವಹಾರ ನಡೆಸುವ ಪ್ರಮೋದ್ ಆಗಸ್ಟ್ 29ರಂದು ₹52 ಲಕ್ಷ ಕಳೆದುಕೊಂಡ ಬಗ್ಗೆ ದೂರು ನೀಡಿದ್ದರು. ತನಿಖೆ ವೇಳೆ ಪ್ರಮೋದ್ ಖಾತೆ ಮೂಲಕ ₹150 ಕೋಟಿ ವರ್ಗಾವಣೆ ಆಗಿರುವುದು ಕಂಡು ಬಂದಿತ್ತು. ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದ ಪ್ರಮೋದನೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಮೋದ್ ಖಾತೆಗೆ ಬಂದಿದ್ದು ಅನಾಮಧೇಯರ ಹಣ ಎಂಬುದು ಪತ್ತೆಯಾಗಿತ್ತು. ಬಳಿಕ, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕರೆಂಟ್ ಅಕೌಂಟ್‌ಗಳ ಮಾರಾಟ ದಂಧೆ ನಡೆಸುತ್ತಿದ್ದ ವಿಚಾರ ಬಯಲಾಗಿತ್ತು.
ಯಾವುದೇ ಉದ್ಯಮ, ಉದ್ಯೋಗ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆದು, ಅದರಲ್ಲಿ ಕೋಟಿ, ಕೋಟಿ ರು.ಗಳ ವಹಿವಾಟು ನಡೆಸುತ್ತಿದ್ದರು. ದುಬೈನಿಂದ ಕರೆಂಟ್ ಅಕೌಂಟ್‌ಗೆ ಕೋಟಿ ಕೋಟಿಗಟ್ಟಲೇ ಹಣ ಜಮಾ ಆಗುತ್ತಿತ್ತು. ತನ್ನ ಕರೆಂಟ್ ಖಾತೆಯನ್ನು ಬೇರೆ ವ್ಯಕ್ತಿಗಳಿಗೆ ಪ್ರಮೋದ್ ಮಾರಾಟ ಮಾಡಿದ್ದ. ತನ್ನ ಖಾತೆಗೆ ಜಮಾ ಆದ ಹಣಕ್ಕೆ ಕಮೀಷನ್ ನೀಡಿಲ್ಲವೆಂಬುದು ದೂರುದಾರನ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ, ತನಿಖೆಯ ಆಳಕ್ಕೆ ಇಳಿದಂತೆ ಇವರ ಖಾತೆಗಳಲ್ಲಿ ವಹಿವಾಟು ಆಗಿರುವುದು ₹150 ಕೋಟಿ ಮಾತ್ರವಲ್ಲ, ₹1 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂಬುದು ಪತ್ತೆಯಾಗಿದೆ.


