ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ, ಶಿಕ್ಷಕ ದಂಪತಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಕಾರದಪುಡಿ ಎರಚಿ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಮೂರು ತಿಂಗಳ ಹಿಂದಿನ ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೋಷಕರ ದೂರು. ಪೊಲೀಸರು ಆರೋಪಿ ದಂಪತಿಯನ್ನು ವಶಕ್ಕೆ
ಬಾಗಲಕೋಟೆ (ಡಿ.21): ಬುದ್ಧಿಮಾಂದ್ಯ ಬಾಲಕನಿಗೆ ಶಿಕ್ಷಕ ದಂಪತಿ ಕಾರದಪುಡಿ ಎರಚಿ, ಪೈಪ್‌ನಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ನವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಧೋಳ ತಾಲೂಕಿನ ಮಂಟೂರು ಗ್ರಾಮದ 16 ವರ್ಷದ ಬಾಲಕ ಹಲ್ಲೆಗೊಳಗಾದ ಬುದ್ಧಿಮಾಂದ್ಯ. ಅನಧಿಕೃತ ಶಾಲೆಯ ಮುಖ್ಯಶಿಕ್ಷಕ ಅಕ್ಷಯ ಇಂದುಲ್ಕರ್ ಹಾಗೂ ಶಿಕ್ಷಕಿ ಮಾಲಿನಿ ದಂಪತಿ ಬಾಲಕನ ಕಣ್ಣಿಗೆ ಕಾರದಪುಡಿ ಎರಚಿ, ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಆತ ನೆಲಕ್ಕೆ ಬಿದ್ದು ಹೊರಳಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶಿಕ್ಷಕರ ವಿರುದ್ಧ ಪಾಲಕರು ತೀವ್ರ ಆಕ್ರೋಶ ಹೊರಹಾಕಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡ ನವನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಹಲ್ಲೆಕೋರ ಪತಿ-ಪತ್ನಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯೂ 3 ತಿಂಗಳ ಹಿಂದೆ ನಡೆದಿದ್ದು, ವಿಡಿಯೋ ಕ್ಲಿಪ್ ಈಗ ಲಭ್ಯವಾಗಿದೆ. ಕೆಲಸ ಮಾಡುವ ಮಹಿಳೆ ಸೆರೆ ಹಿಡಿದ ವಿಡಿಯೋ ಪೋಷಕರಿಗೆ ಈಗ ಸಿಕ್ಕಿದೆ. ಸಿಡಿಪಿಒ ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಧಿಕಾರಿ ಸಹ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರವಾನಿಗೆ ಪಡೆಯದೇ ಎನ್‌ಜಿಒ ಆರಂಭ:
ಅಕ್ಷಯ ಹಾಗೂ ಮಾಲಿನಿ ದಂಪತಿ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ 2025 ಏ.24ರಂದು ಸಿದ್ಧಸಿರಿ ಶಿಕ್ಷಣ ಸಂಸ್ಥೆ ರಿಜಿಸ್ಟರ್ ಮಾಡಿಸಿದ್ದಾರೆ. ಆದರೆ, ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತೇವೆಂದು ಪರವಾನಗಿ ಪಡೆದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಪ್ರಭಾಕರ ತಿಳಿಸಿದ್ದಾರೆ. ಈ ರೀತಿಯ ಶಾಲೆ ನಡೆಸಬೇಕಾದರೆ ಕಟ್ಟಡ ಸೇರಿ ಮೂಲ ಸೌಲಭ್ಯ ಬಗ್ಗೆ ವಿಕಲಚೇತನ ಅಧಿಕಾರಿಗಳು ವರದಿಕೊಟ್ಟ ಬಳಿಕ ಪರವಾನಗಿ ಸಿಗುತ್ತದೆ. ಬುದ್ಧಿಮಾಂದ್ಯ ಮಗುವಿನ ಮೇಲೆ ಈ ಸಂಸ್ಥೆಯ ದಂಪತಿ ನಡೆಸಿರುವ ಕ್ರೌರ್ಯ ಸಮಾಜಕ್ಕೆ ಒಂದು ಕೆಟ್ಟ ಸಂದೇಶವಾಗಿದ್ದು, ಆ ದೃಶ್ಯವನ್ನು ನೋಡಿದರೆ ಪ್ರತಿಯೊಬ್ಬರ ಮನಸ್ಸು ಮಿಡಿಯುತ್ತದೆ ಎಂದು ವಿಷಾದವ್ಯಕ್ತಪಡಿಸಿದ್ದಾರೆ.


