ಚಾಮರಾಜನಗರ(ನ.24): ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಒಳ್ಳೆಯ ಆಡಳಿತಗಾರ, ರಾಜ್ಯದ ಎಲ್ಲಾ ಜನರೂ ಸಿದ್ದರಾಮಯ್ಯ ಅವರನ್ನು ಪ್ರೀತಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

'ಸಿದ್ದು, ಎಚ್‌ಡಿಕೆ ಇಬ್ಬರ ದೇಹವೂ ಚಿನ್ನ, ಆದ್ರೆ ಕಿವಿ ಮಾತ್ರ ಹಿತ್ತಾಳೆ'..!

ಹುಣಸೂರು ವಿಧಾನಸಭಾ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಒಳ್ಳೆಯ ಆಡಳಿತಗಾರ. ರಾಜ್ಯದ ಎಲ್ಲ ಜನರೂ ಅವರನ್ನು ಪ್ರೀತಿಸುತ್ತಾರೆ. ನಾನು ಸಿದ್ದರಾಮಯ್ಯರನ್ನು ಇಷ್ಟಪಡುತ್ತೇನೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಭಯದ ಮಾತನಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.

ದೇವೇಗೌಡರ ಬಗ್ಗೆಯೂ ಗೌರವ:

ನನಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಗ್ಗೆಯೂ ಅಪಾರ ಪ್ರೀತಿ ಇದೆ. ನನ್ನ ಜೀವ ಇರುವವರೆಗೂ ದೇವೇಗೌಡರ ಫೋಟೋಗೆ ಪೂಜೆ ಮಾಡುತ್ತೇನೆ. ನಮ್ಮ ದೇವರ ಮನೆಯಲ್ಲಿ ದೇವೇಗೌಡರ ಪೋಟೋ ಇಟ್ಟು ಪೂಜೆ ಮಾಡುತ್ತೇನೆ. ಅವರ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ. ಏಕೆಂದರೆ ದೇವೇಗೌಡರು ನನಗೆ ರಾಜಕೀಯ ಸ್ಥೈರ್ಯ ತಂದುಕೊಟ್ಟರು ಎನ್ನುವ ಮೂಲಕ ರಾಜಕೀಯ ಎದುರಾಳಿಗಳಿಗೆ ಮೃದು ಮಾತಿನ ದಾಳ ಉರುಳಿಸಿದರು.

ಸ್ವಾಭಿಮಾನಕ್ಕಾಗಿ ರಾಜೀನಾಮೆ:

ನಾನು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ. ಈ ಕುರುಬನನ್ನು ಗೆಲ್ಲಿಸಿದ್ದು ನಾವು ಎಂದು ಕೆಲವರು ಹಂಗಿಸುತ್ತಿದ್ದರು ಎಂದು ವಿಶ್ವನಾಥ್‌ ಭಾವುಕರಾದರು. ನಿಮ್ಮ ಜಾತಿಯವರು ಮತ ಹಾಕಿ ಗೆಲ್ಲಿಸಿಲ್ಲ ಎಂದು ಹೀಯಾಳಿಸಿದರು. ಅದಕ್ಕಾಗಿ ನೋವಾಗಿ ನಾನು ಪಕ್ಷ ಬಿಟ್ಟೆ ಎಂದಿದ್ದಾರೆ.

ಉಪಕದನದ ಬಳಿಕ ಸಿಎಂ ಯಡಿಯೂರಪ್ಪಗೆ ಕಾದಿದೆಯಾ ಕಂಟಕ?

ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕೆಯನ್ನು ನಾನು ಭೇಟಿಯಾಗಬೇಕಾದರೆ ಸ್ಟಾರ್‌ ಹೋಟೆಲ್‌ ಬಳಿ ಹೋಗಬೇಕಿತ್ತು. ಆಗ ನನ್ನನ್ನು ಹೋಟೆಲ್‌ನ ಗೇಟ್‌ನಲ್ಲಿ ನಿಲ್ಲಿಸುತ್ತಿದ್ದರು. ಕೆ.ಆರ್‌. ನಗರದ ಸಚಿವರು ಜಾತಿ ಹೆಸರಿನಲ್ಲಿ ನಿಂದಿಸಿದರು. ಇದನ್ನೆಲ್ಲ ಸಹಿಸಲಾಗದೆ ಪಕ್ಷ ಬಿಟ್ಟೆ. ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟರೀತಿಯಲ್ಲೇ ಸ್ವಾಭಿಮಾನಕ್ಕಾಗಿ ನಾನು ಪಕ್ಷ ಬಿಟ್ಟಿದ್ದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.