ಚಾಮರಾಜನಗರ(ನ.24): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಏಕಾಏಕಿ ತಮ್ಮ ಮಾತಿನ ಧಾಟಿ ಬದಲಿಸಿದ್ದು, ಎದುರಾಳಿಗಳನ್ನು ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹುಣಸೂರು ತಾಲೂಕಿನ ಹರವೆ ಕಲ್ಲಹಳ್ಳಿಯಲ್ಲಿ ಶನಿವಾರ ನಡೆದ ಬೂತ್‌ ಮಟ್ಟದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಒಳ್ಳೆಯ ಆಡಳಿತಗಾರ. ಭ್ರಷ್ಟರಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ರಾಜ್ಯದ ಎಲ್ಲಾ ಜನರೂ ಸಿದ್ದರಾಮಯ್ಯ ಅವರನ್ನು ಪ್ರೀತಿಸುತ್ತಾರೆ. ನಾನು ಸಿದ್ದರಾಮಯ್ಯರನ್ನು ಇಷ್ಟಪಡುತ್ತೇನೆ. ನಿಮ್ಮನ್ನು ಕಂಡರೆ ನಮಗೆಲ್ಲ ಪ್ರೀತಿಯಿದೆಯೇ ಹೊರತು ಭಯವಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ, ದೇವೇಗೌಡ್ರನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ ವಿಶ್ವನಾಥ್....!

ಕುಮಾರಸ್ವಾಮಿ ಕೂಡಾ ಒಳ್ಳೆಯವರೆ. ಅವರ ಕಾಲದಲ್ಲಿಯೂ ಸಾಕಷ್ಟುಒಳ್ಳೆಯ ಯೋಜನೆಗಳು ಜಾರಿಗೊಂಡಿವೆ, ಇಲ್ಲ ಎನ್ನಲು ಸಾಧ್ಯವೇ?. ಸಿದ್ದರಾಮಯ್ಯ ಹಾಗೂ ಕುಮಾರಣ್ಣ ಇಬ್ಬರ ದೇಹವೂ ಚಿನ್ನ. ಆದರೆ, ಕಿವಿ ಮಾತ್ರ ಹಿತ್ತಾಳೆ ಎಂದಿದ್ದಾರೆ.

ನನಗೆ ದೇವೇಗೌಡರ ಬಗ್ಗೆಯೂ ಅಪಾರ ಪ್ರೀತಿ ಇದೆ. ಜೀವ ಇರುವವರೆಗೂ ನಮ್ಮ ದೇವರಮನೆಯಲ್ಲಿ ದೇವೇಗೌಡರ ಫೋಟೋಗೆ ಪೂಜೆ ಮಾಡುತ್ತೇನೆ. ದೇವೇಗೌಡರು ನನಗೆ ರಾಜಕೀಯ ಸ್ಥೈರ್ಯ ತಂದುಕೊಟ್ಟರು. ಅವರ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ ಎಂದರು.

ಸ್ವಾಭಿಮಾನದ ರಾಜೀನಾಮೆ:

ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ವಾಭಿಮಾನದ ಪ್ರಶ್ನೆ ಮಾತನಾಡುತ್ತಾರೆ. ನಾನು ಅದಕ್ಕಾಗಿಯೇ ಸ್ವಾಮಿ ರಾಜೀನಾಮೆ ನೀಡಿರುವುದು. ಸಮ್ಮಿಶ್ರ ಸರ್ಕಾರದಲ್ಲಿ ನನ್ನಂತಹ 17 ಮಂದಿ ಶಾಸಕರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಕಾರಣವೇ ರಾಜೀನಾಮೆ ನೀಡಿ ಜನರ ಮುಂದೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಶ್ರೀಗಳೊಂದಿಗೆ ಮಾಧುಸ್ವಾಮಿ ಸಂಧಾನ: BJP ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್‌ಪಾಟ್.