Asianet Suvarna News Asianet Suvarna News

ಕೊರೋನಾ ಬಿಸಿ: ಕೈದಿಗಳ ಭೇಟಿಗೂ ಬಿತ್ತು ಬ್ರೇಕ್‌

ಶಿವಮೊಗ್ಗ ಸೆಂಟ್ರಲ್‌ ಜೈಲ್‌ ಸೇರಿದಂತೆ ಇದರ ವ್ಯಾಪ್ತಿಯಲ್ಲಿನ ಆರು ಕಾರಾಗೃಹಗಳಲ್ಲೀಗ ಕೊರೋನಾ ವೈರಾಣು ತಡೆ ಸದ್ದು ಮಾಡುತ್ತಿದೆ. ಈ ಕಾರಾಗೃಹಗಳಲ್ಲಿ ಕೈದಿಗಳ ಸಂಬಂಧಿಕರ ಭೇಟಿ ತಾತ್ಕಾಲಿಕವಾಗಿ ರದ್ದು ಸೇರಿ ಹಲವಾರು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

Relatives not allowed to visit jail due to corona fear
Author
Bangalore, First Published Mar 22, 2020, 12:58 PM IST

ಶಿವಮೊಗ್ಗ(ಮಾ.22): ಇಲ್ಲಿನ ಸೆಂಟ್ರಲ್‌ ಜೈಲ್‌ ಸೇರಿದಂತೆ ಇದರ ವ್ಯಾಪ್ತಿಯಲ್ಲಿನ ಆರು ಕಾರಾಗೃಹಗಳಲ್ಲೀಗ ಕೊರೋನಾ ವೈರಾಣು ತಡೆ ಸದ್ದು ಮಾಡುತ್ತಿದೆ. ಈ ಕಾರಾಗೃಹಗಳಲ್ಲಿ ಕೈದಿಗಳ ಸಂಬಂಧಿಕರ ಭೇಟಿ ತಾತ್ಕಾಲಿಕವಾಗಿ ರದ್ದು ಸೇರಿ ಹಲವಾರು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೋಗಾನೆಯಲ್ಲಿರುವ ಸೆಂಟ್ರಲ್‌ ಜೈಲ್‌ ವ್ಯಾಪ್ತಿಗೆ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರು ಜಿಲ್ಲಾ ಕಾರಾಗೃಹಗಳು ಸೇರುತ್ತಿದ್ದು, ಈ ಎಲ್ಲ ಕಾರಾಗೃಹಗಳಲ್ಲಿಯೂ ವೈರಾಣು ಹರಡುವುದನ್ನು ತಡೆಗಟ್ಟಲು ಕ್ರಮ ಜರುಗಿಸಲಾಗುತ್ತಿದೆ.

ಜನತಾ ಕರ್ಫ್ಯೂ: 'ಮೋದಿಗೆ ಈ ಐಡಿಯಾ ಹೊಳೆದಿದ್ದು ಹೇಗೆ'..?

ಕಾರಾಗೃಹದ ಎಲ್ಲ ಸಿಬ್ಬಂದಿ ಮತ್ತು ಕೈದಿಗಳಿಗೆ ಮಾಸ್ಕ್‌ ನೀಡಲಾಗಿದೆ. ವಿಶೇಷವೆಂದರೆ ಈ ಮಾಸ್ಕ್‌ಗಳನ್ನು ಕೈದಿಗಳೇ ತಯಾರಿಸಿದ್ದು, ಆರೋಗ್ಯ ಇಲಾಖೆ ಇದನ್ನು ಸ್ಟೆರಿಲೈಸ್‌ ಮಾಡಿಕೊಟ್ಟಿದೆ.

ವೈರಾಣು ಹಬ್ಬವುದನ್ನು ತಡೆಯಲು ಕೈದಿಗಳ ಭೇಟಿಗೆ ಬರುವ ಸಂಬಂಧಿಕರಿಗೆ ಮತ್ತು ಕುಟುಂಬಸ್ಥರಿಗೆ ಸದ್ಯ ಅವಕಾಶ ನಿರಾಕರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಇದೇ ಕಟ್ಟುನಿಟ್ಟಿನ ಕ್ರಮ ಇರಲಿದೆ ಎನ್ನುತ್ತಾರೆ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಪಿ.ರಂಗನಾಥ್‌.

ರೈಲ್ವೆ ನಿಲ್ದಾಣದಲ್ಲಿ ‘ಕೆನಡಾ ಪ್ರಜೆ’, ಜನರಲ್ಲಿ ಆತಂಕ

ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಸಾಮಾನ್ಯ ವಿಚಾರಣೆಗಾಗಿ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆ ತರಲಾಗುತ್ತಿಲ್ಲ. ಕೇವಲ ಸಾಕ್ಷಿ ಮತ್ತು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ. ಉಳಿದಂತೆ ವೀಡಿಯೋ ಕಾನ್‌್ಪರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗುತ್ತಿದೆ.

ಅನಿವಾರ್ಯ ಸಂದರ್ಭದಲ್ಲಿ ಹೊರ ಹೋದ ಕೈದಿಗಳು ಮತ್ತು ಸಿಬ್ಬಂದಿ ಮರಳಿ ಬರುವಾಗ ಕೈಕಾಲುಗಳನ್ನು ಸೋಪಿನಿಂದ ತೊಳೆದು ಸ್ವಚ್ಚವಾಗಿ ಒಳ ಪ್ರವೇಶಿಸುವಂತೆ ಸೂಚಿಸಲಾಗಿದೆ.

ಕೊರೋನಾ ವೈರಾಣು ತಡೆಗೆ ಸ್ವಚ್ಛತೆ ಅತಿ ಮುಖ್ಯವಾಗಿರುವುದರಿಂದ ಎಲ್ಲ ಕಾರಾಗೃಹಗಳಲ್ಲಿಯೂ ಇದೀಗ ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ

ಹೊಸ ಕೈದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕೊಠಡಿ:

ನಾನಾ ಪ್ರಕರಣಗಳ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಕಾರಾಗೃಹಕ್ಕೆ ಹೊಸದಾಗಿ ಆಗಮಿಸುತ್ತಿರುವ ವ್ಯಕ್ತಿಗಳನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಆ ಬಳಿಕವಷ್ಟೇ ಇತರರೊಂದಿಗೆ ಬಿಡಲಾಗುತ್ತಿದೆ. ಒಟ್ಟಾರೆ ಕೊರೋನಾ ತಡೆ ಸಂಬಂಧ ಕಾರಾಗೃಹಗಳಲ್ಲಿಯೂ ವ್ಯಾಪಕ ಮತ್ತು ಕಠಿಣವಾದ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

-ಗೋಪಾಲ್‌ ಯಡಗೆರೆ

Follow Us:
Download App:
  • android
  • ios