* 52 ಪ್ರಾಥ​ಮಿಕ ಕೇಂದ್ರ​ಗ​ಳಲ್ಲಿ ರಾರ‍ಯಪಿಡ್‌ ಆ್ಯಂಟಿ​ಜ​ನ್‌ ಟೆಸ್ಟ್‌* ಕುಂದಗೋಳ, ನವಲಗುಂದದಲ್ಲಿ 3 ವೆಂಟಿಲೇಟರ್‌ಗಳ ಸೌಲಭ್ಯ * ಕಾಳಜಿ ಕೇಂದ್ರಗಳ ಸ್ಥಾಪನೆ

ಧಾರವಾಡ(ಮೇ.17): ದಿನದಿಂದ ದಿನಕ್ಕೆ ಗ್ರಾಮಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ತಕ್ಷಣವೇ ಕೋವಿಡ್‌ ಪ್ರಕರಣಗಳನ್ನು ಗುರುತಿಸಲು ಜಿಲ್ಲೆಯ ಎಲ್ಲ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾರ‍ಯಟ್‌ (RAT ರಾರ‍ಯಪಿಡ್‌ಆ್ಯಂಟಿಜನ್‌ ಟೆಸ್ಟ್‌) ಪರೀಕ್ಷೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ವೈದ್ಯರ, ನೋಡಲ್‌ ಅಧಿಕಾರಿಗಳ ಸಭೆ ಜರುಗಿಸಿದ ನಂತರ ಈ ಕುರಿತು ಪ್ರಕಟಣೆ ನೀಡಿದ್ದಾರೆ. ಪ್ರತಿ ದಿನ ಸುಮಾರು 1330 ಜನರಿಗೆ ಗಂಟಲು ಮತ್ತು ಮೂಗು ದ್ರವ ಕೋವಿಡ್‌ (ಆರ್‌ಟಿಪಿಸಿಆರ್‌ ಮೂಲಕ) ಪರೀಕ್ಷೆ ಮಾಡಲು ಸರ್ಕಾರ ಜಿಲ್ಲೆಗೆ ಗುರಿ ನಿಗದಿಗೊಳಿಸಿದೆ. ಕೋವಿಡ್‌ ಪಾಸಿಟಿವ್‌ ಆಗಿರುವ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಿತರು, ಕೋವಿಡ್‌ ರೋಗ ಲಕ್ಷಣವಿರುವವರಿಗೆ ಮಾತ್ರ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಆದರೂ ಜಿಲ್ಲೆಯಲ್ಲಿ ಈಗ ಪ್ರತಿದಿನ ಸರಾಸರಿ ಸುಮಾರು 2400 ಜನರಿಗೆ ಕೋವಿಡ್‌ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಈಗ ಶೇ. 34ರಷ್ಟಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಜನರು ಕೋವಿಡ್‌ ಲಕ್ಷಣಗಳಿದ್ದರೂ ಸ್ಥಳೀಯ ವೈದ್ಯರಿಗೆ ತೋರಿಸಿ ಅವರು ಕೊಡುವ ಮಾತ್ರೆ ಸೇವಿಸಿ, ಸುಮ್ಮನಾಗುತ್ತಿದ್ದಾರೆ. ಅವರಿಗೆ ಬಂದಿರುವುದು ಕೋವಿಡ್‌ ಸೋಂಕು ಆಗಿದ್ದರೆ, ಸೋಂಕು ಹೆಚ್ಚು ಉಲ್ಬಣವಾದ ಮೇಲೆ ಕೋವಿಡ್‌ ಟೆಸ್ಟ್‌ಗೆ ಬರುತ್ತಾರೆ. ಟೆಸ್ಟ್‌ ವರದಿ ಬಂದು ಅವರಿಗೆ ಚಿಕಿತ್ಸೆ ಆರಂಭವಾಗುವ ಹೊತ್ತಿಗೆ ತುಂಬಾ ಸಮಯವಾಗಿ, ರೋಗಿ ಸ್ಥಿತಿ ಗಂಭಿರವಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿ ಕೋವಿಡ್‌ ಲಕ್ಷಣವೆನಿಸಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ, ಕೋವಿಡ್‌ ಟೆಸ್ಟ್‌ಗೆ ಒಳಪಡಬೇಕು ಎಂದು ಸೂಚಿ​ಸಿ​ದ್ದಾರೆ.

ಜುಲೈ ವೇಳೆಗೆ ಎಲ್ಲರಿಗೂ ಲಸಿಕೆ ಲಭ್ಯ: ಸಚಿವ ಜೋಶಿ

ವರದಿ ಬರುವವರೆಗೆ ಪ್ರತ್ಯೇಕವಾಗಿ ಇದ್ದು, ವೈದ್ಯರು ನೀಡಿರುವ ಮಾತ್ರೆಗಳನ್ನು ಸೇವಿಸಬೇಕು. ಸೋಂಕು ಕಾಣಿಸಿದ ಮೊದಲ 7 ದಿನ ಚಿಕಿತ್ಸೆಗೆ ಬಹು ಮುಖ್ಯವಾಗಿರುತ್ತವೆ. ವರದಿ ಬಂದ ತಕ್ಷಣ ಆರೋಗ್ಯ ಸ್ಥಿರತೆ ನೋಡಿ, ವೈದ್ಯರು ಆಸ್ಪತ್ರೆಗೆ ಅಥವಾ ಕೋವಿಡ್‌ ಕಾಳಜಿ ಕೇಂದ್ರಕ್ಕೆ ಹಾಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸಿಸಲು ಸೌಕರ್ಯವಿದ್ದರೆ ಹೋಮ್‌ ಐಸೀಲೇಶನ್‌ ಆಗಲು ಸಲಹೆ ನೀಡುತ್ತಾರೆ. ಹೋಮ ಐಸೋಲೇಶನ್‌ ಆದವರ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಅಗತ್ಯ ಸಲಹೆ, ಔಷಧಿ ನೀಡುತ್ತಾರೆ. ಅಗತ್ಯವೆನಿಸಿದಾಗ ಸಂಪರ್ಕಿಸಲು ದೂರವಾಣಿ ಸಂಖ್ಯೆ ನೀಡುತ್ತಾರೆ ಎಂದರು.

ಜಿಲ್ಲಾಡಳಿತ ಅನುಕೂಲ ಮಾಡಿಕೊಡುತ್ತಿದ್ದರೂ ಕೆಲವು ಜನರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೇ ಮನೆಯಲ್ಲಿದ್ದು, ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಉಸಿರಾಟ ಸಮಸ್ಯೆಗೆ ಇಡಾಗುತ್ತಾರೆ. ಜೊತೆಗೆ ಮನೆಯಲ್ಲಿದ್ದು, ಮನೆಯವರಿಗೂ ಸೋಂಕು ಹರಡುತ್ತಿದ್ದಾರೆ. ಇದು ತಪ್ಪು.

ಕಾಳಜಿ ಕೇಂದ್ರಗಳ ಸ್ಥಾಪನೆ..

ಜಿಲ್ಲಾ ಆಸ್ಪತ್ರೆ, ಕಿಮ್ಸ್‌ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಕ್ಸಿಜನ್‌ ಸೌಲಭ್ಯವಿರುವ 50 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಕುಂದಗೋಳ, ನವಲಗುಂದದಲ್ಲಿ 3 ವೆಂಟಿಲೇಟರ್‌ಗಳ ಸೌಲಭ್ಯ ನೀಡಲಾಗುತ್ತಿ​ದೆ. ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ತಲಾ 6 ಬೆಡ್‌ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ಕೋವಿಡ್‌ ಕಾಳಜಿ (ಕೆರ್‌) ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.