ಮೈಸೂರಿನಲ್ಲಿ ಅಪರೂಪದ ಬಿಳಿ ಅಳಿಲು ಪತ್ತೆಯಾಗಿದ್ದು, ಛಾಯಾಗ್ರಾಹಕರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಿಳಿ ಬಣ್ಣಕ್ಕೆ ಕಾರಣವಾದ 'ಲೌಕಿಸಮ್' ಮತ್ತು 'ಆಲ್ಬಿನಿಸಂ' ಸ್ಥಿತಿಗಳ ಬಗ್ಗೆ ಲೇಖನವು ವಿವರಿಸುತ್ತದೆ. ಈ ಹಿಂದೆ ನಗರದಲ್ಲಿ ನಿಜವಾದ ಆಲ್ಬಿನೋ ಅಳಿಲು ಕೂಡ ಕಂಡುಬಂದಿತ್ತು.
ಮೈಸೂರು (ಆ.29): ಅಪರೂಪದಲ್ಲಿ ಅಪರೂಪವಾದ ಬಿಳಿ ಅಳಿಲು ಮೈಸೂರಿನಲ್ಲಿ ಕಂಡುಬಂದಿದೆ. ನಗರದ ಪ್ರದೇಶವೊಂದರಲ್ಲಿ ಈ ಬಿಳಿ ಅಳಿಲು ಕಂಡು ಬಂದಿದ್ದು ಮೈಸೂರಿನ ‘ಕನ್ನಡಪ್ರಭ’ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಿಳಿ ಅಳಿಲಿನ ವಿಶೇಷತೆಗಳು: ಬಿಳಿ ಅಳಿಲುಗಳಲ್ಲಿ ಹೆಚ್ಚಾಗಿ ‘ಲೌಕಿಸಮ್’ ಎಂಬ ಸ್ಥಿತಿ ಇರುತ್ತದೆ. ಇದರಿಂದ ಚರ್ಮದಲ್ಲಿ ವರ್ಣದ್ರವ್ಯ ಕಡಿಮೆಯಾಗಿ ಮೈಯೆಲ್ಲಾ ಬಿಳಿ ಇರುತ್ತದೆ, ಆದರೆ ಕಣ್ಣುಗಳು ಸಾಮಾನ್ಯ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತವೆ. ಆದರೆ ಅಲ್ಬಿನೋ ಅಳಿಲುಗಳ ಕಣ್ಣುಗಳು ಕೆಂಪು ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ. ಇವು ಪ್ರಕೃತಿಯಲ್ಲಿ ಅತಿ ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಪ್ರಕೃತಿಯಲ್ಲಿ ಇವುಗಳಿಗೆ ರಕ್ಷಣಾತ್ಮಕ ಬಣ್ಣ (Camouflage) ಇಲ್ಲದಿರುವುದರಿಂದ, ಡೇಗೆ ಅಥವಾ ಹದ್ದುಗಳಂತಹ ಪರಭಕ್ಷಕ ಪ್ರಾಣಿಗಳಿಗೆ ಸುಲಭವಾಗಿ ಆಹಾರವಾಗುವ ಅಪಾಯ ಹೆಚ್ಚಿರುತ್ತದೆ
ಈ ಹಿಂದೆ ಮೈಸೂರಿನ ಹಳೆಯ ಡಿಸಿ ಕಚೇರಿ (Old DC Office) ಆವರಣದ ತೋಟದಲ್ಲಿ ಅತ್ಯಂತ ಅಪರೂಪದ ನಿಜವಾದ ಆಲ್ಬಿನೋ ಬಿಳಿ ಅಳಿಲು (True Albino White Squirrel) ಪ್ರತ್ಯಕ್ಷವಾಗಿತ್ತು. ಇದನ್ನು ಫೋಟೋಗ್ರಾಫರ್ ಒಬ್ಬರು ಸೆರೆಹಿಡಿದಿದ್ದರು. ವನ್ಯಜೀವಿಗಳಲ್ಲಿ ಸುಮಾರು 1 ಲಕ್ಷದಲ್ಲಿ ಒಂದಕ್ಕೆ ಮಾತ್ರ ಇಂತಹ ತಳೀಯ ವ್ಯತ್ಯಾಸ ಇರಲಿದ್ದು, ನಗರ ಪ್ರದೇಶದಲ್ಲಿ ಇದು ಕಂಡುಬಂದಿರುವುದು ಅತ್ಯಂತ ಆಶ್ಚರ್ಯ ತಂದಿದೆ.
