ಧಾರವಾಡ(ಜು.31): ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಆರಂಭಿಸಿರುವ ರ‍್ಯಾಪಿಡ್ ಆ್ಯಂಟಿಜನ್‌ ಕೊರೋನಾ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲು 12 ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದಕ್ಕಾಗಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ. 

ಕೋವಿಡ್‌-19 ನಿಗ್ರಹಿಸುವುದಕ್ಕಾಗಿ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಕುರಿತು ಗುರುವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆಯನ್ನು ಗುರಿಗಿಂತ ಹೆಚ್ಚು ಅಂದರೆ ಶೇ.158 ರಷ್ಟು ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದಾಗಿ ಹೆಚ್ಚು ಜನರಲ್ಲಿ ಪಾಸಿಟಿವ್‌ ಕಂಡು ಬರುತ್ತಿದೆ. ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಅನಗತ್ಯವಾದ ಸಂಚಾರವನ್ನು ನಿಯಂತ್ರಿಸಿ, ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಆಗಾಗ ಸ್ಯಾನಿಟೈಸರ್‌ ಅಥವಾ ಸೋಪಿನಿಂದ ಕೈ ತೊಳೆಯಬೇಕು. ಕಡ್ಡಾಯವಾಗಿ ಕನಿಷ್ಠ ಆರು ಅಡಿ ಅಂತರ ಕಾಪಾಡಬೇಕು. ಇದರಿಂದ ಕೊರೋನಾ ಸೋಂಕು ತಗಲುವುದು ಕಡಿಮೆಯಾಗುತ್ತದೆ. ಅನಗತ್ಯವಾಗಿ ಸೋಂಕಿನ ಕುರಿತು ಗೊಂದಲ, ಭಯ ಪಡುವುದು ತಪ್ಪುತ್ತದೆ ಎಂದು ಅವರು ಹೇಳಿದರು.

'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಶುಕ್ರವಾರದಿಂದ ಹುಬ್ಬಳ್ಳಿಯ ಎಂಟು ಪ್ರಮುಖ ಮಾರುಕಟ್ಟೆಪ್ರದೇಶಗಳಲ್ಲಿ ಮತ್ತು ಧಾರವಾಡ ನಗರದ ಪ್ರಮುಖ ನಾಲ್ಕು ಮಾರುಕಟ್ಟೆ ಪ್ರದೇಶಗಳಲ್ಲಿ ರ‍್ಯಾಪಿಡ್ ಆ್ಯಂಟಿಜನ್‌ ಕೊರೋನಾ ಪರೀಕ್ಷೆಯನ್ನು ಮುಂದುವರಿಸಲಾಗುವುದು. ಕೆಲವು ಪ್ರದೇಶಗಳಲ್ಲಿ ಅಂಗಡಿ, ವಾಣಿಜ್ಯ ಸಂಕೀರ್ಣ ಮತ್ತು ಬೀದಿಬದಿಯ ವ್ಯಾಪಾರಿಗಳು ರ‍್ಯಾಪಿಡ್ ಆ್ಯಂಟಿಜನ್‌ ಟೆಸ್ಟ್‌ಗೆ ಅಸಹಕಾರ ನೀಡುತ್ತಿರುವುದು ಮತ್ತು ತಮ್ಮ ಅಂಗಡಿಗಳನ್ನು ಆ ಸಮಯದಲ್ಲಿ ಮುಚ್ಚುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಮಾರ್ಕೆಟ್‌ ಪ್ರದೇಶದ ಪ್ರತಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ವಿಶೇಷ ತಂಡದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಯ ಪಿಎಸ್‌ಐ ಹಂತದ ಅಧಿಕಾರಿಗಳೊಂದಿಗೆ ಪೊಲೀಸ್‌ ಸಿಬ್ಬಂದಿ ಇರುತ್ತಾರೆ ಎಂದು ಅವರು ಹೇಳಿದರು.

ರ‍್ಯಾಪಿಡ್ ಆ್ಯಂಟಿಜನ್‌ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್‌ ಕಂಡುಬರುವ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಸ್ಥಳದಲ್ಲಿಯೇ ಸೀಲ್‌ಡೌನ್‌ ಮಾಡಿ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಬೀದಿಬದಿಯ ವ್ಯಾಪಾರಿಗಳ ಪ್ರದೇಶವನ್ನು ನಿರ್ಬಂಧಿಸಲಾಗುತ್ತದೆ. ಸೋಂಕು ಪಾಸಿಟಿವ್‌ ಬರುವ ವ್ಯಕ್ತಿಗಳಿಗೆ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಕ್ಷಣ ಏರ್ಪಾಡು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಮಾತನಾಡಿ, ರ‍್ಯಾಪಿಡ್ ಆ್ಯಂಟಿಜನ್‌ ಕೊರೋನಾ ಪರೀಕ್ಷೆಗೆ ಜಿಲ್ಲಾಡಳಿತ ಹಾಕಿಕೊಂಡಿರುವ ಕಾರ್ಯಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಪ್ರತ್ಯೇಕವಾಗಿ ಪೊಲೀಸ್‌ ಅಧಿಕಾರಿಗಳನ್ನು ಮತ್ತು ಪೊಲೀಸ್‌ ಸಿಬ್ಬಂದಿ ನೇಮಿಸಲಾಗುವುದು. ಯಾವುದೇ ರೀತಿಯ ಅಸಹಕಾರ, ತೊಂದರೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಲು ಚಾಲುಕ್ಯ ವಾಹನಗಳನ್ನು ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್‌ ಮುಖ್ಯ ಆಡಳಿತಾಧಿಕಾರಿ ಡಾ. ಷಣ್ಮುಖ, ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರರಾಣಿ, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಇದ್ದರು.

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಹಾವಳಿ ಜೋರಾಗುತ್ತಿದಂತೆ ಜಿಲ್ಲಾಡಳಿತ ಆ್ಯಂಟಿಜನ್‌ ಟೆಸ್ವ್‌ ಪ್ರಾರಂಭಿಸಿದೆ. ನಗರದ ಜನನಿಬಿಡ ಪ್ರದೇಶ, ಮಾರುಕಟ್ಟೆಗಳಲ್ಲಿ ಆ್ಯಂಟಿಜನ್‌ ಟೆಸ್ವ್‌ ಮಾಡಲಾಗುತ್ತಿದೆ. ಆದರೆ, ಇಲ್ಲಿನ ದುರ್ಗದಬೈಲನಲ್ಲಿ ಟೆಸ್ಟ್‌ ಮಾಡಿದಾಗ ಎಂಟು ಜನರಿಗೆ ಪಾಸಿಟಿವ್‌ ಬಂದಿದೆ. ಇದರಿಂದ ಉಳಿದ ವ್ಯಾಪಾರಸ್ಥರು ಹೆದರಿ ಅಂಗಡಿಗಳ ಬಾಗಿಲು ಮುಚ್ಚಿಕೊಂಡು ದಿಕ್ಕಾಪಾಲಾದರು.

ಹುಬ್ಬಳ್ಳಿಯ ದುರ್ಗದ ಬೈಲ್‌, ಜನತಾಬಜಾರ್‌ ಬ್ರಾಡ್‌ವೇ ಸೇರಿದಂತೆ ಹುಬ್ಬಳ್ಳಿ- ಧಾರವಾಡ ಮಹಾನಗರದ 15 ಕಡೆಗಳಲ್ಲಿ ಧಾರವಾಡ ಜಿಲ್ಲಾಡಳಿತ ಗುರುವಾರದಿಂದ ರ‍್ಯಾಪಿಡ್ ಟೆಸ್ವ್‌ ಆರಂಭಿಸಿದೆ. ಮೊಬೈಲ್‌ ಫೀವರ್‌ ಕ್ಲಿನಿಕ್‌ ಬಸ್‌ ಮೂಲಕ ನಗರದ ಅಂಗಡಿಕಾರರು ಹಾಗೂ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ತಪಾಸಣೆಗೆ ಬಹುತೇಕರು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳು ಅವರ ಮನವೊಲಿಸಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಅದರಂತೆ ಬ್ರಾಡ್‌ವೇಯಿಂದ ದುರ್ಗದಬೈಲವರೆಗೂ ಸುಮಾರು 100ಕ್ಕೂ ಹೆಚ್ಚು ಜನರ ಟೆಸ್ಟ್‌ ಮಾಡಲಾಗಿದೆ. ಇದರಲ್ಲಿ 11 ಜನರಿಗೆ ಕೊರೋನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಕರೆದೊಯ್ಯಲಾಯಿತು.

ಪಾಸಿಟಿವ್‌ ಬರುತ್ತಿದ್ದಂತೆ ಸೋಂಕಿತರನ್ನು ಆ್ಯಂಬುಲೆಸ್ಸ್‌ನಲ್ಲಿ ಚಿಕಿತ್ಸೆಗೆ ಸಿಬ್ಬಂದಿ ಕರೆದುಕೊಂಡು ಹೋದರು. ಅಲ್ಲದೇ, ಸ್ಥಳದಲ್ಲೇ ಇದ್ದ ಅಧಿಕಾರಿಗಳು ಪಾಸಿಟವ್‌ ಬಂದ್‌ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸೀಲ್‌ಡೌನ್‌ ಮಾಡಿದರು. ಇದಾದ ಬಳಿಕ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿ ದಿಕ್ಕಾಪಾಲಾಗಿ ಹೋದರು.

ದುರ್ಗದಬೈಲ್‌ನಲ್ಲಿ ಟೆಸ್ಟ್‌ ವೇಳೆ 8 ಜನರಿಗೆ ಪಾಸಿಟವ್‌ ಬರುತ್ತಿದ್ದಂತೆ ಇಡೀ ಮಾರುಕಟ್ಟೆಗೆ ಸ್ತಬ್ಧವಾಯ್ತು. ಹೀಗಾಗಿ ಭಯಭೀತರಾದ ವ್ಯಾಪಾರಸ್ಥರು ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಮನೆಗೆ ತೆರಳಿದರು. ಬೆಳಗ್ಗೆಯಿಂದ ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಕೆಲ ಕ್ಷಣಗಳಲ್ಲೆ ಖಾಲಿ ಖಾಲಿಯಾಗಿ ಬಿಕೋ ಎನ್ನುವ ದೃಶ್ಯ ಕಂಡುಬಂತು. ಜತೆಗೆ ಟೆಸ್ಟ್‌ ಮಾಡಿಸಿಕೊಂಡರೆ ತಮ್ಮದೆಲ್ಲಿ ಪಾಸಿಟಿವ್‌ ಬರುತ್ತದೆ. ತಮ್ಮನ್ನೇಲ್ಲಿ ಕರೆದುಕೊಂಡು ಹೋಗುತ್ತಾರೆ ಎಂಬ ಭೀತಿಯಿಂದಲೂ ಕೆಲ ಅಂಗಡಿಕಾರರು ತಮ್ಮ ವ್ಯಾಪಾರ-ವಹಿವಾಟು ಬಂದ್‌ ಮಾಡಿಕೊಂಡು ತೆರಳಿದ್ದು ಕಂಡು ಬಂತು. ಒಟ್ಟಿನಲ್ಲಿ ಕೆಲವರು ತಮ್ಮ ಏರಿಯಾದಲ್ಲಿ ಪಾಸಿಟಿವ್‌ ಬಂದ ಕಾರಣಕ್ಕೆ ಭಯದಿಂದ ಅಂಗಡಿ ಬಂದ್‌ ಮಾಡಿದರೆ, ಕೆಲವರು ಟೆಸ್ಟ್‌ಗೆ ಹೆದರಿ ಬಂದ್‌ ಮಾಡಿಕೊಂಡು ತೆರಳುತ್ತಿದ್ದ ದೃಶ್ಯ ಕಂಡು ಬಂದಿದ್ದಂತೂ ಸತ್ಯ.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹುಬ್ಬಳ್ಳಿಯ ದುರ್ಗದ ಬೈಲ್‌ಗೆ ಭೇಟಿ ನೀಡಿ ರಾರ‍ಯಪಿಡ್‌ ಟೆಸ್ಟ್‌ ಪರಿಶೀಲನೆ ನಡೆಸಿದರು. ಅಲ್ಲದೇ, ವ್ಯಾಪ್ಯಾರಸ್ಥರು ಆ್ಯಂಟಿಜೆನ್‌ ಟೆಸ್ಟ್‌ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ತಹಸೀಲ್ದಾರ್‌ ಶಶಿಧರ ಮಾಡ್ಯಾಳ ಸೇರಿದಂತೆ ಮತ್ತಿತರ ಅಧಿಕಾರಿಗಳಿದ್ದರು.

ಆಟೋದಲ್ಲಿದ್ದ ಐವರಿಗೂ ಲಕ್ಷಣ!

ನಗರದಲ್ಲಿ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ವ್‌ ವೇಳೆ ಆಟೋದಲ್ಲಿದ್ದ ಐವರಿಗೂ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಐವರನ್ನು ಜಿಲ್ಲಾಡಳಿತ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿದೆ. ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾರ‍ಯಪಿಡ್‌ ಟೆಸ್ಟ್‌ ಮಾಡುತ್ತಿದ್ದಾಗ ಆಟೋದಲ್ಲಿ ಐವರು ಸಂಚರಿಸುತ್ತಿದ್ದರು. ಆಟೋವನ್ನು ನಿಲ್ಲಿಸಿದ ಜಿಲ್ಲಾಡಳಿತದ ಸಿಬ್ಬಂದಿ ಐವರನ್ನು ರ‍್ಯಾಪಿಡ್ ಟೆಸ್ಟ್‌ಗೆ ಒಳಪಡಿಸಿತ್ತು. ಈ ವೇಳೆ ಐವರಿಗೂ ಕೊರೋನಾ ಲಕ್ಷಣಗಳು ಕಂಡು ಬಂದವು. ಈ ಹಿನ್ನೆಲೆಯಲ್ಲಿ ಐವರನ್ನು ಆ್ಯಂಬುಲೆಸ್ಸ್‌ನಲ್ಲಿ ಕರೆದೊಯ್ಯಲಾಯಿತು.