ರಾಮನಗರದಲ್ಲಿ ನರಭಕ್ಷಕ ಚಿರತೆಯೊಂದು ತೋಟದ ಮನೆಯ ಗೇಟ್ ಬಳಿ ಹೊಂಚು ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವಾರವಷ್ಟೇ ಅರ್ಚಕರೊಬ್ಬರನ್ನು ಬಲಿಪಡೆದಿದ್ದ ಈ ಚಿರತೆಯಿಂದಾಗಿ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ಚಿರತೆಯನ್ನು ಕೂಡಲೇ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಮನಗರ (ಅ.16): ಕಾಡಿನಲ್ಲಿ ಓಡಾಡಿಕೊಂಡಿರಬೇಕಾದ ಚಿರತೆಗಳು ಈಗ ಊರೊಳಗೆ ನುಗ್ಗಿ ಮನೆಗಳ ಗೇಟ್ ಕಾಯುವ ಸ್ಥಿತಿ ಎದುರಾಗಿದೆ! ಆದರೆ ಇದು ಮನೆಗೆ ಕಾವಲು ಕಾಯಲು ಅಲ್ಲ, ಬದಲಿಗೆ ಮನುಷ್ಯರನ್ನೇ ಬೇಟೆಯಾಡಿ ಪ್ರಾಣ ತೆಗೆಯಲು!

ಹೌದು, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ನರಭಕ್ಷಕ ಚಿರತೆಯೊಂದು ರಾಜಾರೋಷವಾಗಿ ತಿರುಗಾಡುತ್ತಿದ್ದು, ತೋಟದ ಮನೆಯೊಂದರ ಕಾಂಪೌಂಡ್ ಗೇಟ್ ಬಳಿ ಹೊಂಚು ಹಾಕಿ ಓಡಾಡುತ್ತಿರುವ ಭಯಾನಕ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಕಂಡು ಗ್ರಾಮಸ್ಥರ ಎದೆಬಡಿತವೇ ನಿಂತುಹೋಗುವಂತಾಗಿದೆ.

ತೋಟದ ಮನೆ ಗೇಟ್ ಬಳಿ ಹೊಂಚು ಹಾಕಿದ ಚಿರತೆ!

ಮಾಗಡಿ ತಾಲ್ಲೂಕಿನ ಚಕ್ರಬಾವಿ ಸಮೀಪದ ಬಿರೇಶ್ವರ ದೇವಸ್ಥಾನದ ಬಳಿ ಇರುವ ಉಷಾರಾಣಿ ಎಂಬುವವರಿಗೆ ಸೇರಿದ ತೋಟದ ಮನೆಯ ಗೇಟ್ ಬಳಿ ಈ ಘಟನೆ ನಡೆದಿದೆ. ತಡರಾತ್ರಿ ಆಹಾರ ಅರಸಿ ಬಂದ ಚಿರತೆ, ಗೇಟ್ ಮುಂದೆ ಅತ್ತಿಂದಿತ್ತ ಶಿಕಾರಿಗಾಗಿ ಹೊಂಚು ಹಾಕಿ ನಿಂತಿದೆ. ನಾಯಿಗಳು ಬೊಗಳುವ ಶಬ್ದ ಕೇಳಿ ಮನೆಯವರು ಸಿಸಿಟಿವಿ ಪರಿಶೀಲಿಸಿದಾಗ, ಬೃಹತ್ ಗಾತ್ರದ ಚಿರತೆಯೊಂದು ಗೇಟ್ ಬಳಿಯೇ ಸುತ್ತಾಡುತ್ತಿರುವುದು ಕಂಡುಬಂದಿದೆ.

ಕಳೆದ ವಾರವಷ್ಟೇ ಅರ್ಚಕನ ಬಲಿ ಪಡೆದಿದ್ದ ಚಿರತೆ!

ಈ ಭಾಗದಲ್ಲಿ ಚಿರತೆ ಓಡಾಟ ಹೊಸದೇನಲ್ಲವಾದರೂ, ಗ್ರಾಮಸ್ಥರಲ್ಲಿ ಆತಂಕ ನೂರ್ಮಡಿಯಾಗಲು ಬಲವಾದ ಕಾರಣವಿದೆ. ಕಳೆದ ವಾರವಷ್ಟೇ ಇದೇ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಅರ್ಚಕರಾಗಿದ್ದ ಶಿವಸ್ವಾಮಿ ಎಂಬುವವರ ಮೇಲೆ ಇದೇ ನರಭಕ್ಷಕ ಚಿರತೆ ದಾಳಿ ಮಾಡಿ, ಬರ್ಬರವಾಗಿ ಕೊಂದು ಹಾಕಿತ್ತು. ಇದೀಗ ಅದೇ ಚಿರತೆ ಅಕ್ಕಪಕ್ಕದ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ವಾಸನೆಯನ್ನು ಅರಸಿಕೊಂಡು ಮನೆಗಳ ಬಳಿಯೇ ಬರುತ್ತಿದೆ ಎಂದು ಜನ ಕಣ್ಣೀರಿಡುತ್ತಿದ್ದಾರೆ.

ಹೊರಬರಲು ಹೆದರುತ್ತಿರುವ ಗ್ರಾಮಸ್ಥರು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

  • ಚಿರತೆಯ ಈ ರಂಪಾಟದಿಂದಾಗಿ ಚಕ್ರಬಾವಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಜೆ 6 ಗಂಟೆಯಾಗುತ್ತಿದ್ದಂತೆ ಮನೆಯ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ.
  • ಮುಂಜಾನೆ ಹಾಲು ಹಾಕಲು ಹೋಗುವವರು ಹಾಗೂ ತೋಟಗಳಿಗೆ ಕೆಲಸಕ್ಕೆ ಹೋಗುವ ರೈತರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
  • ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನು ಪೋಷಕರು ಒಬ್ಬರೇ ಕಳುಹಿಸಲು ಭಯಪಡುತ್ತಿದ್ದಾರೆ.
  • ಅರ್ಚಕ ಶಿವಸ್ವಾಮಿ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತುಕೊಳ್ಳಬೇಕಿದ್ದ ಅರಣ್ಯ ಇಲಾಖೆ, ಚಿರತೆ ಸೆರೆಹಿಡಿಯಲು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಆಗ್ರಹ:

'ಇನ್ನೊಬ್ಬರ ಪ್ರಾಣ ಹೋಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಬೋನು ಇಟ್ಟು ಈ ನರಭಕ್ಷಕ ಚಿರತೆಯನ್ನು ಸೆರೆಹಿಡಿಯಬೇಕು ಅಥವಾ ಸ್ಥಳದಲ್ಲೇ ಕಂಡಲ್ಲಿ ಗುಂಡು ಹಾರಿಸಬೇಕು' ಎಂದು ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.