ಚನ್ನಗಿರಿಯಲ್ಲಿ ಐದು ರೂಪಾಯಿಯ ಸ್ನ್ಯಾಕ್ಸ್ ಪ್ಯಾಕೆಟ್‌ನಲ್ಲಿದ್ದ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ. ತಾಯಿ ಗಮನಿಸುವ ಮುನ್ನವೇ ಮಗುವಿನ ಗಂಟಲಲ್ಲಿ ಆಟಿಕೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದು, ಪೋಷಕರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ದಾವಣಗೆರೆ (ನ.27): ಆಟಿಕೆ ವಸ್ತು ಇರುವ ಸ್ನ್ಯಾಕ್ಸ್ ಪ್ಯಾಕೆಟ್‌ಗಳನ್ನು ಮಕ್ಕಳಿಗೆ ನೀಡುವ ಮುನ್ನ ಪೋಷಕರು ತೀವ್ರ ಎಚ್ಚರಿಕೆ ವಹಿಸಬೇಕಾದ ದಾರುಣ ಘಟನೆ ನಡೆದಿದೆ. ಚನ್ನಗಿರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಐದು ರೂಪಾಯಿಯ ಸ್ನ್ಯಾಕ್ಸ್ ಪ್ಯಾಕೆಟ್‌ನಲ್ಲಿದ್ದ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಮಗು ಮೃತಪಟ್ಟಿದ್ದು, ಈ ಕುರಿತ ಎಚ್ಚರಿಕೆ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬಯಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೌಸರ್ ಮಸೀದಿ ಬಳಿ ಕಳೆದ ಮೂರು ದಿನಗಳ ಹಿಂದೆ ಈ ದುರ್ಘಟನೆ ಸಂಭವಿಸಿದೆ. ಕಟ್ಟಡ ಕಾರ್ಮಿಕ ಜಮೀರ್ ಅವರ ನಾಲ್ಕು ವರ್ಷದ ಮಗು ಅಲಿಝಾ ಮೃತಪಟ್ಟ ಮಗು.

ತಾಯಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಗು ಸ್ನ್ಯಾಕ್ಸ್ ಪ್ಯಾಕೆಟ್ ತೆಗೆದುಕೊಂಡು ತಿನ್ನುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೋಟು ಪತ್ಲು ಹೆಸರಿನ ಐದು ರೂಪಾಯಿಯ ಸ್ನ್ಯಾಕ್ಸ್ ಪ್ಯಾಕೆಟ್ ತೆರೆದು ತಿನ್ನುತ್ತಿದ್ದ ವೇಳೆ, ಪ್ಯಾಕೆಟ್‌ನಲ್ಲಿದ್ದ ಚಿಕ್ಕದಾದ ಆಟಿಕೆಯ ಚೆಂಡನ್ನು ಮಗು ನುಂಗಿದೆ. ತಾಯಿ ಗಮನಿಸುವ ಹೊತ್ತಿಗೆ ಮಗು ಅಲಿಝಾ ಮೃತಪಟ್ಟಿತ್ತು. ತಾಯಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಆಟಿಕೆಯನ್ನು ಹೊರತೆಗೆದರಾದರೂ, ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿರುವುದು ದೃಢಪಟ್ಟಿದೆ.

ದೂರು ದಾಖಲಿಸದೆ ಅಂತ್ಯಕ್ರಿಯೆ; ವೈರಲ್ ಪೋಸ್ಟ್ ಬಳಿಕ ಪ್ರಕರಣ ಬೆಳಕಿಗೆ

ಈ ಘಟನೆಗೆ ಸಂಬಂಧಿಸಿದಂತೆ ಪೋಷಕರು ಯಾವುದೇ ದೂರು ದಾಖಲಿಸದೆ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಇದಾದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಎಚ್ಚರಿಕೆ ಸಂದೇಶವು ವೈರಲ್ ಆದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸಣ್ಣ ಮಕ್ಕಳಿರುವ ಪೋಷಕರು ಸ್ನ್ಯಾಕ್ಸ್ ಪ್ಯಾಕೆಟ್‌ಗಳ ಒಳಗೆ ಬರುವ ಸಣ್ಣ ಆಟಿಕೆಗಳು ಅಥವಾ ಚೆಂಡುಗಳಿಂದ ಉಸಿರುಗಟ್ಟುವ ಅಪಾಯವಿರುವುದರಿಂದ ಮಕ್ಕಳನ್ನು ಅವುಗಳಿಂದ ದೂರವಿಡುವಂತೆ ಎಚ್ಚರಿಕೆ ನೀಡಲಾಗುತ್ತಿದೆ.