ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಅವರ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಾದ ಬೆಂಕಿ ಅವಘಡವೆಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯು ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದ್ದು, ಈ ಸಂಬಂಧ ಆಕೆಯ ಪ್ರಿಯಕರ, ಕೇರಳ ಮೂಲದ ಕರ್ನಲ್ ಕುರೈಯನ್ನು ಬಂಧಿಸಲಾಗಿದೆ.

ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟೆಕ್ಕಿ ಮಹಿಳೆಯ ನಿಗೂಢ ಸಾವು ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ದೊರೆತಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದ ಟೆಕ್ಕಿ ಶರ್ಮಿಳಾ ಅವರ ಸಾವು, ವಾಸ್ತವವಾಗಿ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶರ್ಮಿಳಾರನ್ನು ಪ್ರೀತಿಸುತ್ತಿದ್ದ ಕರ್ನಲ್ ಕುರೈ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ಮೂಲದವನು ಎಂದು ತಿಳಿದುಬಂದಿದೆ. ಶರ್ಮಿಳಾ ಕಳೆದ ಎರಡು ವರ್ಷಗಳಿಂದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ವಾಸವಿದ್ದರು. ಆರೋಪಿ ಕರ್ನಲ್ ಕುರೖ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿತ್ತು. ಆದರೆ ಯುವಕ ಕುರೈ ಶರ್ಮಿಳನ್ನು ಪ್ರೀತಿ ಮಾಡ್ತಿದ್ದ. ಈ ವಿಚಾರ ತಿಳಿಯದ ಟೆಕ್ಕಿ ಶರ್ಮಿಳಾ ಕೊಲೆಯಾಗಿದ್ದಾಳೆ.

ಶರ್ಮಿಳಾ ಯಾರು?

ಮೃತ ಶರ್ಮಿಳಾ (34) ಅವರು ಮಂಗಳೂರಿನ ಕಾವೂರು ಮೂಲದವರು. ಕಳೆದ ಒಂದೂವರೆ ವರ್ಷಗಳಿಂದ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಮನೆ ಸಮೀಪದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಶರ್ಮಿಳಾಗೆ ರಜೆ ಇದ್ದು, ಆಕೆಯ ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇದ್ದರು.

ಘಟನೆ ಹೇಗಿತ್ತು?

ಶನಿವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ, ಮನೆಯ ಒಂದು ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ಶರ್ಮಿಳಾ ಆ ಕೋಣೆಯತ್ತ ತೆರಳಲು ಯತ್ನಿಸಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮನೆ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಕತ್ತಲೆ ಮತ್ತು ದಟ್ಟ ಹೊಗೆಯಿಂದಾಗಿ ಕಿಟಕಿ ಅಥವಾ ಬಾಗಿಲು ತೆರೆಯಲು ಸಾಧ್ಯವಾಗದೆ, ಶರ್ಮಿಳಾ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಮೊದಲಿಗೆ ಶಾರ್ಟ್ ಸರ್ಕ್ಯೂಟ್ ಶಂಕೆ

ಪ್ರಾಥಮಿಕ ತನಿಖೆಯಲ್ಲಿ ಇದು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅವಘಡ ಎಂದು ಹೇಳಲಾಗಿತ್ತು. ಸೋಕೋ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (FSL) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಸ್ಪೋಟಕ ಟ್ವಿಸ್ಟ್

ಆದರೆ, ಮರಣೋತ್ತರ ಪರೀಕ್ಷೆ ವರದಿ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಶರ್ಮಿಳಾ ಸಾವಿಗೆ ಕಾರಣ ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ದೃಢಪಟ್ಟಿದೆ. ಪೊಲೀಸರು ತನಿಖೆಯನ್ನು ಗಂಭೀರಗೊಳಿಸಿದಾಗ, ಶರ್ಮಿಳಾ ಜೀವನದಲ್ಲಿ ಕರ್ನಲ್ ಕುರೈ ಎಂಬ ಯುವಕನ ಪಾತ್ರ ಬೆಳಕಿಗೆ ಬಂದಿದೆ. ಆತ ಶರ್ಮಿಳಾರನ್ನು ಪ್ರೀತಿಸುತ್ತಿದ್ದನು. ಆದರೆ ಶರ್ಮಿಳಾಗೆ ಈ ವಿಚಾರವೇ ಗೊತ್ತಿರಲಿಲ್ಲ. ಬೆಂಕಿ ಅವಘಡದಂತೆ ಕಾಣುವಂತೆ ಮಾಡಿ ಕೊಲೆ ಮುಚ್ಚಿಹಾಕಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಬಂಧನ

ಸಾಕ್ಷ್ಯಾಧಾರಗಳ ಆಧಾರದಲ್ಲಿ ಪೊಲೀಸರು ಕೇರಳ ಮೂಲದ ಆರೋಪಿ ಕರ್ನಲ್ ಕುರೈಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ ಕಾರಣ, ಘಟನೆ ನಡೆದ ರೀತಿ ಮತ್ತು ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಈ ಪ್ರಕರಣ ಆರಂಭದಲ್ಲಿ ಅಪಘಾತದಂತೆ ಕಂಡರೂ, ತನಿಖೆ ಮುಂದುವರಿದಂತೆ ಕೊಲೆ ಎಂಬ ಸತ್ಯ ಬಹಿರಂಗವಾಗಿರುವುದು ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಶೀಘ್ರದಲ್ಲೇ ಸಂಪೂರ್ಣ ಪ್ರಕರಣದ ವಿವರವನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.