ಬೆಂಗಳೂರಿನ ಪ್ರತಿಷ್ಠಿತ ಬಯೋಕಾನ್ ಕಂಪನಿಯ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅನಂತಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಡಿ.30): ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಂಪನಿಯಾದ ‘ಬಯೋಕಾನ್’ (Biocon) ಆವರಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಂಪನಿಯ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 26 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ
ಮೃತ ಯುವಕನನ್ನು ಬೆಂಗಳೂರಿನ ಬನಶಂಕರಿ ಮೂಲದ ಅನಂತಕುಮಾರ್ (26) ಎಂದು ಗುರುತಿಸಲಾಗಿದೆ. ಅನಂತಕುಮಾರ್ ಬಯೋಕಾನ್ ಕಂಪನಿಯಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕಂಪನಿಯ ಕೆಫೆಟೇರಿಯಾ (Cafeteria) ಭಾಗದ ಬಾಲ್ಕನಿಯಲ್ಲಿ ನಿಂತು ತಮ್ಮ ಗೆಳತಿಯೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಆರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳದಲ್ಲೇ ಸಾವು
ಬಹಳ ಎತ್ತರದಿಂದ ಕೆಳಕ್ಕೆ ಬಿದ್ದ ರಭಸಕ್ಕೆ ಅನಂತಕುಮಾರ್ ಅವರ ತಲೆ ಮತ್ತು ದೇಹಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಕಂಪನಿಯ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದರೂ ಸಹ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ದೃಶ್ಯ ಕಂಡು ಸ್ಥಳದಲ್ಲಿದ್ದ ಇತರ ಉದ್ಯೋಗಿಗಳು ದಿಗ್ಭ್ರಮೆಗೊಂಡಿದ್ದಾರೆ. ಇನ್ನು ಘಟನೆ ನಡೆದ ವೇಳೆ ಅನಂತಕುಮಾರ್ ಅವರು ಗೆಳತಿಯೊಂದಿಗೆ ಮಾತನಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಅವರು ಕಾಲು ಜಾರಿ ಬಿದ್ದಿದ್ದಾರೆಯೇ ಅಥವಾ ಈ ಸಾವಿನ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪ್ರತ್ಯಕ್ಷದರ್ಶಿಯಾಗಿರುವ ಗೆಳತಿಯ ಹೇಳಿಕೆಯು ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾಗಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರತಿಷ್ಠಿತ ಕಂಪನಿಯಲ್ಲೇ ಇಂತಹ ದುರಂತ ನಡೆದದ್ದು ಟೆಕ್ಕಿಗಳ ವಲಯದಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.
ಕಂಪನಿ ಹೇಳಿಕೆ:
ಬೆಂಗಳೂರಿನಲ್ಲಿ ನಮ್ಮ ಉದ್ಯೋಗಿಯೊಬ್ಬರು ನಿಧನರಾದ ಬಗ್ಗೆ ನಮಗೆ ತೀವ್ರ ದುಃಖವಾಗಿದೆ. ಈ ಅತ್ಯಂತ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಅವರೊಂದಿಗೆ ನಾವಿದ್ದೇವೆ ಎಂಬ ಭರವಸೆ ನಿಡಿದ್ದೇವೆ. ಆದರೆ ಈ ವಿಚಾರವು ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿರುವುದರಿಂದ, ನಾವು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.


