ಬೆಂಗಳೂರಿನ ರಾಮ ಮೂರ್ತಿನಗರದ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದೆ. ಈ ದುರ್ಘಟನೆಯಲ್ಲಿ ಉಸಿರುಗಟ್ಟಿ ಮಂಗಳೂರು ಮೂಲದ 34 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಮೃತಪಟ್ಟಿದ್ದಾರೆ.
ಬೆಂಗಳೂರು: ಮನೆಯಲ್ಲಿ ಏಕಾಏಕಿ ಬೆಂಕಿ ಹಾಗೂ ದಟ್ಟವಾದ ಹೊಗೆ ತುಂಬಿಕೊಂಡು ಮಹಿಳೆ ಉಸಿರು ಗಟ್ಟಿ ಮೃತಪಟ್ಟಿರುವ ಘಟನೆ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರಿನ ಕಾವೂರು ಮೂಲದ ಶರ್ಮಿಳಾ (34) ಮೃತರಾಗಿದ್ದಾರೆ. ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ ಮೆಂಟ್‌ನಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದ್ದಕ್ಕಿದಂತೆ ಕಾಣಿಸಿಕೊಂಡ ಬೆಂಕಿ
ಶರ್ಮಿಳಾ ಒಂದೂವರೆ ವರ್ಷದಿಂದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ತಮ್ಮ ಮನೆ ಸಮೀಪದ ಪದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದರಿಂದ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಒಬ್ಬರೇ ಇದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಕೋಣೆಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿದೆ. ಆಗ ಪಕ್ಕದ ಕೋಣೆಯಲ್ಲಿದ್ದ ಶರ್ಮಿಳಾ ಕೂಡಲೇ ಆ ಕೋಣೆ ಕಡೆ ಬರಲು ಮುಂದಾಗಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶಾರ್ಟ್ ಸರ್ಕ್ಯೂಟ್ ಸಾಧ್ಯತೆ
ಹೀಗಾಗಿ ಕತ್ತಲೆಯಲ್ಲಿ ಕಿಟಕಿ ಹಾಗೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಮನೆಯ ತುಂಬೆಲ್ಲ ದಟ್ಟವಾದ ಹೊಗೆ ಆವರಿಸಿದ್ದ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಕೆಲಸ ಅರಸಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ಮನೆಯ ರೂಮ್ ನಲ್ಲಿ ಬೆಡ್ ,ಕರ್ಟನ್ ಸೇರಿದಂತೆ ಎಲ್ಲಾ ಸುಟ್ಟು ಹೋಗಿವೆ.
ಇದನ್ನೂ ಓದಿ: ವೈದ್ಯನ ಮೊಬೈಲ್ ಪ್ರೀತಿ, ಸ್ಟ್ರೇಚ್ಚರ್ ಮೇಲೆ ರೋಗಿಯ ನರಳಾಟ! ಸರ್ಕಾರಿ ಜಿಲ್ಲಾಸ್ಪತ್ರೆಯ ವಿಡಿಯೋ ವೈರಲ್
ಇದನ್ನೂ ಓದಿ: ಬೆಂಗಳೂರಿನ ಚಿತ್ರಮಂದಿರದ ಲೇಡಿಸ್ ಟಾಯ್ಲೆಟ್‌ನಲ್ಲಿ ಗುಪ್ತ ಕ್ಯಾಮರಾ; ಕಾಮುಕನಿಗೆ ಬಿತ್ತು ಧರ್ಮದೇಟು!


