ರಾಮದೇವರ ಬೆಟ್ಟದ ದೇಗುಲ ಅಭಿವೃದ್ಧಿ ಸಮಿತಿ ರದ್ದು: ಸಚಿವ ಅಶ್ವತ್ಥ್‌ರಿಂದ ಡಿಸಿಗೆ ಪತ್ರ
ರಾಮನಗರ ಕ್ಷೇತ್ರ ಬಿಜೆಪಿಯಲ್ಲಿನ ಭಿನ್ನಮತ ಮತ್ತಷ್ಟು ತೀವ್ರ ಸ್ವರೂಪ ಪಡೆಯಲು ಕಾರಣವಾಗಿದ್ದ ರಾಮದೇವರ ಬೆಟ್ಟದ ದೇವಾಲಯ ಅಭಿವೃದ್ಧಿ ಸಮಿತಿಯನ್ನು ಕೊನೆಗೂ ರದ್ದುಗೊಳಿಸಲಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಮಾ.05): ರಾಮನಗರ ಕ್ಷೇತ್ರ ಬಿಜೆಪಿಯಲ್ಲಿನ ಭಿನ್ನಮತ ಮತ್ತಷ್ಟು ತೀವ್ರ ಸ್ವರೂಪ ಪಡೆಯಲು ಕಾರಣವಾಗಿದ್ದ ರಾಮದೇವರ ಬೆಟ್ಟದ ದೇವಾಲಯ ಅಭಿವೃದ್ಧಿ ಸಮಿತಿಯನ್ನು ಕೊನೆಗೂ ರದ್ದುಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಶ್ರೀ ರಾಮದೇವರ ಬೆಟ್ಟದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ರಚಿಸಿರುವ ದೇವಸ್ಥಾನದ ಅಭಿವೃದ್ಧಿ ಸಮಿತಿಯನ್ನು ಮುಂದಿನ ಆದೇಶದವರೆವಿಗೂ ರದ್ದುಗೊಳಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಸಚಿವರು ಪಕ್ಷ ಹಾಗೂ ತಮ್ಮ ವಿರುದ್ಧ ಮುನಿಸಿಕೊಂಡು ಅಸಮಾಧಾನ ಹೊರ ಹಾಕಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಕೋಪವನ್ನು ಶಮನ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣರವರ ನೇತೃತ್ವದಲ್ಲಿ 150 ಯಾತ್ರಾರ್ಥಿಗಳ ತಂಡ ಅಯೋಧ್ಯೆ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ ಸಮರ್ಪಿಸಿದ್ದರು. ಅಲ್ಲಿಂದ ಬಂದ ತರುವಾಯ ಸಚಿವರು ರಾಮದೇವರ ಬೆಟ್ಟವನ್ನು ಅಯೋಧ್ಯೆ ದಕ್ಷಿಣ ಕೇಂದ್ರವನ್ನಾಗಿ ಮಾಡಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವ ದಾಳ ಉರುಳಿಸಿದ್ದರು. ಇದಾದ ಬೆನ್ನಹಿಂದೆಯೇ ತರಾತುರಿಯಲ್ಲಿ ಸರ್ಕಾರ ರಾಮದೇವರ ಬೆಟ್ಟದ ದೇವಾಲಯ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿತ್ತು. ಅಲ್ಲದೆ, ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ರಾಮನಗರದ ರಾಮದೇವರ ಬೆಟ್ಟದಲ್ಲಿ ಆಯೋಧ್ಯೆ ಮಾದರಿಯ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು.
ಕಾಂಗ್ರೆಸ್ ಅವಧಿಯಲ್ಲಿ ಬಡವರಿಗೆ ಅನುಕೂಲವಾಗಿಲ್ಲ: ನಳಿನ್ ಕುಮಾರ್ ಕಟೀಲ್
ದೇವಾಲಯ ಅಭಿವೃದ್ಧಿ ಸಮಿತಿ ರಚನೆ ವೇಳೆ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಏಕಾಏಕಿ ಸಮಿತಿ ರಚನೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದಲ್ಲಿನ ಗುಂಪೊಂದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿತ್ತು. ಸಮಿತಿಯಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ ಅಧ್ಯಕ್ಷ ಗೌತಮ್ ಗೌಡ ಅವರಿಗೆ ಅವಕಾಶ ನೀಡಿದ್ದ ಕಾರಣಕ್ಕೆ ಭಿನ್ನಮತೀಯ ಗುಂಪು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧವೇ ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿತ್ತು.
ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ಚುರುಕುಗೊಂಡ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ಸಮಿತಿಯನ್ನೇ ರದ್ದುಗೊಳಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರತಿ ಮಾತ್ರ ಸ್ಥಳೀಯ ಕಾರ್ಯಕರ್ತರಿಗೆ ಲಭ್ಯವಾಗಿರಲಿಲ್ಲ. ಶನಿವಾರ ಬಿಜೆಪಿಯ ವಿಜಯ ಸಂಕಲ್ಪ ರಥ ಜಿಲ್ಲೆಯಲ್ಲಿ ಸಂಚರಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಶುಕ್ರವಾರ ರಾತ್ರಿ ಸಮಿತಿ ರದ್ದಾಗಿರುವ ಆದೇಶ ಪ್ರತಿ ನೀಡಲಾಗಿದೆ. ಆಮೂಲಕ ರಾಜ್ಯದ ನಾಯಕರ ಮುಂದೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವುದರ ಜತೆಗೆ, ಮುನಿಸನ್ನು ಶಮನ ಮಾಡುವ ಪ್ರಯತ್ನ ನಡೆದಿದೆ.
ಸಮಿತಿಯಲ್ಲಿ ಯಾರಿದ್ದರು?: ದೇವಾಲಯ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ, ಶಾಸಕಿ ಅನಿತಾಕುಮಾರಸ್ವಾಮಿ, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಗೌತಮ್ ಗೌಡ, ಶಂಕರಪ್ಪ, ಜಿ.ಪದ್ಮನಾಭ್, ನರಸಿಂಹಯ್ಯ, ಶೇಷಾದ್ರಿ ಅಯ್ಯರ್, ಶ್ರೀನಿವಾಸ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿತ್ತು.
ಬೆಂಗಳೂರಿಗೆ ರಾಮನಗರ ಹೆಬ್ಬಾಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ
ಕಾರ್ಯಕರ್ತರಿಂದ ಸ್ವಾಗತ: ರಾಮದೇವರ ಬೆಟ್ಟದ ದೇವಾಲಯ ಅಭಿವೃದ್ಧಿ ಸಮಿತಿ ರದ್ದುಗೊಳಿಸಿರುವ ನಿರ್ಧಾರವನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸಮಿತಿ ರದ್ದುಗೊಳಿಸಿ ಆದೇಶ ಹೊರಡಿಸಿರುವ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಮಿತಿ ರದ್ದುಗೊಳಿಸಿರುವುದು ನಿಷ್ಠಾವಂತ ಬಿಜೆಪಿ ಕಾರ‍್ಯಕರ್ತರಿಗೆ ಸಂದ ಗೌರವಾಗಿದೆ. ಈ ನಿರ್ಧಾರ ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಧನ್ಯವಾದಗಳು. ಇದು ಕಾರ‍್ಯಕರ್ತರಿಗೆ ಸಂದ ಜಯವಾಗಿದೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.