Asianet Suvarna News Asianet Suvarna News
breaking news image

ಬೆಂಗಳೂರಿನಲ್ಲಿ ಹರ್ಷತಂದ ವರ್ಷಧಾರೆ: ಸತತ 2ನೇ ದಿನವೂ ಮಳೆಯ ಸಿಂಚನ

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿ ಸುಮಾರು 35ಕ್ಕೂ ಅಧಿಕ ಮರ ಹಾಗೂ ವಿದ್ಯುತ್‌ ಕಂಬ ಧರೆಗುರುಳಿದ ಪರಿಣಾಮ ಮೂರು ಕಾರು ಹಾಗೂ ಒಂದು ಬೈಕ್‌ ಜಖಂಗೊಂಡಿದೆ.
 

Rain in Bengaluru for the 2nd consecutive day People Happy gvd
Author
First Published May 4, 2024, 6:43 AM IST

ಬೆಂಗಳೂರು (ಮೇ.04): ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿ ಸುಮಾರು 35ಕ್ಕೂ ಅಧಿಕ ಮರ ಹಾಗೂ ವಿದ್ಯುತ್‌ ಕಂಬ ಧರೆಗುರುಳಿದ ಪರಿಣಾಮ ಮೂರು ಕಾರು ಹಾಗೂ ಒಂದು ಬೈಕ್‌ ಜಖಂಗೊಂಡಿದೆ. ನಗರದಲ್ಲಿ ಸತತ ಎರಡು ದಿನ ಮಳೆಯಾಗಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಮೇತ ಮಳೆ ಸುರಿಯಿತು. ಸುಮಾರು 20 ನಿಮಿಷಕ್ಕೂ ಅಧಿಕ ಸುರಿದ ಧಾರಾಕಾರ ಮಳೆ - ಗಾಳಿಗೆ 35ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಧರೆಗುರುಳಿದವು. ಜತೆಗೆ, ವಿದ್ಯುತ್‌ ಕಂಬಗಳು ಮುರಿದು ಬಿದ್ದವು.

ಇದರ ಪರಿಣಾಮ ಮಹದೇವಪುರ ವ್ಯಾಪ್ತಿಯ ನಾರಾಯಣಪುರದ ಶಿವನ ದೇವಸ್ಥಾನದ ಕಾರು ಮತ್ತು ಬೈಕ್‌ ಜಖಂಗೊಂಡಿವೆ. ಆರ್‌.ಟಿ.ನಗರದ ರವೀಂದ್ರನಾಥ ಠಾಗೋರ್ ವೃತ್ತದ ಹಾಗೂ ಎನ್‌ಜಿಇಎಫ್‌ನ ಕಸ್ತೂರಿ ನಗರದಲ್ಲಿ ಮರ ಬಿದ್ದು ತಲಾ ಒಂದೊಂದು ಕಾರು ಜಖಂಗೊಂಡಿವೆ. ಉಳಿದಂತೆ ಮಾಗಡಿ ರಸ್ತೆಯ ಶ್ರೀಗಂಧ ಕಾವಲು, ಶಿವಾನಂದ ವೃತ್ತ ಸಮೀಪ, ಅರಮನೆ ರಸ್ತೆಯ ಸಿಬಿಐ ಕಚೇರಿ ಬಳಿ, ಆರ್‌ಟಿ ನಗರದ ಎಂಪೈರ್‌ ರಸ್ತೆ, ಕೊಟ್ಟಿಗೆ ಪಾಳ್ಯ, ಆರ್‌ ಆರ್‌ ನಗರದ ಐಡಿಯಲ್‌ ಹೋಂ, ಮಹದೇವಪುರದ ನಾರಾಯಣಪುರ, ಬಾನಸವಾಡಿ ಸೇರಿದಂತೆ ವಿವಿಧ ಕಡೆ ಮರ ಬಿದ್ದ ವರದಿಯಾಗಿದೆ.

ಅನಿರೀಕ್ಷಿತ ಮಳೆಗೆ ತುಸು ತಣ್ಣಗಾದ ಬೆಂಗಳೂರು: ಏಕಾಏಕಿ ಗುಡುಗು, ಮಿಂಚು

ನದಿಯಾದ ರಸ್ತೆಗಳು: ಧಾರಾಕಾರ ಮಳೆಯಿಂದ ಭಾರೀ ಪ್ರಮಾಣ ನೀರು ಹರಿದ ಪರಿಣಾಮ ಅಕ್ಷರಶಃ ರಸ್ತೆಗಳು ನದಿಯಂತಾಗಿದ್ದವು. ಇನ್ನು ಅಂಡರ್‌ ಪಾಸ್‌, ಫ್ಲೈಓವರ್‌ನಲ್ಲಿ ಅಪಾರ ಪ್ರಮಾಣದ ನೀರು ನಿಂತುಕೊಂಡಿತ್ತು. ಇದರಿಂದ ಕೆಲ ಸಮಯ ನಗರದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕೆ.ಆರ್. ಪುರಂ ಕಡೆಯಿಂದ ನಾಗವಾರ ಕಡೆಗೆ ಸಾಗುವ ಹೊರ ವರ್ತೂಲ ರಸ್ತೆಯ ಹೊರಮಾವು ಅಂಡರ್ ಪಾಸ್‌ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರ ಉಂಟಾಗಿತ್ತು. ಮಾನ್ಯತಾ ಟೆಕ್‌ಪಾರ್ಕ್‌ ಬಳಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ನಾಗವರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಉಂಟಾಗಿತ್ತು.

ಕೆಲವು ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ಶೇಖರಣೆ ಆಗಿ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ನೀರಿನ ಪ್ರಮಾಣ ಕಡಿಮೆಯಾದ ವಾಹನಗಳನ್ನು ಸಾರ್ವಜನಿಕರು ತೆಗೆದುಕೊಂಡು ಹೋದರು. ಇನ್ನು ರಸ್ತೆ ಅಕ್ಕ-ಪಕ್ಕದಲ್ಲಿ ನೀರು ನಿಂತುಕೊಂಡ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿ ಕಂಡು ಬಂದವು.

ಮಧ್ಯಾಹ್ನವೇ ಕತ್ತಲ ವಾತಾವರಣ: ಶುಕ್ರವಾರ ಮಧ್ಯಾಹ್ನ ಮಳೆ ಮೋಡ ಕವಿದ ವಾತಾವರಣ ಉಂಟಾಗಿದ್ದರಿಂದ ಕತ್ತಲೆಯ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ 3 ಗಂಟೆಯು ಸಂಜೆ 6 ಗಂಟೆಯಂತೆ ಭಾಸವಾಗಿತ್ತು. ಇನ್ನು ಕಳೆದ ಗುರುವಾರ ಸಂಜೆ ನಗರದ ಕೆಲವು ಭಾಗದಲ್ಲಿ ಉತ್ತಮ ಮಳೆಯಾದರೆ, ಮತ್ತೆ ಕೆಲವು ಭಾಗದಲ್ಲಿ ತುಂತುರು ಮಳೆಯಾಗಿತ್ತು. ಆದರೆ, ಶುಕ್ರವಾರ ನಗರದಾದ್ಯಂತ ಉತ್ತಮ ಮಳೆಯಾಗಿದೆ. ನಗರದಲ್ಲಿ ಸರಾಸರಿ 1.02 ಸೆಂ.ಮೀ ಮಳೆ ನಗರದಲ್ಲಿ ಶುಕ್ರವಾರ ಸರಾಸರಿ 1.02 ಸೆಂ.ಮೀ ನಷ್ಟು ಮಳೆಯಾಗಿದೆ. ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು 2.95 ಸೆಂ.ಮೀ ಮಳೆಯಾಗಿದೆ. 

ರಾಹುಲ್‌ ಗಾಂಧಿ ಲಾಂಚ್‌ಗೆ ಸೋನಿಯಾ 20 ಸಲ ವಿಫಲ ಪ್ರಯತ್ನ: ಅಮಿತ್‌ ಶಾ ವ್ಯಂಗ್ಯ

ಉಳಿದಂತೆ, ಆರ್‌ಆರ್‌ ನಗರದಲ್ಲಿ 2.90, ಮಾರುತಿ ಮಂದಿರ 2.65, ಬಿಳೇಕಹಳ್ಳಿ 2.45, ಹಂಪಿನಗರ 2.4, ಕೆಂಗೇರಿ ಹಾಗೂ ವಿದ್ಯಾಪೀಠದಲ್ಲಿ ತಲಾ 2, ಕಮ್ಮನಹಳ್ಳಿ 1.9, ರಾಮೂರ್ತಿನಗರ, ಹೊರಮಾವು, ಕೊಟ್ಟಿಗೆಪಾಳ್ಯದಲ್ಲಿ ತಲಾ 1.7, ಹೆಮ್ಮಿಗೆಪುರ 1.6, ಅರಕೆರೆ, ಬಿಟಿಎಂ ಲೇಔಟ್‌, ಕಾಟನ್‌ ಪೇಟೆಯಲ್ಲಿ ತಲಾ 1.3, ಕೋರಮಂಗಲ 1.2, ಉತ್ತರ ಹಳ್ಳಿ, ಸಂಪಗಿರಾಮನಗರ, ವಿಶ್ವೇಶ್ವರ ಪುರದಲ್ಲಿ ತಲಾ 1.1, ಪುಲಕೇಶಿನಗರ ಹಾಗೂ ದಯಾನಂದ ನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. ಇನ್ನು, ಸ್ಥಳೀಯ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಯಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆ ಗಳಲ್ಲಿ ಮಳೆಯಾಗುತ್ತಿದೆ. ಶನಿವಾರ ಮತ್ತು ಭಾನುವಾರ ಹಗುರ ಮಳೆಯಾಗಬಹುದಾಗಿದೆ ಎಂದು ಐಎಂಡಿ ಹವಾಮಾನ ತಜ್ಞ ಬಿ.ಎಸ್‌.ಪಾಟೀಲ್‌ ಹೇಳಿದರು.

Latest Videos
Follow Us:
Download App:
  • android
  • ios