ಅನಿರೀಕ್ಷಿತ ಮಳೆಗೆ ತುಸು ತಣ್ಣಗಾದ ಬೆಂಗಳೂರು: ಏಕಾಏಕಿ ಗುಡುಗು, ಮಿಂಚು
ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರಿ ಗುರುವಾರದ ಸಂಜೆ ಮಳೆ ತುಸು ತಂಪೆರೆದಿದೆ. ಕಳೆದ ಹಲವು ದಿನಗಳಿಂದ ನಗರದಲ್ಲಿ ಬಿಸಿಲ ಝಳ ವಿಪರೀತವಾಗಿತ್ತು. ಸೆಕೆಯಿಂದ ಜನರು ಬೇಸತ್ತು ಹೋಗಿದ್ದರು.
ಬೆಂಗಳೂರು (ಮೇ.03): ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರಿ ಗುರುವಾರದ ಸಂಜೆ ಮಳೆ ತುಸು ತಂಪೆರೆದಿದೆ. ಕಳೆದ ಹಲವು ದಿನಗಳಿಂದ ನಗರದಲ್ಲಿ ಬಿಸಿಲ ಝಳ ವಿಪರೀತವಾಗಿತ್ತು. ಸೆಕೆಯಿಂದ ಜನರು ಬೇಸತ್ತು ಹೋಗಿದ್ದರು. ಅಂತಿಮವಾಗಿ ಗುರುವಾರ ಸಂಜೆ ನಗರದ ವಿವಿಧ ಭಾಗದಲ್ಲಿ ಒಂದಿಷ್ಟು ಪ್ರಮಾಣದ ಮಳೆಯಾಗುವ ಮೂಲಕ ತಣಿಸಿದೆ. ಗುರುವಾರ ಬೆಳಗ್ಗೆಯಿಂದ ಸಂಜೆ ವರೆಗೆ ಬಿಸಿಲ ವಾತಾವರಣವೇ ಇತ್ತು. ಸಂಜೆಯಾಗುತ್ತಿದ್ದಂತೆ ಜೋರು ಗಾಳಿಯೊಂದಿಗೆ ಗುಡುಗು, ಮಿಂಚಿನ ಆರ್ಭಟ ಶುರುವಾಯಿತು. ಅಂತಿಮವಾಗಿ ನಗರದ ಬಹುತೇಕ ಭಾಗದಲ್ಲಿ ಮಳೆ ಸುರಿಯಿತು. ಕೆಲವು ಕಡೆ ಭಾರೀ ಗಾಳಿ ಸಮೇತ ಹೆಚ್ಚಿನ ಮಳೆಯಾಗಿದೆ. ಇನ್ನು ಕೆಲವು ಕಡೆ ತುಂತುರು ಮಳೆಯಾಗಿದೆ.
ಕೆಲವು ಕಡೆ ಮಳೆಗಿಂತ ಗಾಳಿ ಜೋರಾಗಿ ಬೀಸಿತು. ಇದರಿಂದ ನಗರದ ವಿವಿಧ ಭಾಗದಲ್ಲಿ ಸುಮಾರು 30ಕ್ಕೂ ಅಧಿಕ ಮರ ಹಾಗೂ ಮರದ ಕೊಂಬೆಗಳು ಬಿದ್ದ ವರದಿಯಾಗಿದೆ. ಶ್ರೀನಗರ, ಜಯನಗರ, ಚಾಮರಾಜಪೇಟೆ, ವಿಜಯನಗರ, ಹನುಮಂತನಗರ, ಗುಟ್ಟಹಳ್ಳಿ ಸೇರಿದಂತೆ ಮೊದಲಾದ ಕಡೆ ಮರ ಬಿದ್ದಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯಿಂದ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ಬಳಿಕ ರಾಜಕಾಲುವೆಯ ಕೊಳಚೆ ನೀರು ರಸ್ತೆಗೆ ಹರಿದ ಪರಿಣಾಮ ರಸ್ತೆಯಲ್ಲಿ ಜನರು ನಡೆದಾಡದ ಸ್ಥಿತಿ ನಿರ್ಮಾಣಗೊಂಡಿತ್ತು. ಮೈಸೂರು ರಸ್ತೆಯ ಬ್ಯಾಟರಾಯನಪುರ ಬಳಿ ಶೆಡ್‌ನ ಶೀಟ್‌ಗಳು ಗಾಳಿಗೆ ಹಾರಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳ ಮೇಲೆ ಬಿದ್ದ ಘಟನೆ ನಡೆದಿದೆ. ಇದರಿಂದ ವಾಹನಗಳು ಜಖಂಗೊಂಡಿವೆ.
ಬೆಂಗಳೂರಿನ ಇತಿಹಾಸದಲ್ಲಿ ಮಳೆಯ ಇಲ್ಲದ ಮೊದಲ ಏಪ್ರಿಲ್: ಬರೀ ರಣಬಿಸಿಲು
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ನಗರದ 90ಕ್ಕೂ ಅಧಿಕ ವಾರ್ಡ್ ನಲ್ಲಿ ಮಳೆಯಾದ ವರದಿಯಾಗಿದೆ. ಪ್ರಮುಖವಾಗಿ ವಿದ್ಯಾಪೀಠ, ಮಾರುತಿ ಮಂದಿರ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಯಲಚೇನಹಳ್ಳಿ, ಹಂಪಿನಗರದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಕೆಲವು ಕಡೆ ಉತ್ತಮ ಮಳೆಯಾಗಿದೆ. ಮೆಜೆಸ್ಟಿಕ್, ಶಿವಾನಂದ ವೃತ್ತ, ಆನಂದರಾವ್ ವೃತ್ತ, ವಿಧಾನಸೌಧ ಸೇರಿದಂತೆ ಮೊದಲಾದ ಕಡೆ ತುಂತುರು ಮಳೆಯಾಗಿದೆ.
ಸಂಭ್ರಮ: ತುಂತುರು ಹನಿ ಭೂಮಿಗೆ ಬೀಳುತ್ತಿದ್ದಂತೆ ಖುಷಿಯಿಂದ ಮನೆ-ಕಚೇರಿಯಿಂದ ಹೊರ ಬಂದು ಸಂತಸಪಟ್ಟರು. ಕೆಲವರು ಮಳೆಯಲ್ಲಿ ನೆಂದು ಸಂಭ್ರಮಿಸಿದರು. ಮತ್ತೆ ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ನಗರದಲ್ಲಿ ಅಲ್ಪ ಪ್ರಮಾಣದ ಮಳೆ ಸುರಿದ ಪರಿಣಾಮ ಕಾದ ನೆಲದ ಕಾವಿನಿಂದ ಸಕೆ ಹೆಚ್ಚಾದ ಅನುಭವವಾಗುತ್ತಿದೆ.
ಸರಾಸರಿ 4.3 ಮಿ.ಮೀ ಮಳೆ: ಗುರುವಾರ ನಗರದಲ್ಲಿ ಸರಾಸರಿ 4.3 ಮಿ.ಮೀ ನಷ್ಟು ಮಳೆಯಾಗಿದೆ. ಅತಿ ಹೆಚ್ಚು ಮಳೆ ವಿದ್ಯಾಪೀಠದಲ್ಲಿ 20 ಮಿ.ಮೀ ವರದಿಯಾಗಿದೆ. ಉಳಿದಂತೆ ಹಂಪಿನಗರದಲ್ಲಿ 12.5 ಮಿ.ಮೀ ಹಾಗೂ ಮಾರುತಿ ಮಂದಿರದಲ್ಲಿ 12 ಮಿ.ಮೀ ಮಳೆಯಾಗಿದೆ. ಉಳಿದಂತೆ ಉಳ್ಳಾಲು, ಹೆಮ್ಮಿಗೇಪುರ, ಜ್ಞಾನಭಾರತಿಯಲ್ಲಿ ತಲಾ 7.5, ವಿಜ್ಞಾನನಗರ, ದೊಡ್ಡಬಿದರಕಲ್ಲುನಲ್ಲಿ ತಲಾ 5, ರಾಮೂರ್ತಿನಗರ, ಹೊರಮಾವು ತಲಾ 4.5, ಅಟ್ಟೂರು, ಚೌಡೇಶ್ವರಿ ನಗರ, ವಿದ್ಯಾರಣ್ಯಪುರ 3.5, ಸಂಪಗಿರಾಮನಗರ, ಸಾರಕ್ಕಿ, ಆಡುಗೋಡಿ, ಅಗರ, ದೊಮ್ಮಲೂರು, ನ್ಯೂತಿಪ್ಪಸಂದ್ರ ತಲಾ 3 ಮಿ.ಮೀ. ಸುದ್ದಗುಂಟೆ ಪಾಳ್ಯ, ಸುಂಕೇನಹಳ್ಳಿ, ಜಯನಗರ, ಶಾಂತಲನಗರ, 2.5 ಮಿ.ಮೀ ಸೇರಿದಂತೆ ವಿವಿಧ ಕಡೆ ಮಳೆಯಾಗಿದೆ. ಶುಕ್ರವಾರ ನಗರದಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ರಾಹುಲ್ ಗಾಂಧಿ ಬೆಂಕಿ ಭಾಷಣ: ಪಾಕಿಸ್ತಾನ ಮಾಜಿ ಸಚಿವ ಮೆಚ್ಚುಗೆ
ಮತ್ತಷ್ಟು ಬಿಸಿಲು ಹೆಚ್ಚಳ: ಕಳೆದ ಬುಧವಾರ 38.1 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ 13 ವರ್ಷದಲ್ಲಿ ಮೇ ಮಾಹೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶವಾಗಿ ದಾಖಲಾಗಿತ್ತು. ಗುರುವಾರ ಅದಕ್ಕಿಂತ 0.1 ಡಿಗ್ರಿ ಸೆಲ್ಶಿಯಸ್ ಅಂದರೆ, 38.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಗುರುವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 39.1 ಡಿಗ್ರಿ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 38.2 ಹಾಗೂ ಜಿಕೆವಿಕೆಯಲ್ಲಿ 38 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.