Rain In Karnataka: 7 ಜಿಲ್ಲೆಗಳಲ್ಲಿ ದಿಢೀರ್ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು
* 7 ಜಿಲ್ಲೆಗಳಲ್ಲಿ ದಿಢೀರ್ ಮಳೆಯ ಅಬ್ಬರ!
* ಕೆಲವೆಡೆ ಭಾರೀ ಗಾಳಿ, ಮಳೆ ಸುರಿದಿದ್ದರಿಂದ ಕಾಫಿ ಬೆಳೆಗಾರರು ಖುಷ್
*ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ
*ಶಿರಸಿ ಮಾರಿಕಾಂಬಾ ಜಾತ್ರಾ ಗದ್ದುಗೆ ಮಂಟಪಕ್ಕೆ ಹಾನಿ
ಶಿರಸಿ(ಮಾ. 19) ಬಿಸಿಲ ಧಗೆ ಏರುತ್ತಿರುವ ನಡುವೆಯೇ ಉತ್ತರ ಕನ್ನಡ (Uttara Kannada) ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಶುಕ್ರವಾರ ಕೆಲಗಂಟೆಗಳ ಕಾಲ ದಿಢೀರ್ ಉತ್ತಮ (Rain) ಮಳೆಯಾಗಿದೆ. ಮಳೆ-ಗಾಳಿ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶಿರಸಿ (Sirsi) ಮಾರಿಕಾಂಬಾ ಜಾತ್ರಾ ಗದ್ದುಗೆ ಮಂಟಪಕ್ಕೆ ಹಾನಿಯಾಗಿದ್ದಲ್ಲದೆ, ಮನೋರಂಜನೆಗೆಂದು ಹಾಕಲಾಗಿದ್ದ ಜೈಂಟ್ ವ್ಹೀಲ್ನ ಐದು ತೊಟ್ಟಿಲು ಕುಸಿದು ಬಿದ್ದಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳ ಏರುತ್ತಲೇ ಇದ್ದು, ಇದರ ನಡುವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು (Kodagu), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ಅರ್ಧಗಂಟೆಯಿಂದ ಒಂದು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
Pre Monsoon Rain: ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಮಳೆ
ಮಾರಿಕಾಂಬಾ ಜಾತ್ರೆಗೆ ಅಡ್ಡಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಸಂಜೆ ವೇಳೆಗೆ ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಸಿದ್ದಾಪುರದಲ್ಲಿ ಮನೆ ಮೇಲೆ ತೆಂಗಿನಮರವೊಂದು ಬಿದ್ದು, ನಾಲ್ವರಿಗೆ ಗಾಯಗಳಾಗಿದೆ. ಮಳೆ-ಗಾಳಿಯಿಂದಾಗಿ ಶಿರಸಿಯಲ್ಲಿ ಮಾರಿಕಾಂಬಾದೇವಿ ದೇವಸ್ಥಾನದ ಬಿಡ್ಕಿಬೈಲಿನಲ್ಲಿ ಜಾತ್ರಾ ಗದ್ದುಗೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಹಾನಿಯಾಗಿದೆ. ಸಂಜೆ ಸುಮಾರು 6 ಗಂಟೆ ವೇಳೆ ದಿಢೀರ್ ಬಿರುಗಾಳಿ ಬೀಸಿದೆ. ಇದರಿಂದಾಗಿ ಜಾತ್ರಾ ಮಂಟಪದ ಮೇಲ್ಭಾಗ ಕುಸಿದಿದೆ. ಭಾರೀ ಗಾಳಿಗೆ ಅಂಗಡಿ ಮುಂಗಟ್ಟುಗಳ ಮುಂದೆ ಕಟ್ಟಿದ್ದ ಟಾರ್ಪಲ್ ಹಾರಿ ಹೋದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಪ್ಪಿದ ದುರಂತ: ಜಾತ್ರೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಅಳವಡಿಸಲಾಗಿದ್ದ ಜೈಂಟ್ ವ್ಹೀಲ್ಗೂ ಗಾಳಿ-ಮಳೆಯಿಂದಾಗಿ ಹಾನಿಯಾಗಿದೆ. ಗಾಳಿಯಬ್ಬರಕ್ಕೆ ಸುಮಾರು 5 ತೊಟ್ಟಿಲು ಕಳಚಿ ಕೆಳ ಬಿದ್ದಿದೆ. ಗಾಳಿ ಜೋರಾಗುತ್ತಿದ್ದಂತೆ ಅಧಿಕಾರಿಗಳು ಜಾಯಿಂಟ್ ವ್ಹೀಲ್ ಅನ್ನು ತಕ್ಷಣ ಸ್ಥಗಿತಗೊಳಿಸಿ ಜನರನ್ನು ಸ್ಥಳದಿಂದ ಹೊರ ಕಳುಹಿಸಿದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಚಿಕ್ಕಮಗಳೂರಲ್ಲೂ ಅಬ್ಬರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಬಾಳೆಹೊನ್ನೂರು ತಾಲೂಕು ಸೇರಿ ಹಲವೆಡೆ ಮಧ್ಯಾಹ್ನದಿಂದಲೇ ಅಬ್ಬರದ ಮಳೆಯಾಗಿದೆ. ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಸುರಿದ ಅಬ್ಬರದ ಮಳೆಗೆ ಶೃಂಗೇರಿ ಸೇರಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಇನ್ನು ಹಾವೇರಿಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಉತ್ತಮ ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಮೂಲ್ಕಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕೆಲಕಾಲ ಉತ್ತಮ ಮಳೆಯಾಗಿದ್ದು, ಕೊಡಗಿನ ನಾಪೋಕ್ಲು ಸುತ್ತಮುತ್ತ ಸಂಜೆ ವೇಳೆಗೆ ಸುಮಾರು ಮುಕ್ಕಾಲು ಗಂಟೆ ಕಾಲ ಬಿರುಸಿನ ಮಳೆ ಸುರಿದಿದೆ.
3-4 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ: ಮುಂದಿನ ಮೂರ್ನಾಲ್ಕು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದರಿಂದ ರಾಜ್ಯದಾದ್ಯಂತ ಇರುವ ಸೆಖೆಯ ವಾತಾವರ ತುಸು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ (ಅಂಡಮಾನ್, ನಿಕೋಬಾರ್ ಪ್ರದೇಶ) ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗುವ ನಿರೀಕ್ಷೆ ಮತ್ತು ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವ ರಾಜ್ಯದ ಮೇಲಾಗುವ ಸಾಧ್ಯತೆ ಇರುವುದರಿಂದ ರಾಜ್ಯವ್ಯಾಪಿ ಮುಂದಿನ ಕೆಲ ದಿನಗಳ ಕಾಲ ಮಳೆ ಸುರಿಯುವ ಸಂಭವವಿದೆ.
ಶನಿವಾರ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡದ ಒಂದೆರಡು ಕಡೆ, ನಂತರ ಮಂಗಳವಾರದ ತನಕ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಾ.20ರಂದು ಮಳೆಯಾಗಲಿದೆ. ಮಾ.21ರಂದು ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ, ಮಾ.22ರಂದು ಗದಗ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಕೆಲ ದಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮಾ.19 ಮತ್ತು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ, ಮಾ.20ರಂದು ಈ ಜಿಲ್ಲೆಗಳೊಂದಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಜಿಲ್ಲೆಯ ಒಂದೆರಡು ಮಳೆಯಾಗಲಿದೆ. ಮಾ.21ರಂದು ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯಾಗಲಿದೆ.