Asianet Suvarna News Asianet Suvarna News

ಯಾದಗಿರಿ: ಲಾಭ ಪಡೆಯೋ ರೈಲ್ವೆ ಇಲಾಖೆ ಸೌಲಭ್ಯ ಕೊಡಲ್ಲ..!

ಯಾದಗಿರಿಗೆ ರೈಲ್ವೆ ಇಲಾಖೆ ತಾರತಮ್ಯ: ಸಂಸದರು ಮೌನ ಮುರಿಯಲಿ, ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್‌ ಎಕ್ಸಪ್ರೆಸ್‌ ನಿಲುಗಡೆಗೆ ಆಗ್ರಹ, ರೈಲು ತಡೆ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧತೆ. 

Railway Department Not Provide the Facility in Yadgir grg
Author
First Published Aug 27, 2023, 10:19 PM IST

ಯಾದಗಿರಿ(ಆ.27): ಗುಂತಕಲ್‌ ರೈಲ್ವೆ ವಿಭಾಗದ, ಅತಿ ಹೆಚ್ಚು ಆದಾಯ ತರುವ ಎಂದೇ ಖ್ಯಾತಿಯ ಯಾದಗಿರಿ ರೈಲು ನಿಲ್ದಾಣ ಇಲಾಖೆಯ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ. ಇಲ್ಲಿಂದ ಕೋಟ್ಯಂತರ ರು.ಗಳ ಆದಾಯ ಪಡೆಯುವ ರೈಲ್ವೆ ಇಲಾಖೆ, ಸವಲತ್ತುಗಳ ನೀಡುವಲ್ಲಿ ಯಾದಗಿರಿ ರೈಲು ನಿಲ್ದಾಣವನ್ನು ಕಡೆಗೆಣಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿ ರೈಲು ನಿಲ್ದಾಣ ಅಭಿವೃದ್ಧಿ ಹಾಗೂ ಪ್ರಮಖ ರೈಲುಗಳ ನಿಲುಗಡೆ ವಿಚಾರದಲ್ಲಿ ರೈಲ್ವೆ ಇಲಾಖೆ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಜಧಾನಿ ಹಾಗೂ ಕನ್ಯಾಕುಮಾರಿ ಎಕ್ಸಪ್ರೆಸ್‌ ಸೇರಿದಂತೆ ಹತ್ತಾರು ಪ್ರಮುಖ ರೈಲುಗಳ ನಿಲುಗಡೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ಇಲಾಖೆ, ಇದೀಗ ದೇಶದ ಮತ್ತೊಂದು ಮಹತ್ವಾಕಾಂಕ್ಷಿ ರೈಲು ‘ವಂದೇ ಭಾರತ್‌’ ನಿಲುಗಡೆಯಲ್ಲಿಯೂ ಧೋರಣೆ ತೋರಿದಂತಿದೆ.

ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವೆ : ದರ್ಶನಾಪುರ್‌

ಇದೇ ತಿಂಗಳಾಂತ್ಯದಲ್ಲಿ (ಆ.29) ಚಾಲನೆಗೊಳ್ಳಲಿರುವ ಬೆಂಗಳೂರು -ಹೈದರಾಬಾದ್‌ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲ್ಲದಿರುವುದು ಯಾದಗಿರಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚೈನ್ನೆ-ಬೆಂಗಳೂರು, ಮೈಸೂರು-ಬೆಂಗಳೂರು ಹಾಗೂ ಹುಬ್ಬಳ್ಳಿ- ಬೆಂಗಳೂರು ನಂತರ ರಾಜ್ಯದಲ್ಲಿ ಸಂಚರಿಸುವ ಇದು (ಉದ್ದೇಶಿತ ಬೆಂಗಳೂರು-ಹೈದರಾಬಾದ್‌) ಮತ್ತೊಂದು ವಂದೇ ಭಾರತ್‌ ಎಕ್ಸಪ್ರೆಸ್‌ ಆಗಲಿದೆ.

ಸೇಡಂ ಹಾಗೂ ರಾಯಚೂರು ನಿಲ್ದಾಣಗಳಿಗೆ ಈ ವಂದೇ ಭಾರತ್‌ ರೈಲಿನ ನಿಲುಗಡೆ ಆಗಲಿದೆಯಾದರೂ, ಯಾದಗಿರಿಯಲ್ಲಿ ನಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಜಿಲ್ಲೆಯಾಗಿ 13 ವರ್ಷಗಳಾಗಿವೆ, ಜೊತೆಗೆ ಗುಂತಕಲ್‌ ವಿಭಾಗದಲ್ಲಿ ಅತಿ ಹೆಚ್ಚು ಆದಾಯ ನೀಡುವ ರೈಲು ನಿಲ್ದಾಣ ಇದಾಗಿದ್ದರೂ ಕೂಡ, ಸೌಲತ್ತುಗಳ ನೀಡುವಲ್ಲಿ ಅಥವಾ ಪ್ರಮುಖ ರೈಲುಗಳ ನಿಲುಗಡೆ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ.

ಈ ವಿಚಾರವಾಗಿ ಸ್ಥಳೀಯ ನಾಗರಿಕರು, ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಗಳು ಹೋರಾಟದ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅನ್ಯಾಯ ಸರಿಪಡಿಸದಿದ್ದರೆ ರೈಲು ತಡೆ ಹೋರಾಟಕ್ಕೆ ಮುಂದಾಗುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರಕಟಣೆ ನೀಡಿದೆ. ಕಲಬುರಗಿ ಹಾಗೂ ರಾಯಚೂರು ಸಂಸದರು ಈ ವಿಷಯದಲ್ಲಿ ಮೌನ ಮುರಿಯಬೇಕಿದೆ.

ಯಾದಗಿರಿಯಿಂದ ಭರ್ಜರಿ ಆದಾಯ ಪಡೆಯುವ ರೈಲ್ವೆ ಇಲಾಖೆ ಸವಲತ್ತು ನೀಡದಿದ್ದರೆ ಹೇಗೆ? ಮೊದಲಿನಿಂದಲೂ ಈ ಅನ್ಯಾಯ ಆಗುತ್ತಲೇ ಇದೆ. ಇಬ್ಬರೂ ಸಂಸದರು ಮೌನಕ್ಕೆ ಶರಣಾದಂತಿದೆ. ಬರೀ ರಾಯಚೂರು ಹಾಗೂ ಸೇಡಂ ಅಂದರೆ ಸಾಕೇ? ಯಾದಗಿರಿ ಆದಾಯಕ್ಕಷ್ಟೇ ಸೀಮಿತವೇ? ಎಂದು ಯಾದಗಿರಿ ಹಿರಿಯ ನ್ಯಾಯವಾದಿ ಪ್ರಸನ್ನ ದೇಶಮುಖ ತಿಳಿಸಿದ್ದಾರೆ.  

ರೈಲ್ವೆ ಇಲಾಖೆ ಯಾದಗಿರಿಗೆ ಸವಲತ್ತುಗಳ ನೀಡದಿದ್ದರೆ ಹೇಗೆ? ಜಿಲ್ಲೆಯಾಗಿ 13 ವರ್ಷಗಳಾದರೂ ಈಗಲೂ ಅನೇಕ ಪ್ರಮುಖ ರೈಲುಗಳು ನಿಲ್ಲುವುದಿಲ್ಲ. ಕೇವಲ ಆದಾಯ ಪಡೆಯಲು ಮಾತ್ರ ಯಾದಗಿರಿ ಬೇಕೆ? ಎಂದು ಯಾದಗಿರಿ ಕಾಂಗ್ರೆಸ್‌ ಮುಖಂಡ ಸಲೀಂ ಹುಂಡೇಕಾರ್‌ ಹೇಳಿದ್ದಾರೆ.  

Yadgir: ಚಂದ್ರಯಾನದ ಯಶಸ್ಸು, ಮಕ್ಕಳಿಗೆ ವಿಕ್ರಮ್‌-ಪ್ರಗ್ಯಾನ್‌ ಎಂದು ನಾಮಕರಣ!

ವಂದೇ ಭಾರತ್‌ ರೈಲು ನಿಲುಗಡೆ ಯಾದಗಿರಿ ನಿಲ್ದಾಣದಲ್ಲಿ ಆಗದಿದ್ದರೆ ರೈಲು ತಡೆ ಹೋರಾಟ ನಡೆಸಲಾಗುವುದು. ಜಿಲ್ಲಾ ಕೇಂದ್ರದ ಜೊತೆಗೆ ಇಲಾಖೆಗೆ ಹೆಚ್ಚಿನ ಆದಾಯ ಕೊಡುವ ಯಾದಗಿರಿಗೆ ನಿರ್ಲಕ್ಷ್ಯ ಸಲ್ಲದು ಎಂದು ಯಾದಗಿರಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್‌. ಭೀಮುನಾಯಕ್ ಹೇಳಿದ್ದಾರೆ. 

ಯಾದಗಿರಿ ಜಿಲ್ಲಾ ಕೇಂದ್ರ, ಇಲ್ಲಿಂದ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಸಂಸದರುಗಳು ಇಲಾಖೆಯ ಗಮನಕ್ಕೆ ತಂದು ವಂದೇ ಭಾರತ್‌ ರೈಲು ನಿಲುಗಡೆಗೆ ಮುಂದಾಗಬೇಕು ಎಂದು ಯಾದಗಿರಿ ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ್‌ ತಿಳಿಸಿದ್ದಾರೆ. 

Follow Us:
Download App:
  • android
  • ios