ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಬಂದ್ ಹಿನ್ನೆಲೆ ಮದ್ಯ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ಕಟ್ಟಡವೇರಿ ಮೇಲಿಂದ ಬೀಳುವುದಾಗಿ ಬೆದರಿಕೆ ಹಾಕಿದ್ದಾನೆ. ನನಗೆ ಎಣ್ಣೆ ತಂದುಕೊಟ್ಟರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದ ಆತನನ್ನು, ಪೊಲೀಸರು ಹರಸಾಹಸಪಟ್ಟು ರಕ್ಷಿಸಿದ್ದಾರೆ.

ಚಿಕ್ಕಮಗಳೂರು (ಫೆ.23): ಕಾಫಿನಾಡಿನಲ್ಲಿ ಇಂದು ಒಂದು ಕಡೆ ಕಾಡಾನೆ ದಾಳಿ ಹಾಗೂ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಕುಡುಕನೊಬ್ಬನ ‘ಎಣ್ಣೆ’ ಪುರಾಣ ಜನರನ್ನು ನಗಬೇಕೋ ಅಥವಾ ಅಳಬೇಕೋ ಎಂಬ ದ್ವಂದ್ವಕ್ಕೆ ದೂಡಿದೆ. ಬಂದ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಹಡಿ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಹೈಡ್ರಾಮಾ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಘಟನೆಯ ಹಿನ್ನೆಲೆ ಏನು?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಭಾನುವಾರ ರೈತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಇದನ್ನು ಖಂಡಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ (ಎನ್.ಆರ್.ಪುರ, ಕೊಪ್ಪ, ಶೃಂಗೇರಿ) ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಎಲ್ಲಾ ಮದ್ಯದಂಗಡಿಗಳು ಬಾಗಿಲು ಹಾಕಿದ್ದವು.

ಮಹಡಿ ಹತ್ತಿ ಮದ್ಯವ್ಯಸನಿ ರಂಪಾಟ:

ದಿನವಿಡೀ ಮದ್ಯಕ್ಕಾಗಿ ಅಲೆದಾಡಿದ ಈ 'ಮದ್ಯಪ್ರಿಯ'ನಿಗೆ ಎಲ್ಲಿಯೂ ಎಣ್ಣೆ ಸಿಕ್ಕಿಲ್ಲ. ಇದರಿಂದ ಕಂಗಾಲಾದ ಆತ, ಎನ್.ಆರ್.ಪುರ ಪಟ್ಟಣದ ಕಾಂಗ್ರೆಸ್ ಕಚೇರಿಯ ಪಕ್ಕದಲ್ಲಿದ್ದ ಒಂದು ಕಟ್ಟಡದ ಮಹಡಿಯನ್ನು ಏರಿದ್ದಾನೆ. ನಂತರ, ಬರಿ ಮೈನಲ್ಲಿ ನಿಂತು, 'ನನಗೆ ಎಣ್ಣೆ ಬೇಕು, ಇಲ್ಲದಿದ್ದರೆ ಈಗಲೇ ಕೆಳಗೆ ಬಿದ್ದು ಸಾಯುತ್ತೇನೆ' ಎಂದು ಕೂಗಾಡಲು ಶುರುಮಾಡಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಹೊಟ್ಟೆ ಮತ್ತು ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ರಕ್ತ ಸುರಿಸುತ್ತಾ ಅಲ್ಲಿ ನೆರೆದಿದ್ದವರಲ್ಲಿ ಭೀತಿ ಹುಟ್ಟಿಸಿದ್ದಾನೆ.

ಮೊದ್ಲು ಎಣ್ಣೆ ತನ್ನಿ, ಆಮೇಲೆ ಮಾತು!

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಕೆಳಗೆ ಇಳಿಸಲು ಸಂಧಾನ ನಡೆಸಿದರು. 'ಕೆಳಗೆ ಬಾಪ್ಪಾ, ನಾನೇ ನಿನಗೆ ಎಣ್ಣೆ ಕೊಡಿಸುತ್ತೇನೆ' ಎಂದು ಪೊಲೀಸರು ಆಮಿಷ ಒಡ್ಡಿದರು. ಆದರೆ ಈ ಭೂಪ ಮಾತ್ರ ಅಷ್ಟು ಸುಲಭಕ್ಕೆ ಬಗ್ಗಲಿಲ್ಲ. 'ನೀವು ಸುಳ್ಳು ಹೇಳ್ತೀರಾ, ಮೊದಲು ಬಾಟಲಿ ತನ್ನಿ, ನನಗೆ ತೋರಿಸಿ, ಆಮೇಲೆ ನಾನು ಕೆಳಗೆ ಇಳಿಯುತ್ತೇನೆ' ಎಂದು ಪೊಲೀಸರಿಗೇ ಕಂಡೀಷನ್ ಹಾಕಿದ್ದಾನೆ.

ಹರಸಾಹಸ ಪಟ್ಟು ರಕ್ಷಣೆ:

ಸುಮಾರು ಹೊತ್ತು ನಡೆದ ಈ ಹೈಡ್ರಾಮಾದಿಂದ ಸ್ಥಳೀಯರು ಹಾಗೂ ಪೊಲೀಸರು ಹೈರಾಣಾದರು. ಕೊನೆಗೆ ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಆತನ ಗಮನ ಬೇರೆಡೆ ಸೆಳೆದು ಸುರಕ್ಷಿತವಾಗಿ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾದರು. ಒಬ್ಬ ವ್ಯಕ್ತಿ ಮದ್ಯಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಮುಂದಾದ ಈ ಘಟನೆ ಪಟ್ಟಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.