ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ₹2372 ಕೋಟಿ ವೆಚ್ಚದಲ್ಲಿ ಕಂಪ್ಲಿ ವಯಾ ಗಂಗಾವತಿ-ದರೋಜಿ ಸೇರಿದಂತೆ ಎರಡು ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಸಂಸದ ಈ. ತುಕರಾಮ್ ಅವರ ಪ್ರಕಾರ, ಈ ಯೋಜನೆಯು ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. 

ಕಂಪ್ಲಿ: ಅಖಂಡ ಬಳ್ಳಾರಿ ಜಿಲ್ಲೆಯ ಸಾರಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ₹2372 ಕೋಟಿ ವೆಚ್ಚದಲ್ಲಿ ಎರಡು ಹೊಸ ರೈಲು ಮಾರ್ಗಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕಂಪ್ಲಿ ವಯಾ ಗಂಗಾವತಿ- ದರೋಜಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಈ. ತುಕರಾಮ್ ತಿಳಿಸಿದರು.ದೇವಸಮುದ್ರ ಕ್ರಾಸ್ ಸಮೀಪ ನಿರ್ಮಾಣವಾಗಿರುವ ಗೋಶಾಲೆಯ ಉದ್ಘಾಟನಾ ಅಂಗವಾಗಿ ಆಯೋಜಿಸಿದ್ದ ಇಷ್ಟಾರ್ಥ ಸಿದ್ಧಿ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೃಷಿ ಉತ್ಪನ್ನಗಳ ಸಾಗಣೆ ಸುಗಮ

ತೋರಣಗಲ್ಲು, ಪಾಪಿನಾಯಕನಹಳ್ಳಿ ಹಾಗೂ ಕುಡುತಿನಿ ರೈಲು ನಿಲ್ದಾಣಗಳನ್ನು ಆಧುನೀಕರಿಸಿ ಪ್ರಯಾಣಿಕರಿಗೆ ಅನುಕೂಲಕರ ಸೌಲಭ್ಯಗಳನ್ನು ಒದಗಿಸಲಾಗುವುದು. ಹೊಸ ರೈಲು ಮಾರ್ಗಗಳು ಜಾರಿಗೆ ಬಂದರೆ ಕೃಷಿ ಉತ್ಪನ್ನಗಳ ಸಾಗಣೆ ಸುಗಮವಾಗುವುದರ ಜೊತೆಗೆ ವ್ಯಾಪಾರ, ಉದ್ಯಮ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

₹5 ಕೋಟಿ ಮೊತ್ತ ಎಂಟು ಕ್ಷೇತ್ರಗಳಿಗೆ ಹಂಚಿಕೆ

ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ₹5 ಕೋಟಿ ಮೊತ್ತವನ್ನು ತಲಾ ₹80 ಲಕ್ಷಗಳಂತೆ ಕಂಪ್ಲಿ ಸೇರಿದಂತೆ ಎಂಟು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಾಮಾಣಿ ವಿರುದ್ಧ ಲೋಕಾಯುಕ್ತ ದಾಳಿ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣ ಕಾನೂನು ಪ್ರಕಾರ ಮುಂದುವರೆಯುತ್ತಿದ್ದು ತನಿಖಾ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆ ಎಂದರು. ಈ ಸಂದರ್ಭದಲ್ಲಿ ಕಲ್ಯಾಣ ಚೌಕಿಮಠದ ಕೆ.ಎಂ. ಬಸವರಾಜಶಾಸ್ತ್ರಿ, ಪ್ರಮುಖರಾದ ಪಿ. ಮೂಕಯ್ಯಸ್ವಾಮಿ, ಎಂ. ಸುಧೀರ್, ಹೊನ್ನಳ್ಳಿ ಗಂಗಾಧರ, ಎಚ್. ಹನುಮಂತಪ್ಪ, ಕೆ. ಬಸವರಾಜ, ಅಕ್ಕಿ ಜಿಲಾನ್, ಬಿ. ನಾರಾಯಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.