ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ನಗರದ ಶೋರೂಂ ಮುಂದೆ ಮುಂಜಾನೆ 5 ಗಂಟೆಯಿಂದಲೇ ಕ್ಯೂ ನಿಂತಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಮೈಸೂರು : ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ನಗರದ ಶೋರೂಂ ಮುಂದೆ ಮುಂಜಾನೆ 5 ಗಂಟೆಯಿಂದಲೇ ಕ್ಯೂ ನಿಂತಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ) ತಯಾರಿಸುವ ಈ ಸೀರೆಗಳನ್ನು ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದ ಮಳಿಗೆ, ಶ್ರೀ ಚಾಮರಾಜೇಂದ್ರ ಮೃಗಾಲಯ ಬಳಿ ಎರಡು, ಕಾಳಿದಾಸ ರಸ್ತೆ, ಯಾತ್ರಿ ನಿವಾಸ್‌, ಕೆ.ಆರ್‌.ವೃತ್ತದ ಬಳಿ ಇರುವ ಅಧಿಕೃತ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಬೆಳಗ್ಗೆ 10.30ಕ್ಕೆ ಮಳಿಗೆಯ ಬಾಗಿಲನ್ನು ತೆರೆಯಲಾಗುತ್ತದೆ. ಆದರೆ, ಮುಂಜಾನೆ 5 ಗಂಟೆಯಿಂದಲೇ ಗ್ರಾಹಕರು ಶೋರೂಂ ಮುಂದೆ ಸಾಲುಗಟ್ಟಿ ಕುಳಿತಿದ್ದ ದೃಶ್ಯ ಬುಧವಾರವೂ ಕಂಡು ಬಂತು.

ಸೀರೆ ಖರೀದಿಗೆ ಟೋಕನ್ ಸಿಸ್ಟಮ್ ಮಾಡಲಾಗಿದ್ದು, ಟೋಕನ್‌ ಪಡೆದ ಒಬ್ಬರಿಗೆ ಒಂದೇ ಸೀರೆಯನ್ನು ಕೊಡಲಾಗುತ್ತದೆ. ಹೀಗಾಗಿ, ಮೊದಲು ಬಂದವರಿಗೆ ಸೆಲೆಕ್ಷನ್‌ಗೆ ಅವಕಾಶ ಸಿಕ್ಕರೆ, ಕೊನೆ, ಕೊನೆಗೆ ಬಂದವರಿಗೆ ಸೆಲೆಕ್ಷನ್‌ಗೆ ಅವಕಾಶ ಇರಲಿಲ್ಲ. ಹೀಗಾಗಿ, ಐದಾರು ಗಂಟೆ ಕಾದು, ಕೊನೆ, ಕೊನೆಗೆ ಅಂಗಡಿ ಒಳಗೆ ಹೋದವರಿಗೆ ಬೇಕಾದ ಸೀರೆಯೂ ಸಿಗಲಿಲ್ಲ.

ತಾಯಿಗೆ ಸೀರೆ ಖರೀದಿಸಿದ ಶಾಸಕ ರಾಜೇಂದ್ರ:

ಕಾರ್ಖಾನೆಯ ಶೋ ರೂಂ ಮುಂದೆ ಮಾತನಾಡಿದ ಮಾಜಿ ಸಚಿವ ರಾಜಣ್ಣ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ರಾಜಣ್ಣ, ‘ನಾನು ಮೈಸೂರಿಗೆ ಬಂದಾಗಲೆಲ್ಲಾ ಮೈಸೂರು ಸಿಲ್ಕ್ ಸೀರೆ ಖರೀದಿ ಮಾಡುತ್ತೇನೆ‌. ಇಂದು ನನ್ನ ತಾಯಿಗೆ ಸೀರೆ ಖರೀದಿ ಮಾಡಲು ಬಂದಿದ್ದೇನೆ. ಮೈಸೂರು ಸಿಲ್ಕ್ ಸೀರೆಗೆ ಅದರದ್ದೇ ಆದ ಇತಿಹಾಸ ಇದೆ. ಸಾಕಷ್ಟು ಡಿಮ್ಯಾಂಡ್ ಸಹ ಇದೆ. ದಿನಕ್ಕೆ 40 ರಿಂದ 50 ಸೀರೆ ತಯಾರು ಮಾಡಲಾಗುತ್ತದೆ ಎಂದು ಹೇಳಿದ್ರು. ಸೀರೆ ಖರೀದಿ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಹೆಚ್ಚು ಸೀರೆ ತಯಾರು ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

ಕೆಲ ಮಹಿಳೆಯರು ಬೇಸರ

‘ಅಲ್ಲಿದ್ದ ಸಿಬ್ಬಂದಿ ಸೀರೆ ಮುಟ್ಟಿ ನೋಡುವ ಅವಕಾಶವನ್ನೂ ಕೊಡಲಿಲ್ಲ. ಸೀರೆ ಮುಟ್ಟಿ ನೋಡಲು ಹೋದರೆ ಬೇರೆ ಗ್ರಾಹಕರು ಬರುತ್ತಾರೆ ಹೋಗಿ ಅಂತಾರೆ. ನಾವೇನು ಬಾರ್ಗೇನ್ ಮಾಡುತ್ತಿಲ್ಲ, ಅವರು ಕೇಳಿದಷ್ಟೇ ಹಣ ಕೊಡುತ್ತೇವೆ. ಆದರೆ, ನಮ್ಮಿಷ್ಟದ ಸೀರೆ ತೆಗೆದುಕೊಳ್ಳೋದು ಬೇಡ್ವಾ. ಇದರಿಂದ ತುಂಬಾ ಬೇಸರ ಆಗಿದೆ. ಮತ್ತೆ ಮುಂದಿನ ವಾರ ಬಂದು ಸೀರೆ ಖರೀದಿಗೆ ಪ್ರಯತ್ನ ಮಾಡುತ್ತೇನೆ’ ಎಂದು ಕೆಲ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

‘ರ್‍ಯಾಕ್‌ನಲ್ಲಿ ಸೀರೆ ಇದ್ದರೂ ಕೊಡಲ್ಲ. ಕೆಲವರು ಅದನ್ನು ಬ್ಲಾಕ್ ಮಾಡಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ’ ಎಂದು ಕೆಲ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.