ಬೆಂಗಳೂರು(ಮಾ.01): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ವಸತಿ ಹಾಗೂ ವಸತಿಯೇತರ ಅಥವಾ ವಾಣಿಜ್ಯ ಕಟ್ಟಡಗಳ ತೆರಿಗೆ ಹೆಚ್ಚಳಕ್ಕೆ ಚಿಂತನೆ ನಡೆಸಿದೆ.

ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ಕಳೆದ ವರ್ಷವೇ ಪಾಲಿಕೆ ಅಧಿಕಾರಿಗಳು ವಸತಿ ಕಟ್ಟಡಗಳಿಗೆ ಶೇ.25ರಷ್ಟುಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ.30ರಷ್ಟುಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದ್ದರು.

ವಿಶ್ವದ ಶೇ.70ರಷ್ಟು ಜನರಿಗೆ ಕೊರೋನಾ ಭೀತಿ : ಹೊರಬಿತ್ತು ಮತ್ತೊಂದು ಆತಂಕದ ವಿಚಾರ

ಪ್ರಸ್ತುತ ಇದೇ ಪ್ರಮಾಣದಲ್ಲೇ ತೆರಿಗೆ ಹೆಚ್ಚಿಸಬೇಕೆ ಅಥವಾ ಕಡಿಮೆ ಮಾಡಬೇಕೆ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಪಾಲಿಕೆಯ ಕೆಲ ಅಧಿಕಾರಿ ಮೂಲಗಳ ಪ್ರಕಾರ ಹಳೆಯ ಪ್ರಸ್ತಾವನೆಯ ಪ್ರಕಾರವೇ ತೆರಿಗೆ ಹೆಚ್ಚಿಸುವ ಆಲೋಚಿಸಲಾಗುತ್ತಿದೆ. ಆದರೆ, ಇನ್ನು ಕೆಲ ಮೂಲಗಳು ಇದನ್ನು ವಸತಿ ಸ್ವತ್ತುಗಳಿಗೆ ಶೇ.10ರಷ್ಟುಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.15ರಷ್ಟಕ್ಕೆ ನಿಗದಿಗೊಳಿಸುವ ಚಿಂತನೆ ಇದೆ ಎನ್ನುತ್ತವೆ.

ಬಿಬಿಎಂಪಿಯ ಕೆಎಂಸಿ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಆದರೂ, 2008ರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಮುಂದೂಡಿಕೊಂಡು ಬಂದಿದ್ದ ಬಿಬಿಎಂಪಿ 2016-17ನೇ ಸಾಲಿನಲ್ಲಿ ಪರಿಷ್ಕರಿಸಿ ವಸತಿ ಸ್ವತ್ತುಗಳಿಗೆ ಶೇ.20ರಷ್ಟುಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟುಆಸ್ತಿ ತೆರಿಗೆ ಹೆಚ್ಚಳ ಮಾಡಿತ್ತು. 2019-20ನೇ ಸಾಲಿಗೆ ಮೂರು ವರ್ಷ ಕಳೆದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಿಸಲು ಪ್ರಸ್ತಾವನೆ ಸಿದ್ಧಪಡಿಸಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಜಾರಿಗೊಳಿಸಲು ಆಗಿರಲಿಲ್ಲ. ಇದೀಗ ಈ ವರ್ಷವಾದರೂ ತೆರಿಗೆ ಹೆಚ್ಚಿಸಿ ಪಾಲಿಕೆಗೆ ಇನ್ನೂ ನೂರಾರು ಕೋಟಿ ರು. ಆದಾಯ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಅಧಿಕಾರಿಗಳದ್ದಾಗಿದೆ.

ಬೆಂಗಳೂರಲ್ಲಿ ಸೈಟ್ ಹೊಂದಿರುವವರೇ ಇಲ್ಲೊಮ್ಮೆ ಗಮನಿಸಿ ! ಹಲವರಿಗೆ ಕಾದಿದೆ ನಿರಾಸೆ

ಆದರೆ, ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಯ ಕಾರ್ಪೊರೇಟರ್‌ಗಳು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಈ ವರ್ಷಾಂತ್ಯದ ವೇಳೆಗೆ ಬಿಬಿಎಂಪಿ ಚುನಾವಣೆ ಎದುರಾಗಲಿದ್ದು, ಈಗ ತೆರಿಗೆ ಹೆಚ್ಚಿಸಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಲಯವಾರು ಯೂನಿಟ್‌ ದರದ ಮೇಲೆ ತೆರಿಗೆ ಹೆಚ್ಚಿಸಲು ಅವಕಾಶವಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪಾಲಿಕೆಗೆ ಆರ್ಥಿಕ ಸಂಕಷ್ಟಉಂಟಾಗುತ್ತಿದೆ ಎಂದು ಕಳೆದ ವರ್ಷದ ವರದಿಯಲ್ಲಿ ಲೆಕ್ಕಪರಿಶೋಧಕರು ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಕಂದಾಯ ವಿಭಾಗವು ತೆರಿಗೆ ಪರಿಷ್ಕರಣೆಗೆ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಪಡೆದುಕೊಂಡು ಪ್ರಸ್ತಾವನೆ ಸಿದ್ಧಪಡಿಸಿತ್ತು.

ಇಂದಿರಾ ಕ್ಯಾಂಟೀನ್ ಊಟ, ತಿಂಡಿ ದುಬಾರಿ : ಎಷ್ಟಾಗಲಿದೆ ಏರಿಕೆ..?

ಬಿಬಿಎಂಪಿ ಆದಾಯ ಹೆಚ್ಚಿಸಲು ಕೆಎಂಸಿ ನಿಯಮದಂತೆ ಪ್ರತೀ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ. ಆ ಪ್ರಕಾರ ಕಳೆದ ವರ್ಷವೇ ತೆರಿಗೆ ಹೆಚ್ಚಳವಾಗಬೇಕಿತ್ತು. ಆದರೆ, ಆಗಿರಲಿಲ್ಲ. ಈ ವರ್ಷ ಹೆಚ್ಚಳ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದ್ದಾರೆ.