ಲಿಂಗರಾಜು ಕೋರಾ

ಬೆಂಗಳೂರು [ಫೆ.29]:  ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಲಕ್ಷಾಂತರ ‘ಬಿ’ ಖಾತಾ ಆಸ್ತಿಗಳಿಗೆ ಸದ್ಯಕ್ಕಂತೂ ‘ಎ’ ಖಾತಾ ಮಾನ್ಯತೆಯ ಭಾಗ್ಯ ಸಿಗುವುದಿಲ್ಲ. ಏಕೆಂದರೆ, ಈ ಬಿ ಖಾತಾಗಳಿಗೆ ಎ ಖಾತಾ ನೀಡುವ ಸಂಬಂಧ ಪಾಲಿಕೆಯ ಕಾನೂನು ವಿಭಾಗ ಸಿದ್ಧಪಡಿಸಿದ್ದ ಕರಡು ನಿಯಮಾವಳಿಗೆ ಆಯುಕ್ತ ನೇತೃತ್ವದ ಸಮಿತಿ ಒಪ್ಪಿಗೆ ಸಿಕ್ಕಿಲ್ಲ.

ಈಗಾಗಲೇ ಬಿ ಖಾತಾ ಹೊಂದಿರುವ ಕಟ್ಟಡಗಳನ್ನು ಹೊರಗಿಟ್ಟು, ಕೇವಲ ಬಿ ಖಾತಾ ಹೊಂದಿರುವ ನಿವೇಶನಗಳನ್ನು ‘ಎ’ ಖಾತಾ ನೀಡುವ ನಿಟ್ಟಿನಲ್ಲಿ ಕಾನೂನು ಕೋಶದಿಂದ ಕರಡು ನಿಯಮಾವಳಿ ರಚನೆ ಮಾಡಲಾಗಿತ್ತು. ಹಾಗಾಗಿ ಇದನ್ನು ಒಪ್ಪದ ಸಮಿತಿಯು ಕಟ್ಟಡ ನಿರ್ಮಾಣವಾಗಿರುವ ಬಿ ಖಾತಾ ಸ್ವತ್ತುಗಳನ್ನು ಸೇರಿಸಿ ಕರಡು ಪರಿಷ್ಕರಿಸಿ ತರುವಂತೆ ಸೂಚನೆ ನೀಡಿದೆ.

ಇದರಿಂದ ತಮ್ಮ ಆಸ್ತಿಗಳಿಗೂ ಎ ಖಾತಾ ಸಿಗುತ್ತದೆ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ನಕ್ಷೆ ಮಂಜೂರಾತಿ, ವಾಸಯೋಗ್ಯ ಪ್ರಮಾಣ ಪತ್ರ ದೊರೆಯುತ್ತವೆ. ಆಸ್ತಿ ಮೌಲ್ಯ ಹೆಚ್ಚಾಗಲಿದೆ ಎಂದುಕೊಂಡಿದ್ದ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿ ಖಾತಾ ಸ್ವತ್ತುದಾರರ ಹಲವು ವರ್ಷಗಳ ಕನಸು ನನಸಾಗುವ ಕಾಲ ಸಮೀಪಿಸುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ದೂರ ಸರಿದಂತಾಗಿದೆ.

‘ಬಿ’ ಖಾತಾ ಹೊಂದಿರುವ ಆಸ್ತಿಗಳಿಂದ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು, ಅವುಗಳಿಗೆ ‘ಎ’ ಖಾತೆ ನೀಡುವ ವಿಚಾರವು ಪಾಲಿಕೆಯ ಕೌನ್ಸಿಲ್‌ ಸಭೆಗಳಲ್ಲಿ ಹಲವು ಸಲ ಚರ್ಚೆಗೆ ಬಂದಿದೆ. 2018ರ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ‘ಎ’ ಖಾತೆ ನೀಡುವ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂದಿನ ಆಯುಕ್ತರು ‘ಕೆಎಂಸಿ ಕಾಯ್ದೆ ಪ್ರಕಾರ ತೆರಿಗೆ ಸಂಗ್ರಹಕ್ಕಷ್ಟೇ ನಮೂನೆ ‘ಎ’ ಮತ್ತು ನಮೂನೆ ‘ಬಿ’ ನಲ್ಲಿ ಆಸ್ತಿ ನಿರ್ವಹಿಸಲಾಗುತ್ತಿದೆ. ಇವು ಚರಾಸ್ತಿ ದಾಖಲೆಗಳೇ ಹೊರತು, ಹಕ್ಕಿಗೆ ಸಂಬಂಧಪಟ್ಟದಾಖಲೆಗಳಲ್ಲ. ಹಾಗಾಗಿ, ‘ಬಿ’ ಖಾತಾಗಳಲ್ಲಿನ ಆಸ್ತಿಗಳಿಗೂ ಸುಧಾರಣಾ ವೆಚ್ಚ ಪಾವತಿಸಿಕೊಂಡು ಅವುಗಳನ್ನು ‘ಎ’ ಖಾತಾ ನೋಂದಣಿ ಮಾಡಿಸಬಹುದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಈ ಸಂಬಂಧ ಅಡ್ವೊಕೇಟ್‌ ಜನರಲ್‌ ಅವರ ಸಲಹೆ ಕೇಳಿದಾಗ, ಇದಕ್ಕೆ ಅವರು ಪೂರಕ ಅಭಿಪ್ರಾಯ ನೀಡಿದ್ದರು.

ಪ್ರಸ್ತುತ ಕಾನೂನಿನಲ್ಲಿ ‘ಬಿ’ ಖಾತಾವನ್ನು ‘ಎ’ ಖಾತಾವನ್ನಾಗಿ ಪರಿವರ್ತಿಸಲು ಅವಕಾಶವಿಲ್ಲ. ಹೀಗಾಗಿ, ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ‘ಎ’ ಖಾತೆ ನೀಡಲು ನಿಯಮಗಳನ್ನು ರೂಪಿಸಬೇಕಿದೆ. ಇದಕ್ಕಾಗಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಇದರಲ್ಲಿ ನಗರ ಜಿಲ್ಲಾಧಿಕಾರಿ, ಬಿಡಿಎ ಆಯುಕ್ತರು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿದ್ದಾರೆ. ಈ ಸಮಿತಿಯು ಸಭೆ ಸೇರಿ ಪಾಲಿಕೆಯ ಕಾನೂನು ವಿಭಾಗಕ್ಕೆ ಕರಡು ನಿಯಾಮಾವಳಿ ರಚಿಸಿ ಕೊಡುವಂತೆ ಸೂಚಿಸಿತ್ತು. ನಂತರ ಅದನ್ನು ಸಮಿತಿಯಲ್ಲಿಟ್ಟು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಿತ್ತು. ಅದರಂತೆ, ಬಿಬಿಎಂಪಿ ತನ್ನ ಕಾನೂನು ವಿಭಾಗದ ಮೂಲಕ ಕರಡು ರಚಿಸುವ ಕಾರ್ಯ ನಡೆಸಿತ್ತಾದರೂ ಅದನ್ನು ಆಯುಕ್ತರ ನೇತೃತ್ವದ ಸಮಿತಿ ಒಪ್ಪಿಲ್ಲ. ಇದೀಗ ಮತ್ತೆ ಸಮಿತಿಯ ಸಲಹೆಗಳ ಆಧಾರದಲ್ಲಿ ಕರಡು ನಿಯಮ ಪರಿಷ್ಕರಿಸಬೇಕಾಗಿದೆ. ಇದಕ್ಕೆ ಇನ್ನಷ್ಟುಕಾಲಾವಕಾಶ ಅಗತ್ಯವಿದ್ದು, ಸದ್ಯಕ್ಕಂತೂ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ಭಾಗ್ಯ ಸಿಗದಂತಾಗಿದೆ.

ಕಟ್ಟಡಗಳಿಗೆ ಅಕ್ರಮ- ಸಕ್ರಮ ವಿಚಾರಣೆ ಅಡ್ಡಿ!

ಪಾಲಿಕೆ ಅಧಿಕಾರಿಗಳು ಹೇಳುವ ಪ್ರಕಾರ, ನಗರದಲ್ಲಿ ಸುಮಾರು 4 ಲಕ್ಷದಷ್ಟು‘ಬಿ’ ಖಾತಾ ಹೊಂದಿರುವ ಸ್ವತ್ತುಗಳಿವೆ. ಈ ಪೈಕಿ ಖಾಲಿ ನಿವೇಶನಗಳಿಗಿಂತ ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಬಿ ಖಾತಾ ಸ್ವತ್ತುಗಳ ಸಂಖ್ಯೆಯೇ ಹೆಚ್ಚು. ಅದರಲ್ಲೂ ಹಳೆಯ 64 ವಾರ್ಡುಗಳ ವ್ಯಾಪ್ತಿಯಲ್ಲಿ ಶೇ.90ಕ್ಕೂ ಹೆಚ್ಚು ಬಿ ಸ್ವತ್ತುಗಳಲ್ಲಿ ಕಟ್ಟಡ ನಿರ್ಮಾಣವಾಗಿದೆ. ಇನ್ನು ಹೊಸದಾಗಿ ಸೇರಿದ 7 ನಗರಸಭೆ, 110 ಹಳ್ಳಿಗಳ ವ್ಯಾಪ್ತಿಯಲ್ಲೂ ಶೇ.50ಕ್ಕಿಂತ ಹೆಚ್ಚು ಬಿ ಖಾತಾ ಸ್ವತ್ತುಗಳಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಿಯಮ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಸಂಬಂಧದ ‘ಅಕ್ರಮ ಸಕ್ರಮ’ ಪ್ರಕರಣ ವಿಚಾರಣಾ ಹಂತದಲ್ಲಿ ಇರುವುದರಿಂದ, ಬಿ ಖಾತಾ ಸ್ವತ್ತುಗಳಲ್ಲಿನ ಕಟ್ಟಡಗಳಿಗೆ ಎ ಖಾತಾ ನೀಡಲು ನಿಯಮಾವಳಿ ರೂಪಿಸಲು ಬರುವುದಿಲ್ಲ. ಹಾಗಾಗಿ ಕೇವಲ ಖಾಲಿ ನಿವೇಶನಗಳಿಗೆ ಮಾತ್ರ ಸದ್ಯ ಬಿ ಖಾತಾ ನೀಡಲು ಕಾನೂನು ವಿಭಾಗ ಕರಡು ರೂಪಿಸಲಾಗಿತ್ತು. ಆದರೆ, ಸಮಿತಿ ಇದನ್ನು ಒಪ್ಪಲಿಲ್ಲ ಎಂದು ಪಾಲಿಕೆ ಕಂದಾಯ ವಿಭಾಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 4 ಸಾವಿರ ಕೋಟಿ ಆದಾಯ ನಿರೀಕ್ಷೆ

ನಗರದಲ್ಲಿರುವ ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತೆ ನೀಡಿದರೆ, ಮಾಲಿಕರು ಪಾಲಿಕೆಗೆ ಸುಧಾರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಪಾಲಿಕೆಗೆ ಸುಮಾರು 4 ಸಾವಿರ ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. 30/40 ಅಳತೆಯ ನಿವೇಶನಗಳಿಗೆ ಅಂದಾಜು .18 ಸಾವಿರ, 40/60 ಅಳತೆಯ ನಿವೇಶನಗಳಿಗೆ 36 ಸಾವಿರ ರು. ಮತ್ತು 20/30 ಅಳತೆಯ ನಿವೇಶನ ಮಾಲಿಕರು 9 ಸಾವಿರ ರು. ಅಭಿವೃದ್ಧಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಏನಿದು ಎ, ಬಿ ಖಾತಾ?

ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿದ ಮತ್ತು ಬಿಡಿಎ, ಬಿಎಂಆರ್‌ಡಿಎ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರದೇಶ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿದ ಬಡಾವಣೆಗಳು, ವಸತಿ ಸಮುಚ್ಚಯಗಳಿಗೆ ‘ಎ’ ಖಾತೆ ನೀಡಲಾಗುತ್ತದೆ.

ಕ್ರಯಪತ್ರ, ತೆರಿಗೆ ಪಾವತಿ ದಾಖಲೆ, ನಕ್ಷೆ ಮಂಜೂರಾತಿ, ಸ್ವಾಧೀನ ಪ್ರಮಾಣಪತ್ರ, ಭೂ ಪರಿವರ್ತನೆಯ ದಾಖಲೆಗಳನ್ನು ಒದಗಿಸಿದರೆ ‘ಎ’ ಖಾತೆ ಕೊಡಲಾಗುತ್ತದೆ. ಭೂಪರಿವರ್ತನೆಯಾಗದ ಕಂದಾಯ ಭೂಮಿಯಲ್ಲಿರುವ ನಿವೇಶನಗಳು, ಮನೆಗಳಿಗೆ ಕೇವಲ ಆಸ್ತಿ ತೆರಿಗೆ ವಸೂಲಿ ಮಾಡುವ ದೃಷ್ಟಿಯಿಂದ ‘ಬಿ’ ಖಾತೆ ನೀಡಲಾಗುತ್ತದೆ. ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎಯಿಂದ ಅನುಮತಿ ಪಡೆಯದೆ ನಿಯಮ ಉಲ್ಲಂಘಿಘಿಸಿ ನಿರ್ಮಿಸಿರುವ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ‘ಎ’ ಖಾತೆ ನೀಡುವುದಿಲ್ಲ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಮಾತ್ರ ‘ಬಿ’ ಖಾತೆಗಳನ್ನು ನೀಡಲಾಗುತ್ತಿದೆ.

 ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡುವ ಸಂಬಂಧ ಪಾಲಿಕೆಯ ಕಾನೂನು ಕೋಶ ಸಿದ್ಧಪಡಿಸಿದ್ದ ಕರಡು ನಿಯಮಾವಳಿಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿರುವ ಸ್ವತ್ತುಗಳನ್ನು ಹೊರಗಿಡಲಾಗಿತ್ತು. ಹಾಗಾಗಿ ಒಪ್ಪದೆ ಕಟ್ಟಡಗಳಿರುವ ಸ್ವತ್ತುಗಳನ್ನೂ ಸೇರಿಸಿ ನಿಯಮಾವಳಿ ಪರಿಷ್ಕರಿಸಿಕೊಡುವಂತೆ ಸೂಚಿಸಲಾಗಿದೆ. ಪರಿಷ್ಕೃತ ಕರಡು ನಿಯಮಾವಳಿ ನೀಡಿದ ಬಳಿಕ ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಲಾಗುವುತ್ತದೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ.