ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಫೈರೋಜ್‌ ಅನುಮಾನಸ್ಪದವಾಗಿ ಮೃತಪಟ್ಟಪ್ರಕರಣ ಹೊಸ ತಿರುವು ಪಡೆದಿದ್ದು, ಆತ ಹಲ್ಲೆಗೊಳಗಾಗಿ ವಿಚಾರಣಾಧೀನ ಕೈದಿ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಜೈಲು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಹೋಟೆಲ್‌ ಉದ್ಯೋಗಿದ್ದ ಡಿ.ಜೆ.ಹಳ್ಳಿ ನಿವಾಸಿ ಫೈರೋಜ್‌ (21) ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಜ.9ರಂದು ಡಿ.ಜೆ.ಹಳ್ಳಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ.

ಬಲ ಬದಿಯ ಯಕೃತಿನ ರಕ್ತ ಹೆಪ್ಪುಗಟ್ಟುವಿಕೆ (ರೈಟ್‌ ವಿವರ್‌ ಲಿಂಬ್‌ ಹ್ಯಾಮಟೋಮಾ) ಖಾಯಿಲೆಯಿಂದ ಬಳಲುತ್ತಿದ್ದ ಫೈರೋಜ್‌ಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಬಿಗಡಾಯಿಸಿದಾಗ ಫೈರೋಜ್‌ನನ್ನು ಜೈಲು ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ಜ.21ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ.23ರಂದು ಸಂಜೆ ಚಿಕಿತ್ಸೆ ಫಲಿಸದೆ ಫೈರೋಜ್‌ ಮೃತಪಟ್ಟಿದ್ದ. ಫೈರೋಜ್‌ ಸಾವಿಗೆ ಜೈಲು ಭದ್ರತಾ ಸಿಬ್ಬಂದಿ ಕಾರಣ ಎಂದು ಆರೋಪ ಕೇಳಿಬಂದಿತ್ತು.

ಜೈಲಿನ ಪೊಲೀಸ್‌ ಸಿಬ್ಬಂದಿ ಫೈರೋಜ್‌ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ. ಆತನ ಮೈ ಮೇಲೆ ಗಾಯದ ಗುರುತುಗಳಿವೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಫೈರೋಜ್‌ನ ಕುಟುಂಬಸ್ಥರು ಕೋರ್ಟ್‌ಗೆ ಮನವಿ ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಫೈರೋಜ್‌ನ ದೇಹದ ಮೇಲೆ ಹಲ್ಲೆಯಾಗಿದೆ ಎಂದು ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.

ವರದಿ ಬಳಿಕ ಪರಪ್ಪನ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ಅವರು ಕೊಲೆ, ಒಳಸಂಚು ಪ್ರಕರಣ ದಾಖಲಿಸಿಕೊಂಡು ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಫೈರೋಜ್‌ ಜೈಲಿನಲ್ಲಿದ್ದ ವೇಳೆ ಬೇರೆ ಕೈದಿಗಳ ಕೊಠಡಿಗೆ ಹೋಗಿದ್ದ. ಆ ವೇಳೆ ಜಗಳ ನಡೆದು ಇತರ ಕೈದಿಗಳು ಈತನ ತೊಡೆಯ ಭಾಗಕ್ಕೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಜ.9ರಂದು ರಾತ್ರಿ ವೇಳೆ ಫೈರೋಜ್‌ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಡಿ.ಜೆ.ಹಳ್ಳಿ ಪೊಲೀಸರು ಫೈರೋಜ್‌ನನ್ನು ತಡೆದು ನಿಲ್ಲಿಸಿದ್ದರು. ದಾಖಲೆ ಇಲ್ಲದ ಕಾರಣ ಆತನ ಬಳಿ ಹಣ ನೀಡುವಂತೆ ಒತ್ತಾಯ ಮಾಡಿದ್ದರು. ಹಣ ನೀಡಲು ನಿರಾಕರಿಸಿದಾಗ ಆತನ ಬೈಕ್‌ನಲ್ಲಿ ಪೊಲೀಸರೇ ಮಾದಕ ದ್ರವ್ಯ ಇಟ್ಟು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು ಎಂದು ಪೋಷಕರು ಆರೋಪಿಸಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.