ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. 91 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ತಾರಾಲಯವು 15 ಡಿಗ್ರಿ ಓರೆಯಾದ ಎಲ್ಇಡಿ ಗುಮ್ಮಟವನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಯುವ ವಿಜ್ಞಾನಿಗಳಿಗೆ ಖಗೋಳ ವಿಜ್ಞಾನದ ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನವೆಂಬರ್ 13ರಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿಶ್ವದ ಮೊದಲ ಟಿಲ್ಟೆಡ್ LED ಡೋಮ್ ಪ್ಲಾನೆಟೋರಿಯಂ ಲೋಕಾರ್ಪಣೆ
ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಾರಾಲಯ ನಿರ್ಮಾಣವಾಗಿದೆ. ಇದಕ್ಕಾಗಿ ವಿಶ್ವವಿದ್ಯಾನಿಲಯ ಮೂರು ಎಕರೆ ಜಾಗ ನೀಡಿದ್ದು, ಬರೋಬ್ಬರಿ 91 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಾಕಾರಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ MPLADS ನಿಧಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ರೂಪುಗೊಂಡಿದೆ.
15 ಡಿಗ್ರಿ ಓರೆಯಾದ ಎಲ್ಇಡಿ ಗುಮ್ಮಟ
ವಿಶ್ವದಲ್ಲೇ ವಿಶೇಷ ಎನ್ನುವ ಈ ತಾರಾಲಯದ ಪ್ರಮುಖ ಆಕರ್ಷಣೆಯೇ 15 ಡಿಗ್ರಿ ಓರೆಯಾದ ಎಲ್ಇಡಿ ಗುಮ್ಮಟ. ಸುಮಾರು 15 ಮೀಟರ್ ವ್ಯಾಪ್ತಿಯ ಡೋಮ್ ಸಂಪೂರ್ಣ ಎಲ್ಇಡಿ ಪ್ಯಾನೆಲ್ಗಳಿಂದ ನಿರ್ಮಾಣವಾಗಿದೆ. ಸಾಮಾನ್ಯ ತಾರಾಲಯಗಳಲ್ಲಿರುವ ಪ್ರೊಜೆಕ್ಟರ್ ತಂತ್ರಜ್ಞಾನಕ್ಕೆ ಬದಲಾಗಿ, ಗುಮ್ಮಟದ ಎಲ್ಇಡಿ ಪರದೆಯಲ್ಲೇ ನೇರವಾಗಿ ಆಕಾಶ, ಗ್ರಹಗಳು ಮತ್ತು ನಕ್ಷತ್ರಗಳ ದೃಶ್ಯಾವಳಿ ಮೂಡಿಬರಲಿದೆ.
ಯುವ ವಿಜ್ಞಾನಿಗಳಿಗೆ ತರಬೇತಿಗೆ ಅನುಕೂಲ
8K ರೆಸಲ್ಯೂಶನ್ನಲ್ಲಿ ಬಾಹ್ಯಾಕಾಶದ ಅದ್ಭುತ ಅನುಭವ ನೀಡುವ ಈ ತಾರಾಲಯದಲ್ಲಿ ಏಕಕಾಲಕ್ಕೆ 150 ಮಂದಿ ಕುಳಿತು ವೀಕ್ಷಿಸಬಹುದು. ಫ್ರಾನ್ಸ್ನ RSA Cosmos ಮತ್ತು ಜಪಾನ್ನ Konica Minolta ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿರುವ SkyExplorer ಸಾಫ್ಟ್ವೇರ್ ಇಲ್ಲಿ ಬಳಕೆಯಾಗಲಿದೆ. ಇದು ಕೇವಲ ಮನರಂಜನೆ ಮತ್ತು ಆಕಾಶ ವೀಕ್ಷಣೆಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ವಿಜ್ಞಾನಿಗಳಿಗೆ ಖಗೋಳ ವಿಜ್ಞಾನದ ತರಬೇತಿ ನೀಡುವ ವಿಶೇಷ ಕೇಂದ್ರವಾಗಿಯೂ ರೂಪುಗೊಳ್ಳಲಿದೆ.
ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ COSMOS ಕಾಸ್ಮಾಲಜಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಭಾರತದ ಅತ್ಯಾಧುನಿಕ ಟೆಲಿಸ್ಕೋಪ್ಗಳಿಂದ ಲಭ್ಯವಾಗುವ ದತ್ತಾಂಶವನ್ನು ವಿಶ್ಲೇಷಿಸುವ ತರಬೇತಿಯೂ ಇಲ್ಲಿ ದೊರೆಯಲಿದೆ.
ಒಟ್ಟಿನಲ್ಲಿ, ಮೈಸೂರಿನ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರಕ್ಕೆ ಹೊಸ ಗರಿ ಮೂಡಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಸಿಗಲಿದೆ. ವಿಶ್ವದ ಗಮನ ಸೆಳೆಯುವ ಅತ್ಯಾಧುನಿಕ ತಾರಾಲಯದ ಮೂಲಕ ಮೈಸೂರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)






