ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಟ್ರಸ್ಟಿಯೊಬ್ಬರ ಮನೆಯಲ್ಲಿ 5 ವರ್ಷಗಳಿಂದ 40 ಲಕ್ಷ ರೂ. ಕದ್ದಿದ್ದ ಹೌಸ್‌ ಕೀಪಿಂಗ್‌ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಹಣವನ್ನು ಆತ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದಾನೆ. ಮತ್ತೊಂದೆಡೆ, ಜೆ.ಪಿ.ನಗರದಲ್ಲಿ ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ಡೆಲಿವರಿ ಬಾಯ್ ಮೃತಪಟ್ಟಿದ್ದಾನೆ.

ಬೆಂಗಳೂರು: ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಮಹಿಳಾ ಟ್ರಸ್ಟಿಯೊಬ್ಬರ ಮನೆಯ ಲಾಕರ್‌ನಲ್ಲಿ ಐದು ವರ್ಷಗಳಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರು. ಕಳವು ಮಾಡಿದ್ದ ಹೌಸ್‌ ಕೀಪಿಂಗ್‌ ವ್ಯಕ್ತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಶ್ರೀನಿವಾಸ್‌ ಎಸ್‌.ನಾಡಗೌಡ (36) ಬಂಧಿತ. ಜೆ.ಪಿ.ನಗರ 8ನೇ ಹಂತದ ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಟ್ರಸ್ಟಿ ಕೆ.ಎನ್‌.ಶರತ್‌ ಬಾಬು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ

ಬಂಧಿತ ಆರೋಪಿ ಶ್ರೀನಿವಾಸ್‌ ಕಳೆದ 16 ವರ್ಷಗಳಿಂದ ಶ್ರೀ ಸಾಯಿ ದರ್ಶನಂ ಟ್ರಸ್ಟ್‌ನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ. ಟ್ರಸ್ಟ್‌ನ ಮತ್ತೊಬ್ಬ ಟ್ರಸ್ಟಿ ಯಶೋಧ ಅವರು ದಸರಾ ರಜೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಇದಕ್ಕೂ ಮನೆಯ ಲಾಕರ್‌ನಲ್ಲಿ 2.7 ಲಕ್ಷ ರು. ನಗದು ಇರಿಸಿದ್ದರು. ಮನೆಗೆ ವಾಪಾಸ್‌ ಬಂದು ನೋಡಿದಾಗ ಲಾಕರ್‌ನಲ್ಲಿ ನಗದು ಇರಲಿಲ್ಲ. ಬಳಿಕ ಆರೋಪಿ ಶ್ರೀನಿವಾಸ್‌ನನ್ನು ಕರೆದು ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದಿದ್ದಾನೆ. ಬಳಿಕ ಆತನ ಪರ್ಸ್‌ ಪರಿಶೀಲಿಸಿದಾಗ ಲಾಕರ್‌ನ ನಕಲಿ ಕೀ ಇರುವುದು ಪತ್ತೆಯಾಗಿದೆ. ಈ ವೇಳೆ ಶ್ರೀನಿವಾಸ್‌ನನ್ನು ಪ್ರಶ್ನೆ ಮಾಡಿದಾಗ ಲಾಕರ್‌ನಲ್ಲಿದ್ದ ಹಣ ಕದ್ದಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಬೆಟ್ಟಿಂಗ್‌ ಆಡಿ ಹಣ ಕಳೆದ!

ಆರೋಪಿ ಶ್ರೀನಿವಾಸ್‌ ಟ್ರಸ್ಟಿ ಯಶೋಧ ಅವರ ಮನೆಯ ಲಾಕರ್‌ನಲ್ಲಿ ಕದ್ದ ಲಕ್ಷಾಂತರ ರು. ಹಣವನ್ನು ಐಪಿಎಲ್‌ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ ಆಟವಾಡಿ ಕಳೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಬೈಕ್‌ ಡಿಕ್ಕಿ ಆಗಿ ಡೆಲಿವರಿ ಬಾಯ್‌ ಸಾವು

ರಸ್ತೆ ಬದಿ ನಿಂತಿದ್ದ ಕಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೆ.ಪಿ.ನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುಟ್ಟೇನಹಳ್ಳಿ ನಿವಾಸಿ ಸುರೇಶ್‌ (33) ಮೃತ ಸವಾರ. ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಸುರೇಶ್‌ ಕೆಲಸ ಮುಗಿಸಿಕೊಂಡು ತಡರಾತ್ರಿ ಬೈಕ್‌ನಲ್ಲಿ ಮನೆಗೆ ಹೊರಟಿದ್ದ. ಪುಟ್ಟೇನಹಳ್ಳಿ ಪಾಳ್ಯ ರಸ್ತೆಯಲ್ಲಿ ಹೋಗುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸಹಿತ ರಸ್ತೆಗೆ ಬಿದ್ದ ಸುರೇಶ್‌, ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.