Asianet Suvarna News Asianet Suvarna News

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ದೊರೆಯದ ವೇತನ : ಸಿಬ್ಬಂದಿಗೂ ಕೊರತೆ

  • ಕೊರೋನಾ ವಾರಿಯರ್‌ಗಳಿಗೆ ಇಲ್ಲಿ ವೇತನ ಕೂಡ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ
  • ತಾಲೂಕು ಪಂಚಾಯ್ತಿ ಅಧೀನದಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ವೇತನ ಸಮಸ್ಯೆ
  • ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮೂರು ತಿಂಗಳವರೆಗೂ ವೇತನ ಪಾವತಿಯಾಗುತ್ತಿಲ್ಲ
primary health centre Employees Facing Salary issue in mysore snr
Author
Bengaluru, First Published Aug 11, 2021, 1:32 PM IST
  • Facebook
  • Twitter
  • Whatsapp

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಆ.11):  ಈ ಕೋವಿಡ್‌ ಕಾಲಘಟ್ಟದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕೊರೋನಾ ವಾರಿಯರ್‌ಗಳ ಬಗ್ಗೆಯೇ ಮಾತು. ಆದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳಿರಲಿ ವೇತನ ಕೂಡ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ ಎಂಬುದು ತಾಲೂಕು ಪಂಚಾಯ್ತಿ ಅಧೀನದಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಯನ್ನು ನೋಡಿದಾಗ ಅರ್ಥವಾಗುತ್ತದೆ!.

ಜಿಲ್ಲಾ ಪಂಚಾಯ್ತಿ ಅಧೀನದಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತದೆ. ಆದರೆ ಇದೇ ಮಾತನ್ನು ತಾಲೂಕು ಪಂಚಾಯ್ತಿ ಅಧೀನಕ್ಕೆ ಬರುವ ಆರೋಗ್ಯ ಇಲಾಖೆಯ ಸಿಬ್ಬಂದಿಯ ವಿಷಯದಲ್ಲಿ ಹೇಳುವಂತಿಲ್ಲ. ಏಕೆಂದರೆ ಲಭ್ಯವಿರುವ ಮಾಹಿತಿಯ ಪ್ರಕಾರ, ತಾಪಂ ಅಧೀನದ ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮೂರು ತಿಂಗಳವರೆಗೂ ವೇತನ ಪಾವತಿಯಾಗುತ್ತಿಲ್ಲ. ಇದರಿಂದ ಅವರು ಮಾಸಿಕ ಕಂತು ಪಾವತಿ, ಕುಟುಂಬ ನಿರ್ವಹಣೆಗಾಗಿ ಪಡಬಾರದ ಕಷ್ಟಅನುಭವಿಸುತ್ತಿದ್ದಾರೆ.

ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಕೂಡ ಕೊರೋನಾ ವಾರಿಯ​ರ್ಸ್

ಈ ಬಗ್ಗೆ ತಾಪಂ ಅಧಿಕಾರಿಗಳನ್ನು ವಿಚಾರಿಸಿದರೆ, ಆಧಾರ್‌ ಕಾರ್ಡ್‌ ಲಿಂಕ್‌ ಮಾಡುತ್ತಿರುವುದರಿಂದ ವೇತನ ವಿಳಂಬವಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಹೀಗಾಗಿ ಅವರಿಗೆ ಸೂಕ್ತ ಸಲಹೆ ನೀಡಿ, ಲಸಿಕೆ ಹಾಕಲು ಪ್ರತಿ ಕೇಂದ್ರದಲ್ಲೂ ಸ್ಟಾಫ್‌ ನರ್ಸ್‌ ಇರಬೇಕು. ವಯಸ್ಸಾದವರಿಗೆ ರಕ್ತದೊತ್ತಡ ತಪಾಸಣೆ ಮಾಡಿ, ಲಸಿಕೆ ಹಾಕಬೇಕಾಗುತ್ತದೆ. ಇದಕ್ಕಾಗಿ ಸಿಬ್ಬಂದಿ ಬೇಕು. ಪ್ರಯೋಗಾಲಯ ತಂತ್ರಜ್ಞರು ಕೂಡ‚ ಬೇಕು. ಆದರೆ ಇದ್ಯಾವ ಸಿಬ್ಬಂದಿಯೂ ಇಲ್ಲ. ಪ್ರಸ್ತುತ ಕೇವಲ ಗುತ್ತಿಗೆ ಆಧಾರದ ಸಿಬ್ಬಂದಿಯ ಸಹಾಯದಿಂದ ವೈದ್ಯಾಧಿಕಾರಿಗಳೇ ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ.

ಇನ್ನೇನು ಮಕ್ಕಳಿಗೆ ಕೋವಿಡ್‌ ಲಸಿಕೆ ಹಾಕಬೇಕಾಗುತ್ತದೆ. ಮಕ್ಕಳಿಗೆ ಲಸಿಕೆ ಹಾಕುವಾಗ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾದರೂ ಅಗತ್ಯ ಸಿಬ್ಬಂದಿ ಅದರಲ್ಲೂ ಸ್ಟಾಫ್‌ ನರ್ಸ್‌ ಅಗತ್ಯವಿದೆ.

ಬೆನ್ನ ಹಿಂದೆ ಮಗು, ಒಂದು ಕೈಯಲ್ಲಿ ವಾಕ್ಸಿನ್.. ಕೊರೋನಾ ವಾರಿಯರ್ಸ್‌ಗೆ ನಮನ

ವಾಹನ ಸೌಲಭ್ಯ ಕಲ್ಪಿಸಿ

ಈಗಾಗಲೇ ಕೋವಿಡ್‌ ಎರಡು ಅಲೆಗಳು ಅಪ್ಪಳಿಸಿವೆ. ಎರಡೂ ಸಂದರ್ಭದಲ್ಲಿ ಆರೋಗ.್ಯ ಇಲಾಖೆ ಸಿಬ್ಬಂದಿ ಗ್ರಾಮೀಣ ಪ್ರದೇಶಗಳಿಗೆ ಹೋಗಲು ಆರೋಗ್ಯ ಇಲಾಖೆಯಿಂದ ಯಾವುದೇ ವಾಹನ ಸೌಲಭ್ಯ ಮಾಡಿಕೊಡಲಿಲ್ಲ. ಒಂದು ವೇಳೆ ಮೂರನೇ ಅಲೆ ಎದುರಾದರೆ ಮೈಸೂರಿನಿಂದ ತಾಲೂಕು ಕೇಂದ್ರಗಳಿಗೆ, ಅಲ್ಲಿಂದ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೆ.

ಲಸಿಕೆ ನಂತರ ಡೋಲೊ 650 ಮಾತ್ರೆ ಕೇಳ್ತಾರೆ, ಆದ್ರೆ ಕೊಡಲು ಇರಲ್ಲ!

ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರ ಕೋವಿಡ್‌ ಲಸಿಕೆ ಪಡೆದ ನಂತರ ಜ್ವರ ಬರಬಹುದು ಎಂದು ಭಾವಿಸಿ, ಡೋಲೊ 650 ಮಾತ್ರೆ ಕೇಳ್ತಾರೆ. ಆದರೆ ಕೊಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವುಗಳ ದಾಸ್ತಾನು ಇರುವುದಿಲ್ಲ. ಈ ಮಾತ್ರೆ ಇರಲು ಇತರೆ ಔಷಧಿಗಳ ಪೂರೈಕೆ ಕೂಡ ಕಡಿಮೆ ಇದೆ.

ಸಂತಾನಹರಣ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ!

ಕೋವಿಡ್‌-19ರ ನಿಯಂತ್ರಣದ ಕಡೆಯೇ ಎಲ್ಲರ ಗಮನ. ಹೀಗಾಗಿ ಕಳೆದ ಒಂದೂವರೆ ವರ್ಷಗಳಿಂದ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರಗಳೇ ನಡೆಯುತ್ತಿಲ್ಲ. ಇದರಿಂದ ಕೊರೋನಾ ನಡುವೆಯೂ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ.

ಬಾಲ್ಯವಿವಾಹ ಹೆಚ್ಚಳ!

ಕೋವಿಡ್‌ನಿಂದಾಗಿ ಈಗಾಗಲೇ ಎರಡು ಬಾರಿ ತಿಂಗಳಾನುಗಟ್ಟಲೇ ಲಾಕ್‌ಡೌನ್‌ ಆಗಿರುವ ಪರಿಣಾಮ ಹಲವಾರು ಮಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಸಿಗುತ್ತಿಲ್ಲ. ಜೊತೆಗೆ ಕೊರೋನಾ ಬಂದು ಸತ್ತು ಹೋಗಬಹುದು. ಬದುಕಿರುವಾಗಲೇ ಮದುವೆ ಮಾಡಿಬಿಡೋಣ ಎಂದು ನಿರ್ಬಂಧಗಳ ನಡುವೆಯೂ ಮನೆಯ ಮುಂದೆ ಮದುವೆಗಳನ್ನು ಮಾಡಲಾಗುತ್ತಿದೆ. ಇದರಿಂದ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ. ಸರ್ಕಾರದ ನಿಯಮದ ಪ್ರಕಾರ ವಧುನಿಗೆ 18, ವರನಿಗೆ 21 ವರ್ಷ ತುಂಬಿರಬೇಕು. ಆದರೆ ಲಾಕ್‌ಡೌನ್‌ ಸಮಯದಲ್ಲಿ ನಡೆದಿರುವ ಕೆಲವು ಮದುವೆಗಳಲ್ಲಿ ಇದು ಪಾಲನೆಯಾಗಿಲ್ಲ.

ಮೂರನೇ ಅಲೆಗೂ ಮುನ್ನ ಮಾತ್ರ ಕೊಡಿ

ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳು ಐವರ್‌ಮೆಕ್ಟಿನ್‌, 12 ಎಂಜಿ ಮಾತ್ರೆ ತೆಗೆದುಕೊಂಡರೆ ಕೋವಿಡ್‌ ಬರುವುದನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ಮಾಡಿದ್ದಾರೆ. ಹಲವಾರು ರಾಜ್ಯಗಳಲ್ಲಿ ಈ ಮಾತ್ರೆ ಪೂರೈಸಲಾಗುತ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿ ಕೂಡ ಮೂರನೇ ಅಲೆಗೂ ಮುನ್ನಾ ಎಲ್ಲರಿಗೂ ಈ ಮಾತ್ರೆ ಪೂರೈಸಬೇಕು ಎಂಬುದು ವೈದ್ಯಾಧಿಕಾರಿಯೊಬ್ಬರ ಸಲಹೆ.

Follow Us:
Download App:
  • android
  • ios