ಇಂಡಿಯನ್ ಜಸ್ಟೀஸ் ಫೋರಂ ಸಮೀಕ್ಷೆಯ ಪ್ರಕಾರ, ನೊಂದವರಿಗೆ ನ್ಯಾಯ ನೀಡುವಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದು, ಸೈಬರ್ ಅಪರಾಧಗಳಿಗೆ ಕಡಿವಾಣ, ಕಾರಾಗೃಹ ಸುಧಾರಣೆ ಸೇರಿ ಇಲಾಖ ಹಲವು ಸಾಧನೆ

ಬೆಂಗಳೂರು (ಡಿ.6): ನೊಂದವರಿಗೆ ನ್ಯಾಯ ನೀಡುವಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಸರ್ಕಾರೇತರ ಸಂಸ್ಥೆಯಾದ ಇಂಡಿಯನ್‌ ಜಸ್ಟೀಸ್‌ ಫೋರಂ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಪೊಲೀಸರಿಗೆ 10 ಅಂಕಗಳಿಗೆ 6.78 ಅಂಕ ಬಂದಿದೆ ಎಂದು ಗೃಹ ಮಂತ್ರಿ ಡಾ। ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ವರ್ಗ ಹಾಗೂ ಪಂಗಡ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ನೋವಿಗೆ ಪೊಲೀಸರು ಸ್ಪಂದಿಸಿದ್ದಾರೆ. ನ್ಯಾಯ ನೀಡಿಕೆ ಸಾಧನಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಗೆ ದೇಶದಲ್ಲೇ ಪ್ರಥಮ ಬಾರಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಹೊಸದಾಗಿ 13 ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಠಾಣೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಉಪ ವಿಭಾಗವನ್ನು ತೆರೆಯಲಾಗಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ಉತ್ತಮ:

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂದು ರಾಜಕೀಯ ಕಾರಣಗಳಿಗೆ ವಿಶೇಷ ಪದ ಬಳಸಿ ವಿರೋಧ ಪಕ್ಷಗಳು ಟೀಕಿಸಬಹುದು. ಆದರೆ ವಾಸ್ತವ ಪರಿಸ್ಥಿತಿಯನ್ನು ಎಲ್ಲರೂ ತಿಳಿದುಕೊಳ್ಳಬಹುದು. 2024ರಲ್ಲಿ 1102 ಹಾಗೂ 2025ರಲ್ಲಿ 1132 ಹತ್ಯೆ ಕೃತ್ಯಗಳು ವರದಿಯಾಗಿವೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಂದೇ ಒಂದು ಕೋಮು ದ್ವೇಷದ ಕಾರಣಕ್ಕೆ ಹತ್ಯೆ ನಡೆದಿಲ್ಲ. ಕೋಮು ಗಲಭೆಗಳು ಸಹ ಸಂಭವಿಸಿಲ್ಲ. ಗಣೇಶೋತ್ಸವ ವೇಳೆ ನಾಗಮಂಗಲ, ಮದ್ದೂರಿನಲ್ಲಿ ಗಲಾಟೆಗಳು ಹಾಗೂ ಬೆಳಗಾವಿ ಅಧೀವೇಶನದ ಸಂದರ್ಭದಲ್ಲಿ ಪ್ರತಿಭಟನೆಗಳು ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆಗಳು ಹೊರತಾಗಿ ರಾಜ್ಯದಲ್ಲಿ ಯಾವುದೇ ರೀತಿಯ ಘರ್ಷಣೆಗಳು ನಡೆದಿಲ್ಲ ಎಂದು ತಿಳಿಸಿದರು.

ಸೈಬರ್ ಅಪರಾಧಗಳಿಗೆ ಕಡಿವಾಣ:

ಸೈಬರ್ ಅಪರಾಧ ಕೃತ್ಯಗಳಿಗೆ ಸಹ ಕಡಿವಾಣ ಹಾಕಲಾಗುತ್ತಿದೆ. 2022ರಲ್ಲಿ 12,650, 2023ರಲ್ಲಿ 21903 ಹಾಗೂ 21,995 ಸೈಬರ್ ಪ್ರಕರಣಗಳು ದಾಖಲಾಗಿದ್ದವು. ಆದರೆ 2025ರಲ್ಲಿ 13 ಸಾವಿರ ಪ್ರಕರಣಗಳು ದಾಖಲಾಗಿವೆ. ಮೊದಲ ಎರಡು ವರ್ಷಗಳು ಪ್ರಕರಣಗಳು ಹೆಚ್ಚಾಗಲು ಸ್ಥಳೀಯ ಠಾಣೆಗಳಲ್ಲಿ ಸಹ ಸೈಬರ್ ಕೃತ್ಯಕ್ಕೆ ಸಂಬಂಧ ಎಫ್‌ಐಆರ್ ದಾಖಲಾಗಿದ್ದು ಕಾರಣವಾಗಿದೆ. ಸೈಬರ್ ಪ್ರಕರಣಗಳ ತನಿಖೆಗೆ ಡಿಜಿಪಿ ಮಟ್ಟದಲ್ಲಿ ಸೈಬರ್ ಕಮಾಂಡರ್ ಸೆಂಟರ್ ಅನ್ನು ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾಗಿದೆ ಎಂದರು.

ಕರಾವಳಿ ಶಾಂತ- ಕಾರಾಗೃಹ ಕ್ಲೀನ್‌-ಪರಂ:

ಕರಾವಳಿಯಲ್ಲಿ ಕೋಮು ಗಲಭೆ ತಡೆಯಲು ಕೋಮು ನಿಗ್ರಹ ಪಡೆ, ಮಾದಕ ವಸ್ತು ಮಾರಾಟ ಜಾಲ ನಿಯಂತ್ರಿಸಲು ಎಡಿಜಿಪಿ ನೇತೃತ್ವದಲ್ಲಿ ಪ್ರತ್ಯೇಕ ಪಡೆ ಸ್ಥಾಪಿಸಲಾಗಿದೆ. ಕಾರಾಗೃಹಗಳ ಸುಧಾರಣೆ ಕ್ರಮ ಜರುಗಿಸಿದ್ದೇವೆ. ಮಂಗಳೂರು, ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಹೊಸ ಜೈಲುಗಳ ನಿರ್ಮಾಣವಾಗುತ್ತಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ತಡೆಗೆ ತಾಂತ್ರಿಕತೆ ಬಳಸಿ ನಿರ್ಬಂಧಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ನೇಮಕ ಬಳಿಕ ಚಿತ್ರಣ ಬದಲಾಗಿದೆ ಎಂದರು.

ಇದೇ ವೇಳೆ ಎರಡೂವರೆ ವರ್ಷಗಳ ಪೊಲೀಸ್ ಇಲಾಖೆ ಸಾಧನೆ ಕುರಿತು ಕಿರು ಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ರೆನಾಲ್ಟ್‌ ನಿಸಾನ್‌ ಟೆಕ್ನಾಲಜಿ ಆ್ಯಂಡ್‌ ಬ್ಯುಸಿನೆಸ್‌ ಸೆಂಟರ್ ಇಂಡಿಯಾ ಕಂಪನಿಯ ಸಿಎಸ್‌ಆರ್ ಅನುದಾದಡಿ ಹ್ಯಾಂಡ್‌ ಇನ್ ಹ್ಯಾಂಡ್ ಇಂಡಿಯಾ ರೂಪಿಸಿದ್ದ ಸಂಚಾರಿ ಶೌಚಾಲಯ ವಾಹನಗಳಿಗೆ ಸಚಿವರು ಹಸಿರು ನಿಶಾನೆ ತೋರಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ, ಡಿಜಿಪಿಗಳಾದ ಪ್ರಶಾಂತ್ ಕುಮಾರ್ ಠಾಕೂರ್‌, ಪ್ರಣವ್‌ ಮೊಹಂತಿ, ಬೆಂಗಳೂರು ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.