ಹೊಳಲ್ಕೆರೆ (ಸೆ.29): ಅನಾರೋಗ್ಯದಿಂದ ಸುಸ್ತಾಗಿದ್ದ ಬಾಲಕಿಗೆ ದೆವ್ವ ಹಿಡಿದಿದೆ ಎಂದು ಹೇಳಿ, ಪೂಜಾರಿಯೊಬ್ಬ ಎಕ್ಕೆ ಗಿಡಿದ ಕಟ್ಟಿಗೆಯಿಂದ ಹೊಡೆದು 3 ವರ್ಷದ ಕಂದಮ್ಮನನ್ನು ಸಾಯಿಸಿದ ದಾರುಣ ಘಟನೆ ತಾಲೂಕಿನ ಅಜ್ಜಿ ಕ್ಯಾತೇನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಆರೋಪಿಯನ್ನು ಚಿಕ್ಕಜಾಜೂರು ಪೊಲೀಸರು ಬಂಧಿಸಿದ್ದಾರೆ.

ಪೂರ್ಣಿಕಾ, ಪೂಜಾರಿಯ ಕ್ರೌರ್ಯಕ್ಕೆ ಬಲಿಯಾದ ಬಾಲಕಿ. ಪೂರ್ಣಿಕಾಗೆ ಕಳೆದ 3 ದಿನಗಳಿಂದ ಊಟ ಸೇರುತ್ತಿರಲಿಲ್ಲ. ಸುಸ್ತಾಗಿದ್ದರಿಂದ ಸಹಜವಾಗಿಯೇ ಪ್ರಜ್ಞೆ ತಪ್ಪುತ್ತಿದ್ದಳು. ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಬದಲು ಅದೇ ಗ್ರಾಮದಲ್ಲಿದ್ದ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದಾರೆ. ಪೂಜಾರಿ ರಾಕೇಶ್‌ ಮಗುವಿನ ಮೈ ಮೇಲೆ ದೆವ್ವ ಬಂದಿದೆ ಎಂದು ಹೇಳಿ, ಪೋಷಕರನ್ನು ದೇವಸ್ಥಾನದಿಂದ ಹೊರ ಕಳಿಸಿ ಎಕ್ಕೆ ಗಿಡದ ಕಟ್ಟಿಗೆಯಿಂದ ಚಚ್ಚಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯು​ವಾಗ ಮಗು ಅಸು​ನೀ​ಗಿದೆ.

ಪುತ್ತೂರಿನ ರೀತಿ 10ನೇ ತರಗತಿ ಬಾಲಕಿ ಮೇಲೆ ರೇಪ್ ಮಾಡಿ ವಿಡಿಯೋ ಹರಿಬಿಟ್ಟರು! .

 ಪೋಷಕರು ದೇವಸ್ಥಾನದ ಒಳ ಹೋದಾಗ ಪ್ರಜ್ಞೆ ಕಳೆದುಕೊಂಡ ಮಗು ಕಂಡಿದ್ದಾರೆ. ತಕ್ಷಣವೇ ಹೊಳಲ್ಕೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲೇ ಅಸುನೀಗಿದೆ. ದೇವಸ್ಥಾನದಿಂದ ಪರಾರಿಯಾಗಿದ್ದ ಪೂಜಾರಿ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಾಲಕಿಯ ತಂದೆ ಪ್ರವೀಣ್‌ ಈ ಸಂಬಂಧ ಚಿಕ್ಕಜಾಜೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.