ಶಿರಸಿ ಸಂತೆ ಮಾರುಕಟ್ಟೆಯಲ್ಲಿ ಗೋಕರ್ಣ ಮೆಣಸು ಮತ್ತು ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಬೆಳೆ ನಷ್ಟ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಗೋಕರ್ಣ ಮೆಣಸಿನ ದರ ಕೆಜಿಗೆ ₹200 ತಲುಪಿದ್ದರೆ, ತಮಿಳುನಾಡಿನಿಂದ ಪೂರೈಕೆ ಕುಂಠಿತಗೊಂಡಿರುವ ನುಗ್ಗೆಕಾಯಿ ದರ ₹300ರ ಗಡಿ ದಾಟಿದೆ.
ಕಾರವಾರ: ರಾಜ್ಯದ ವಿವಿಧ ಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಗೋಕರ್ಣ ಮೆಣಸು ಇದೀಗ ಶಿರಸಿ ಸಂತೆ ಮಾರುಕಟ್ಟೆಯಲ್ಲಿ ವಿಪರೀತ ದುಬಾರಿಯಾಗಿದೆ.
ಮೆಣಸಿನ ಪೂರೈಕೆಯಲ್ಲಿ ಇಳಿಮುಖ, ಬೇಡಿಕೆ ಹೆಚ್ಚಳ
ಜಿಲ್ಲೆಯ ಕರಾವಳಿ ಭಾಗದ ರೈತರ ಪ್ರಮುಖ ಬೆಳೆಯಾಗಿರುವ ಹಾಗೂ ಮಜ್ಜಿಗೆ ಮೆಣಸು (ಸಂಡಿಗೆ ಮೆಣಸು) ತಯಾರಿಕೆಗೆ ಹೆಸರುವಾಸಿಯಾದ ಗೋಕರ್ಣ ಮೆಣಸು ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಬೆಲೆ ಗಗನಕ್ಕೇರಿದೆ. ಗೋಕರ್ಣದ ರುದ್ರಪಾದ, ಬಾವಿಕೊಡ್ಲ, ಗಂಗಾವಳಿ ಸೇರಿ ಸುಮಾರು 8-10 ಹೆಕ್ಟೇರ್ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಈ ಮೆಣಸನ್ನು ಬೆಳೆಯುವ ಹಾಲಕ್ಕಿ ಒಕ್ಕಲಿಗ ಸಮುದಾಯದ ರೈತರು, ಈ ಬಾರಿ ಬೆಳೆ ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆಗೆ ಮೆಣಸಿನ ಪೂರೈಕೆ ತೀರಾ ಕಡಿಮೆಯಾಗಿರುವ ಹಿನ್ನೆಲೆ ಸಹಜವಾಗಿಯೇ ಬೇಡಿಕೆ ಹೆಚ್ಚಿದ್ದು, ಬೆಲೆ ದುಪ್ಪಟ್ಟಾಗಿದೆ.
ಪ್ರಸ್ತುತ ಒಣಗಿದ ಗೋಕರ್ಣ ಮಜ್ಜಿಗೆ ಮೆಣಸು ಶಿರಸಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹150ರಿಂದ 200 ವರೆಗೂ ಮಾರಾಟವಾಗುತ್ತಿದೆ. ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ನುಗ್ಗೆಕಾಯಿ ಬಲು ದುಬಾರಿ
ಶಿರಸಿಯ ಸಂತೆ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ದರವು ಪ್ರತಿ ಕೆಜಿಗೆ ₹300 ಗಡಿ ದಾಟಿದೆ. ಕೆಲವೆಡೆ ಗುಣಮಟ್ಟವನ್ನು ಅವಲಂಬಿಸಿ ₹400 ರಿಂದ 500 ರವರೆಗೂ ಮಾರಾಟವಾಗುತ್ತಿದೆ. ಸಾಂಬಾರಿಗೆ ಅತಿ ಬೇಡಿಕೆ ಇರುವ ನುಗ್ಗೆ ಕಾಯಿ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಶಿರಸಿ ಮಾರುಕಟ್ಟೆಗೆ ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ನುಗ್ಗೆಕಾಯಿ ಪೂರೈಕೆಯಾಗುತ್ತದೆ.
ಇದನ್ನೂ ಓದಿ: ಆಧುನಿಕ ಭಾರತದ ಶಿಲ್ಪಿ, ಯುಗಪುರುಷ ಅಟಲ್ ಬಿಹಾರಿ ವಾಜಪೇಯಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿನ ಬೆಳೆ ಕಟಾವು ವಿಳಂಬವಾಗಿರುವುದರಿಂದ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಇಳುವರಿಯೂ ಕುಸಿದಿರುವುದರಿಂದ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಇಳಕೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥ ಗಣೇಶ ನಿಲೇಕಣಿ.
ಇದನ್ನೂ ಓದಿ: Bird's Eye Chilli Farming: 1500 ರೂ.Kg ಬೆಲೆಯ ಗಾಂಧಾರಿ ಮೆಣಸನ್ನು ಖರ್ಚಿಲ್ಲದೆ ಮನೇಲಿ ಬೆಳೆಯುವ ವಿಧಾನ!


