ಗಜೇಂದ್ರಗಡದಲ್ಲಿ ಬಡವರ ಬಾದಾಮಿ ಎಂದೇ ಖ್ಯಾತವಾದ ಶೇಂಗಾ ಬೆಲೆಯು ಕ್ವಿಂಟಲ್‌ಗೆ ₹11,000ದ ಗಡಿ ತಲುಪಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ ಹಾಗೂ ಉತ್ತಮ ಇಳುವರಿ ಬಂದಿದ್ದು, ಜೊತೆಗೆ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆ ಸಿಕ್ಕಿರುವುದು ರೈತರ ಸಂಕಷ್ಟವನ್ನು ದೂರಮಾಡಿದೆ.
ಎಸ್.ಎಂ. ಸೈಯದ್
ಗದಗ: ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾ ಕ್ವಿಂಟಲ್‌ಗೆ ₹11 ಸಾವಿರದ ಗಡಿ ತಲುಪಿದ್ದು, ಉತ್ತಮ ಧಾರಣೆಯಿಂದ ರೈತರು ಖುಷಿಯಾಗಿದ್ದಾರೆ.
ಈ ವರ್ಷ ಕ್ವಿಂಟಲ್ ಗೆಜ್ಜೆ ಶೇಂಗಾಕ್ಕೆ ಇಲ್ಲಿಯವರೆಗೆ ಅತಿಹೆಚ್ಚು ಅಂದರೆ ₹6000ರಿಂದ 8500ರ ವರೆಗೆ ಮಾರಾಟವಾಗಿದೆ. ಆದರೆ ಶನಿವಾರ ಪಟ್ಟಣದ ಎಪಿಎಂಸಿಯಲ್ಲಿ ದಿಢೀರ್ ಕ್ವಿಂಟಲ್ ಶೇಂಗಾ ದರ ₹10,866ಕ್ಕೆ ತಲುಪಿದೆ. ಇದು ಪಟ್ಟಣದ ಎಪಿಎಂಸಿಯಲ್ಲೇ ಅತ್ಯಧಿಕ ದರ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಬೆಲೆ ಹೆಚ್ಚಳಕ್ಕೆ ಕಾರಣವೇನು?
ಮಾರುಕಟ್ಟೆಗೆ ಶೇಂಗಾ ಆವಕ ಆರಂಭಿಕ ಹಂತದಲ್ಲಿದೆ. ಹೀಗಾಗಿ ಉತ್ತಮ ದರ ರೈತರ ಫಸಲಿಗೆ ಸಿಕ್ಕಿದೆ. ಫೆಬ್ರವರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶೇಂಗಾ ಮಾರುಕಟ್ಟೆಗೆ ಬರಲಿದೆ. ಆಗ ಈಗಿರುವ ದರ ಸಿಗುತ್ತದೆ ಎಂದು ಹೇಳಲಾಗದು ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
ಕೈಸುಟ್ಟುಕೊಂಡಿದ್ದ ರೈತರು
ತಾಲೂಕಿನಲ್ಲಿ ಕಳೆದ ವರ್ಷ ನಿರೀಕ್ಷಿತ ಪ್ರಮಾಣದ ಮಳೆಯಾಗದ ಹಿನ್ನೆಲೆ ಶೇಂಗಾ ಬೆಳೆದು ಕೈ ಸುಟ್ಟುಕೊಂಡಿದ್ದ ರೈತರ ದನ ಕರುಗಳಿಗೂ ಹೊಟ್ಟು ಸಿಕ್ಕಿರಲಿಲ್ಲ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣಕಿಂತಲೂ ಹೆಚ್ಚಿಗೆ ಮಳೆಯಾಗಿದ್ದರಿಂದ ಅಂತರ್ಜಲದ ಪ್ರಮಾಣ ಹೆಚ್ಚಾಗಿ ಉತ್ತಮ ಫಸಲು ಬಂದಿದೆ. ಇನ್ನೊಂದೆಡೆ ಬಂಪರ್ ಬೆಲೆ ಸಿಕ್ಕಿದ್ದು, ರೈತ ಸಮೂಹದ ಹರ್ಷಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲ. ಇದರ ಪರಿಣಾಮ ಉತ್ತಮ ಫಸಲು ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ, ಇತ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಮಳೆ ಕೊರತೆಯಿಂದ ಫಸಲು ಕೈಕೊಡುತಿತ್ತು. ಹೀಗಾಗಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ರೈತರಿದ್ದರು.
ಉತ್ತಮ ಮಳೆ, ಇಳುವರಿ
ಪ್ರಸಕ್ತ ವರ್ಷ ಮಳೆಯೂ ಉತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆಯೂ ಏರಿದ್ದು, ರೈತರಲ್ಲಿ ಖುಷಿ ತಂದಿದೆ. ಇದೇ ಬೆಲೆ ಮುಂದುವರಿದರೆ ಮಾತ್ರ ತಾಲೂಕಿನ ರೈತರು ಕೈಗೆ ಮತ್ತಷ್ಟು ಬಲ ಬರಲಿದೆ ಎನ್ನುತ್ತಾರೆ ಕಾಲಕಾಲೇಶ್ವರ, ರಾಜೂರ, ಸೂಡಿ, ಉಣಚಗೇರಿ, ವದೆಗೋಳ, ಜಿಗೇರಿ, ಕೊಡಗಾನೂರ, ರಾಂಪೂರ, ದಿಂಡೂರ, ಹಾಲಕೆರೆ ಸೇರಿ ತಾಲೂಕಿನ ರೈತರು.
ವ್ಯಾಪಾರಸ್ಥರಿಗೂ ಖುಷಿ
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಒಂದು ಕ್ವಿಂಟಲ್ ಶೇಂಗಾಕ್ಕೆ ₹೬ ಸಾವಿರದಿಂದ ₹೮ ಸಾವಿರದವರೆಗೆ ಮಾರಾಟವಾಗಿತ್ತು. ಶನಿವಾರ ಕ್ವಿಂಟಲ್ ಶೇಂಗಾಕ್ಕೆ ₹೧೦,೮೬೬ ಬಂದಿದೆ. ಜಮೀನಿನಲ್ಲಿ ಶೇಂಗಾ ಬಿತ್ತನೆಯಿಂದ ಹಿಡಿದು ಫಸಲು ಕಟಾವಿನವರೆಗೆ ಗೊಬ್ಬರ, ಕೆಲಸಕ್ಕೆ ಸಿಗದ ಆಳು, ಮಾರುಕಟ್ಟೆ ಬೆಲೆ ಕುಸಿತ ಸೇರಿ ಇತರ ಸಂಕಷ್ಟವನ್ನೇ ಎದುರಿಸುವ ರೈತರು ಶನಿವಾರ ಶೇಂಗಾಕ್ಕೆ ಬಂಪರ್ ಬೆಲೆ ಬಂದಿದ್ದು ಖುಷಿ ತಂದಿದೆ ಎಂದು ವಿನಾಯಕ ಟ್ರೇಡಿಂಗ್ ಕಂಪನಿಯ ನಾಗರಾಜ ಹೊಸಗಂಡಿ ಹಾಗೂ ಭೀಮಾಂಬೀಕಾ ಟ್ರೇಡಿಂಗ್‌ನ ಜಗದೀಶ ಕಲ್ಗುಡಿ ತಿಳಿಸಿದರು.
ಕಷ್ಟ ದೂರವಾಗಲಿದೆ
ಕಳೆದ 15 ವರ್ಷಗಳಿಂದ ಶೇಂಗಾ ಬೆಳೆಯುತ್ತಿದ್ದೇವೆ. ಕ್ವಿಂಟಲ್‌ಗೆ ₹೨ ಸಾವಿರದಿಂದ ₹೬ ಸಾವಿರ ಮಾತ್ರ ಸಿಕ್ಕಿತ್ತು. ಹೀಗಾಗಿ ಪ್ರತಿವರ್ಷ ಬಿತ್ತನೆಯಿಂದ ಹಿಡಿದು ಎಪಿಎಂಸಿಗೆ ತಂದು ಮಾರಿದಾಗ ಸಿಗುವ ಬೆಲೆ ಅಷ್ಟಕಷ್ಟೇ ಎನ್ನುವಂತಾಗಿತ್ತು. ಆದರೆ ಶನಿವಾರ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದ ಗೆಜ್ಜೆ ಶೇಂಗಾ ಬೆಳೆಗೆ ಸಿಕ್ಕಿರುವ ಬೆಲೆ ಕೇಳಿ ಖುಷಿ ತಂದಿದ್ದು, ಅಲ್ಪಸ್ವಲ್ಪ ಕಷ್ಟವನ್ನು ಕಳೆದುಕೊಳ್ಳಲು ಸಹಾಯವಾಗಿದೆ ಎನ್ನುತ್ತಾರೆ ರೈತರಾದ ಹನುಮೇಶ ಮಸಾಲಿ, ಸುರೇಶ ನಾಗರಾಳ ಅವರು.
ಉತ್ತಮ ಬೆಲೆ
ಎಪಿಎಂಸಿ ಮಾರುಕಟ್ಟೆಗೆ ಬರುವ ಶೇಂಗಾ ಬೆಳೆಗೆ ಪ್ರತಿವರ್ಷವೂ ಆರಂಭದ ದಿನದಲ್ಲಿ ಉತ್ತಮ ಬೆಲೆ ಸಿಗುತ್ತದೆ. ಶನಿವಾರ ಗಜೇಂದ್ರಗಡ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಗೆ ಸುಮಾರು ₹೧೧ ಸಾವಿರದವರೆಗೆ ಬೆಲೆ ಸಿಕ್ಕಿದ್ದು ಖುಷಿ ತಂದಿದೆ ಎಂದು ಕಾಲಕಾಲೇಶ್ವರ ಗ್ರಾಮದ ರೈತರಾದ ಶಶಿಧರ ಹೂಗಾರ ಹಾಗೂ ನರಸಿಂಗ್‌ರಾವ್ ಘೋರ್ಪಡೆ ತಿಳಿಸಿದರು.
ಫೆಬ್ರವರಿಯಲ್ಲಿ ಗೊತ್ತಾಗಲಿದೆ
ಗಜೇಂದ್ರಗಡದ ಎಪಿಎಂಸಿಗೆ ಬರೀ ತಾಲೂಕಿನ ರೈತರು ಅಷ್ಟೇ ಅಲ್ಲದೇ, ರೋಣ, ಯಲಬುರ್ಗಾ, ಕುಷ್ಟಗಿ ತಾಲೂಕಿನ ಶೇಂಗಾ ಮಾರಾಟ ಮಾಡಲು ಆಗಮಿಸುತ್ತಾರೆ. ಇದೇ ದರ ಮುಂದುವರಿಯುತ್ತದೆಯೇ ಎಂಬುದು ಫೆಬ್ರವರಿಯಲ್ಲಿ ಗೊತ್ತಾಗಲಿದೆ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ(ಹೊಳೆಆಲೂರು) ಸುವರ್ಣಾ ವಾಲಿಕಾರ ತಿಳಿಸಿದರು.


