ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಾಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು: ಮಹಿಳಾ ನಿಂದಕ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಕೋರ್ಟ್ ವಜಾಗೊಳಿಸಿದ್ದು, ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಜಿ. ಅಮೃತಾಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರಾಜೀವ್ ಗೌಡ ಅವರನ್ನು ಪೊಲೀಸರು ಕೇರಳ ಗಡಿಯಲ್ಲಿ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ರಾಜೀವ್ ಗೌಡ ಖೆಡ್ಡಾಗೆ ಬಿದ್ದಿದ್ದೇಗೆ?

ಮೈಕಲ್ ಜತೆ ರಾಜೀವ್ ಗೌಡ ಇದ್ದಾನೆ ಎಂದು ಪೊಲೀಸರಿಗೆ ನಿಖರ ಮಾಹಿತಿ ಸಿಕ್ಕಿತು. ಆದರೆ ಮೈಕಲ್ ಜೋಸೇಫ್ ರೇಗೊ ಫೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಇದಾದ ಬಳಿಕ ಎಷ್ಟೇ ಹುಡುಕಾಡಿದರೂ, ಫೋನ್ ನಂಬರ್ ಸಿಗದೇ ಪೊಲೀಸರು ಪರದಾಟ ಅನುಭವಿಸಿದರು. ಇದಾದ ನಂತರ ಮೈಕಲ್ ಜೋಸೇಫ್ ರೇಗೂ ಹಿನ್ನೆಲೆಯನ್ನು ಶಿಡ್ಲಘಟ್ಟ ಪೊಲೀಸರು ಜಾಲಾಡಿದರು. ಆಗ ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವು ಅನುಭವಿಸಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುತ್ತದೆ. ಇನ್ನು ಮೈಕಲ್ ಸೋದರ ಸಂಬಂಧಿಯೊಬ್ಬರು ಮಂಗಳೂರಿನ ಪಬ್‌ ಒಂದರ ಮಾಲೀಕರು ಎನ್ನುವ ವಿಚಾರ ಶಿಡ್ಲಘಟ್ಟ ಪೊಲೀಸರ ಗಮನಕ್ಕೆ ಬರುತ್ತದೆ. ಮೈಕಲ್ ಸೋದರ ಸಂಬಂಧಿಗೆ ತಾವು ಚಿಕ್ಕಜಾಲ ಪೊಲೀಸರು ಎಂದು ಕರೆಮಾಡಿ, ಮೈಕಲ್ ಸಾವಿನ ಬಗ್ಗೆ ಕೆಲ ಮಾಹಿತಿ ಬೇಕಿತ್ತೆಂದು ಮೈಕಲ್ ನಂಬರ್ ಸಂಗ್ರಹ ಮಾಡುತ್ತಾರೆ. ಕೊನೆಗೆ ಮೈಕಲ್ ರೇಗೊ ಅವರ ನಂಬರ್ ಟ್ರೇಸ್‌ ಮಾಡಿ, ಕೇರಳದಲ್ಲಿ ರಾಜೀವ್ ಗೌಡ ಅವರನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ.

ಏನಿದು ಪ್ರಕರಣ?

ಕಳೆದ ಜನವರಿ 14ರಂದು ಪೌರಾಯುಕ್ತೆ ಜಿ. ಅಮೃತಾ ಅವರಿಗೆ ರಾಜೀವ್ ಗೌಡ ಕರೆ ಮಾಡಿ, ಪ್ಲೆಕ್ಸ್ ತೆರವು ಮಾಡಿರುವ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿದ್ದರು. ನಿಮಗೆ ಜನರಿಂದ ಚಪ್ಪಲಿಯಿಂದ ಹೊಡೆಸುತ್ತೇನೆ, ಜನರನ್ನು ದಂಗೆ ಏಳಿಸುವುದು ಮಾತ್ರವಲ್ಲದೇ ಬೆಂಕಿ ಹಚ್ಚುವುದಾಗಿಯೂ ಬೆದರಿಕೆಯೊಡ್ಡಿದ್ದರು. ಈ ಫೋನ್ ಕಾಲ್ ಆಡಿಯೋ ರೆಕಾರ್ಡ್ ಸಾಕಷ್ಟು ವೈರಲ್ ಆಗಿತ್ತು. ಈ ಸಂಬಂಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಅಮೃತಾ ಅವರು ದೂರು ದಾಖಲಿಸಿದ್ದರು. ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿದ್ದರು.

ಇನ್ನು ಈ ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೇರಳ ಗಡಿಯಲ್ಲಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇಂದು ಏನೇನಾಯ್ತು..?

ಚಿಕ್ಕಬಳ್ಳಾಪುರ ಪೊಲೀಸ್ ಅತಿಥಿ ಗೃಹದಲ್ಲಿ ಹೇಳಿಕೆ ದಾಖಲು ಹಾಗೂ ಧ್ವನಿ ಸಂಗ್ರಹ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ರಾಜೀವ್​, ಮೈಕಲ್‌ಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಅದಾದ ಬಳಿಕ ಶಿಡ್ಲಘಟ್ಟದ ಕೋರ್ಟ್‌ಗೆ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದರು.