ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಐದು ತಿಂಗಳು ಕಳೆದಿದೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

 ಗುಡಿಬಂಡೆ (ನ.02): ಸ್ಥಳೀಯ ಪಟ್ಟಣ ಪಂಚಾಯಿತಿ (Town Panchayat) ಚುನಾವಣೆ (election) ನಡೆದು ಐದು ತಿಂಗಳು ಕಳೆದಿದ್ದು, ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ (President And vice President Election) ನಡೆಯಲಿದೆ. ಪ.ಪಂ. ಅಧಿಕಾರಿ ಯಾವ ಪಕ್ಷದ ಪಾಲಾಗಲಿದೆ ಎಂಬ ಪ್ರಶ್ನೆಗೆ ಇಂದು ಉತ್ತರ ದೊರೆಯಲಿದೆ.

ಒಟ್ಟು 11 ವಾರ್ಡ್‌ಗಳನ್ನು ಹೊಂದಿರುವ ಗುಡಿಬಂಡೆ ಪಪಂ ಚುನಾವಣೆಯಲ್ಲಿ ಕಾಂಗ್ರೇಸ್‌ (Congress) 6, ಜೆಡಿಎಸ್‌ (JDS) 2, ಪಕ್ಷೇತರ 3 ಸ್ಥಾನಗಳಲ್ಲಿ ಜಯಗಳಿಸಿವೆ. ಪ.ಪಂ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ಮಹಿಳೆ (woman) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಬ) ವರ್ಗಕ್ಕೆ ಮೀಸಲು ನಿಗದಿಯಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಕಾಂಗ್ರೆಸ್‌ಗೆ ಬಹುಮತವಿದ್ದರೂ ತಿಣುಕಾಟ

ಕಾಂಗ್ರೆಸ್‌(Congress) ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡಿನ ಬಷೀರಾ ರಿಜ್ವಾನ್‌ ಹಾಗೂ 10ನೇ ವಾರ್ಡಿನ ನಗೀನ್‌ ತಾಜ್‌ ರವರುಗಳು ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದ ಮೂರನೇ ವಾರ್ಡಿನ ವಿಕಾಸ್‌, 11ನೇ ವಾರ್ಡಿನ ಮಂಜುಳ ಹಾಗೂ ಪಕ್ಷೇತರ ಅಭ್ಯರ್ಥಿ ಎರಡನೇ ವಾರ್ಡಿನ ಅನೀಲ್‌ಕುಮಾರ್‌ ಆಕಾಂಕ್ಷಿಗಳಾಗಿದ್ದಾರೆ.

Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?

ಅಧ್ಯಕ್ಷ ಸ್ಥಾನಕ್ಕೆ ಪೂರ್ಣ ಬಹುಮತ ಹೊಂದಿದ ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿರುವುದರಿಂದ, ಇಬ್ಬರೂ ಅಧಿಕಾರವನ್ನು ಸಮನಾಗಿ ಹಂಚಿಕೊಳ್ಳಲು ತೀರ್ಮಾನಿಸಿದ್ದರು. ಆದರೆ ಈ ನಡುವೆ ನಡೆದ ರಾಜಕೀಯ ಚದುರಂಗದಾಟದಲ್ಲಿ 7ನೇ ವಾರ್ಡಿನ ಬಷೀರಾ ರಿಜ್ವಾನ್‌ ರವರನ್ನು ಜೆಡಿಎಸ್‌ ಮಿತ್ರಕೂಟ ತೆಕ್ಕೆಗೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕಾಂಗ್ರೇಸ್‌ (ಶಾಸಕರ ಮತ ಸೇರಿ) ಹಾಗೂ ಜೆಡಿಎಸ್‌ ಮಿತ್ರಕೂಟ ಸಮಬಲ ಹೊಂದಿದಂತಾಗಿದೆ. ಜೆಡಿಎಸ್‌ ಮಿತ್ರಕೂಟ ಚಿಕ್ಕಬಳ್ಳಾಪುರ ಸಂಸದರ ಮತದ ಸಹಕಾರದೊಂದಿಗೆ ಪ.ಪಂ. ಅಧಿಕಾರ ಗುದ್ದೆಗೆ ಏರಲು ಪ್ಲಾನ್‌ ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್‌ಗೆ ಬರುವಂತೆ ಜೆಡಿಎಸ್‌ ಶಾಸಕಗೆ ಆಹ್ವಾನ, ಅಭ್ಯರ್ಥಿ ಎಂದು ಘೋಷಿಸಿದ ಸಿದ್ದು

ಪಕ್ಷಾಂತರ ಮಾಡಿದರೆ ಕ್ರಮ : ಕಾಂಗ್ರೆಸ್‌ನಿಂದ ಜಯಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಬಿ ಫಾರಂ ನೀಡುವಾಗಲೇ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿದ್ದು, ಆದಾಗ್ಯೂ ಒಬ್ಬ ಸದಸ್ಯ ಇದನ್ನು ಮೀರಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ನ ಎಲ್ಲಾ ಸದಸ್ಯರಿಗೂ ವಿಪ್‌ ಜಾರಿ ಮಾಡಲಾಗುವುದು. ವಿಪ್‌ ಉಲ್ಲಂಘಿಸಿದವರಿಗೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗುಡಿಬಂಡೆ ಪಟ್ಟಣ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡು ಕಾಂಗ್ರೆಸ್‌ ತೆಗೆದುಕೊಳ್ಳಲಿದೆ ಎಂದು ಕ್ಷೇತ್ರದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪೂರ್ಣ ಬಹುಮತವಿದ್ದರೂ ಅಧಿಕಾರ ಪಡೆಯಲು ಕಾಂಗ್ರೆಸ್‌ ಹರಸಾಹಸ ಪಡುವಂತಾಗಿದ್ದು, ಬಹುಮತವಿಲ್ಲದಿದ್ದರೂ ಸಹ ಜೆಡಿಎಸ್‌ ಹಾಗೂ ಪಕ್ಷೇತರರ ಪ್ಲಾನ್‌ ಏನಾಗಲಿದೆ ಎಂಬುದು ಸಂಜೆಯೊಳಗೆ ಗೊತ್ತಾಗಲಿದೆ.

  •  ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಐದು ತಿಂಗಳು ಕಳೆದಿದೆ
  • ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
  •  ಕಾಂಗ್ರೆಸ್‌ಗೆ ಬಹುಮತವಿದ್ದರೂ ಅಧಿಕಾರ ಹಿಡಿಯಲು ಜೆಡಿಎಸ್‌ ಕಸರತ್ತು
  • ಒಟ್ಟು 11 ವಾರ್ಡ್‌ಗಳನ್ನು ಹೊಂದಿರುವ ಗುಡಿಬಂಡೆ ಪಪಂ
  • ಕಾಂಗ್ರೇಸ್‌ 6, ಜೆಡಿಎಸ್‌ 2, ಪಕ್ಷೇತರ 3 ಸ್ಥಾನಗಳಲ್ಲಿ ಜಯಗಳಿಸಿವೆ
  • ಅಧ್ಯಕ್ಷ ಸ್ಥಾನಕ್ಕೆ ಪೂರ್ಣ ಬಹುಮತ ಹೊಂದಿದ ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು