ಹಾಸನ (ಜ.26):  ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಹಾಸನ ಕ್ಷೇತ್ರದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೇ ಇಲ್ಲೆ ಬಂದು ಸ್ಪರ್ಧೆ ಮಾಡಿ ತೋರಿಸಲಿ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್‌ ಜೆ.ಗೌಡ ಸವಾಲು ಹಾಕಿದರು.

ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ  ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ರೈಲ್ವೆ ಮೇಲ್ಸುತೆವೆ ಕಾಮಾಗಾರಿ ವಿಚಾರವಾಗಿ ಮಾಜಿ ಸಚಿವ ಎಚ್‌.ಡಿ.ರೇವಣ್ಣನವರು ಸ್ಥಳೀಯರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಹಾಸನ ಕ್ಷೇತ್ರವೇ ಹೊರತು ಹೊಳೆನರಸೀಪುರ ಕ್ಷೇತ್ರ ಅಲ್ಲ ಎಂದು ಮೊದಲೆ ಹೇಳಿದ್ದೇನೆ ಎಂದು ತಿರುಗೇಟು ನೀಡಿದರು.

'ದೇವೇಗೌಡ ಇರೋವರೆಗೂ ಬಿಜೆಪಿ ಜತೆಗೆ ವಿಲೀನ ಮಾತೇ ಇಲ್ಲ' ...

ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡಲು ಜಾಗ ತೆರವು ಮಾಡುವ ವೇಳೆ ಎರಡು ಮೂರು ಜನ ತಮ್ಮ ಪ್ರತಿಷ್ಠೆ ಪ್ರದರ್ಶಿಸಿದ್ದಾರೆ. ಇದಕ್ಕೆ ನಾನು ಯಾವ ಉಪ್ಪು, ಸೊಪ್ಪು ಹಾಕುವುದಿಲ್ಲ. ಸಾರ್ವಜನರಿಗೆ ರೈಲ್ವೆ ಮೇಲು ಸೇತುವೆಯ ಅವಶ್ಯಕತೆ ಇದ್ದು, ಇದಕ್ಕಾಗಿ ಯಾವ ಹಂತಕ್ಕಾದರೂ ಜನಪ್ರತಿನಿಧಿಯಾಗಿ ಹೋಗಲು ನಾನು ಸಿದ್ಧನಿದ್ದೇನೆ. ಕೇವಲ ಒಬ್ಬರಿಬ್ಬರ ಹಿತಾಸಕ್ತಿ ಕಾಪಾಡುವುದಕ್ಕಾಗಿ ವರ್ಷಾನುಗಟ್ಟಲೆ ವಿಳಂಬ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಏನೆ ಹೇಳಿದರೂ ಯಾರು ಯಾರನ್ನು ಎತ್ತುಗಟ್ಟಿದರೂ ಆ ಪ್ರಶ್ನೆ ಈ ಕಾಮಗಾರಿ ವಿಚಾರದಲ್ಲಿ ಉದ್ಭವ ಆಗುವುದಿಲ್ಲ ಎಂದರು.

ಈಗ ರಸ್ತೆಗಾಗಿ ಅಲ್ಲಿನ ಮನೆಗಳ ಕಾಂಪೌಂಡ್‌ ಒಡೆಯಲಾಗಿದೆ. ನಮ್ಮ ಬಿಜೆಪಿ ಸರಕಾರವು ಮಾಜಿ ಸಚಿವರ ಮಾತು ಕೇಳುವುದನ್ನು ಬಿಟ್ಟು ಬಹಳ ದಿನಗಳಾಗಿದೆ. ರೇವಣ್ಣನವರ ಮಾತು ಕೇಳುವುದನ್ನು ಬಿಟ್ಟು ಈಗಾಗಲೇ ಒಂದೂವರೆ ವರ್ಷಗಳೆ ಕಳೆದಿದೆ. ಅವರು ಹೊಳೆನರಸೀಪುರ ಕ್ಷೇತ್ರದ ಶಾಸಕರು ಆಗಿರುವುದರಿಂದ ಅವರ ಕ್ಷೇತ್ರಕ್ಕೆ ಸಂಬಂಧಿ​ಸಿದಂತೆ ಏನಾದರೂ ಸಲಹೆ ಸೂಚನೆ ಇದ್ದರೆ ಕೊಡಲಿ. ಅದನ್ನು ಬಿಟ್ಟು ಹಾಸನ ಕ್ಷೇತ್ರದ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಸಲಹೆ ಕೊಟ್ಟರು.

ಇಲ್ಲಿನ ಜನರು ನನಗೆ ಶಾಸಕನಾಗಿ ಗೆಲ್ಲಿಸಿದ್ದಾರೆ. ಹಾಗಾಗಿ ನಾನು ಈ ಕ್ಷೇತ್ರದ ಜನರ ಹಿತಾಸಕ್ತಿ ನೋಡಿಕೊಳುತ್ತೇನೆ. ರೇವಣ್ಣನವರಿಗೇನಾದರೂ ಈ ಕ್ಷೇತ್ರದ ಬಗ್ಗೆ ತುಂಬ ಆಸಕ್ತಿ ಇದ್ದರೆ 2023ರ ಹಾಸನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿ ಜನರು ಆಶೀರ್ವಾದ ಮಾಡಿದ ನಂತರ ಈ ಕ್ಷೇತ್ರದ ಬಗ್ಗೆ ಯೋಚನೆ ಮಾಡ ಎಂದು ಕುಟುಕಿದರು.