Vijayapura: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಗಂಭೀರ: ಊಟ, ಔಷಧ ಸೇವನೆಗೆ ನಕಾರ
ವಿಜಯಪುರದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ
ಮಲಗಿದ್ದ ಸ್ಥಳದಿಂದಲೇ ಸುತ್ತೂರು ಶ್ರೀಗಳ ಪುಸ್ತಕ ಲೋಕಾರ್ಪಣೆ ಮಾಡಿದ ಸಿದ್ದೇಶ್ವರ ಶ್ರೀಗಳು
ಊಟ, ಔಷಧ ಸೇವನೆ ಮಾಡದಿರುವ ಕಾರಣ ಹೆಚ್ಚಿನ ಅಶಕ್ತತೆ ಕಾಡುತ್ತಿದೆ
ವಿಜಯಪುರ (ಜ.1): ಸರಳ, ಆದರ್ಶಯುತ ಜೀವನ ಹಾಗೂ ಜೀವನದ ತತ್ವಗಳನ್ನು ಪ್ರವಚನದ ಮೂಲಕ ಹೇಳುವ ಹಾಗೂ ನಡೆದಾಡುವ ದೇವರೆಂದೇ ಖ್ಯಾತರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನಾಡಿನೆಲ್ಲೆಡೆ ಪ್ರವಚನಕಾರ, ಶ್ರೇಷ್ಠ ವಾಗ್ಮಿ ಸಿದ್ದೇಶ್ವರ ಸ್ಚಾಮೀಜಿ ಆರೋಗ್ಯ ವಿಚಾರವಾಗಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಅವರ ಆರೋಗ್ಯದಲ್ಲಿ ತೀವ್ರ ಏರು-ಪೇರು ಉಂಟಾಗಿದ್ದು, ಹಾಸಿಗೆಯಿಂದ ಬಿಟ್ಟು ಏಳಲಾರದ ಸ್ಥಿತಿ ತಲುಪಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಾಕರಿಸಿರುವ ಸ್ವಾಮೀಜಿಗೆ ಮಠದೊಳಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇನ್ನು ವೈದ್ಯರ ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ. ಆದರೆ, ವೈದ್ಯರು ಸೂಚಿಸಿದ ಔಷಧಗಳ ಸೇವನೆ ಹಾಗೂ ಆಹಾರ ಸೇವನೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುತ್ತೂರು ಶ್ರೀಗಳ ಪುಸ್ತಕ ಲೋಕಾರ್ಪಣೆ: ಕಳೆದ 20 ದಿನಗಳ ಹಿಂದೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿತ್ತು. ಸುತ್ತೂರು ಮಠದ ಶ್ರೀಗಳು, ಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಸುತ್ತೂರು ಶ್ರೀಗಳು ಸಿದ್ದೇಶ್ವರ ಸ್ವಾಮೀಜಿ ಅವರಿಂದ ಪುಸ್ತಕ ಲೋಕಾರ್ಪಣೆ ಮಾಡಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುತ್ತೂರು ಶ್ರೀಗಳು, ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಪಲ್ಸ್ ರೇಟ್ ಮತ್ತು ಬಿಪಿ ನಾರ್ಮಲ್ ಇದೆ. ಆಹಾರ ಹೆಚ್ಚಿಗೆ ತೆಗೆದುಕೊಳ್ಳುತ್ತಿಲ್ಲ. ಆರೋಗ್ಯದಲ್ಲಿ ಸುಧಾರಣೆಯಾಗಲು ನಿಧಾನ ಆಗುತ್ತಿದೆ. ಪಂಡಿತರ ಜೊತೆಗೆ ಚರ್ಚೆ ಮಾಡಿದ್ದಾರೆ. ಆರೋಗ್ಯ ಸ್ಥಿರ ಊಹಾಪೂಹ ಬೇಡ ಎಂದು ತಿಳಿಸಿದರು.
ಸಿದ್ದೇಶ್ವರ ಶ್ರೀಗಳ ಜೊತೆ ಮೋದಿ ಮಾತು: ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದ ಪ್ರಧಾನಿ
ಅಧಿಕಾರಿಗಳಿಗೆ ಸಿಎಂ ಸೂಚನೆ: ಇನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆ ದೃಷ್ಟಿಯಿಂದ ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನರು ಗಾಬರಿ ಆಗುವುದು ಬೇಡ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ನಿನ್ನೆ ಸಿಎಂ ಹಾಗೂ ಕೇಂದ್ರ ಸಚಿವರು ಶ್ರೀಗಳ ದರ್ಶನ ಮಾಡಿದ್ದಾರೆ. ಪ್ರಧಾನಿ ಮೋದಿ ಅವರೂ ಸಹ ಸ್ಚಾಮೀಜಿಗಳ ಜೊತೆ ಮಾತನಾಡಿದ್ದಾರೆ. ಸ್ಚಾಮೀಜಿ ದರ್ಶನ ಆಗಿದೆ ಎಂದು ಸಿಎಂ ಖುಷಿ ಪಟ್ಟರು. ಹೆಚ್ಚಿನ ಚಿಕಿತ್ಸೆಗೆ ಅವರು ಒಪ್ಪುತ್ತಿಲ್ಲ. ಆಹಾರ ಸ್ವೀಕರಿಸುತ್ತಿಲ್ಲ. ಪೌಷ್ಟಿಕ ಆಹಾರ ಇಲ್ಲವಾದ ಕಾರಣ ಅವರು ಅಶಕ್ತರಾಗಿದ್ದಾರೆ ಎಂದರು.
ಉಸಿರಾಟ ಕೂಡ ನಾರ್ಮಲ್ ಇದೆ ವೈದ್ಯರ ಹೇಳಿಕೆ: ಇನ್ನು ಸಿದ್ದೇಶ್ವರ ಸ್ವಾಮೀಜಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಮಲ್ಲಣ್ಣ ಮೂಲಿಮನಿ ಮಾತನಾಡಿ, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಬೆಳಿಗ್ಗೆ ಯಿಂದ ನಾರ್ಮಲ್ ಇದ್ದಾರೆ. ಪಲ್ಸ್, ಬಿಪಿ, ಉಸಿರಾಟ ಸಹಜವಾಗಿದೆ. ಸ್ವಾಮೀಜಿ ಗಂಜಿ ಕುಡಿದಿದ್ದಾರೆ. ನಿನ್ನೆ ಆಕ್ಸಿಜನ್ ಕಡಿಮೆಯಾಗಿತ್ತು. ಈಗಾ ನಾರ್ಮಲ್ ಇದೆ. ಕಳೆದ ಕೆಲ ದಿನಗಳಿಂದ ಊಟ ಮಾಡಿಲ್ಲ ಕಾರಣ ಅವರು ಹೊರಗೆ ಬರಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಸಿಎಂ ಸೂಚನೆ ಮೇರೆಗೆ ಮಠಕ್ಕೆ ಭೇಟಿ: ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಮಠಕ್ಕೆ ಬಂದಿದ್ದೇವೆ. ನಿನ್ನೆ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದರ್ಶನ ಮಾಡಿದ್ದಾರೆ. ಅವರ ಸೂಚನೆ ಮೇರೆಗೆ ನಾವು ನಿತ್ಯ ಭೇಟಿ ಮಾಡುತ್ತಿದ್ದೇವೆ. ಶ್ರೀಗಳ ಆರೋಗ್ಯದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ಇದೆ. ಕೆಲ ಮಾದ್ಯಮದಲ್ಲಿ ತಪ್ಪು ಸಂದೇಶ ಬಂದಿದೆ. ತಪ್ಪು ಸಂದೇಶ ಬೇಡ. ವೈದ್ಯರು ಹೆಲ್ತ್ ಬುಲೆಟಿನ್ ನೀಡುತ್ತಾರೆ. ಶ್ರೀಗಳು ಊಟ ಮಾಡದ ಕಾರಣ ಅಶಕ್ತಿ ಇದೆ. ಭಕ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ಸಿದ್ದೇಶ್ವರ ಶ್ರೀಗಳ ಬಗ್ಗೆ ತಪ್ಪು ಸಂದೇಶ ಬೇಡ-ಯತ್ನಾಳ್: ಸಿದ್ದೇಶ್ವರ ಶ್ರೀಗಳು ಆರಾಮಾಗಿದ್ದು ಯಾರೊಬ್ಬರೂ ಆತಂಕ ಪಡಬೇಕಿಲ್ಲ. ವೈದ್ಯರು ಉಪಚಾರ ಮಾಡುತ್ತಿದ್ದಾರೆ. ನನಗೂ ದರ್ಶನ ವೇಳೆ ಕೈಸನ್ನೆ ಮಾಡಿ ಕೂರಿ ಎಂದರು. ಕೆಲ ಕುಚೋದ್ಯವ್ಯಕ್ತಿಗಳು ತಪ್ಪು ಸಂದೇಶ ನೀಡುತ್ತಿದ್ದಾರೆ. ಬೆಳಿಗ್ಗೆಗಿಂತ ಈಗ ಉತ್ತಮವಾಗಿದ್ದಾರೆ. ಭಕ್ತರು ತಮ್ಮ ಊರುಗಳಿಗೆ ತೆರಳಬೇಕು. ಗೊಂದಲ, ಗದ್ದಲ ಮಾಡಿದರೆ ಮಠದೊಳಗಿರುವ ಸ್ವಾಮೀಜಿಗಳಿಗೆ ಆತಂಕ ಹೆಚ್ಚಾಗುತ್ತದೆ. ಜೊತೆಗೆ ಊರುಗಳಲ್ಲಿರುವ ಇತರೆ ಭಕ್ತರಿಗೂ ಆತಂಗವಾಗಿ ಮಠಕ್ಕೆ ವ್ಯಥಾ ಮಠಕ್ಕೆ ಬರುತ್ತಾರೆ. ಚಿಕಿತ್ಸೆ ನಡೆದಿದೆ ಸಮಸ್ಯೆ ಇಲ್ಲ. ಈಗ ಆಕ್ಸಿಜನ್ ಲೆವಲ್ ಚೆನ್ನಾಗಿದ್ದು, ದರ್ಶನಕ್ಕೆ ಬಂದವರನ್ನ ಗುರುತು ಹಿಡಿಯುತ್ತಿದ್ದಾರೆ ಎಂದರು.
ತಪ್ಪು ಸಂದೇಶ ವಾಪಸ್ ತೆಗೆಯಿರಿ: ಇನ್ನು ಸಿದ್ದೇಶ್ವರ ಶ್ರೀಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನು ತಪ್ಪು ಸಂದೇಶಗಳನ್ನು ಹಾಕಿದ್ದಾರೋ ಅದನ್ನ ವಾಪಸ್ ತೆಗೆಯಬೇಕು. ಇದೊಂದು ಪಾಪದ ಕೆಲಸ. ಜನರು ವಿಶ್ವಾಸಘಾತ ಕೆಲಸ ಮಾಡಬಾರದು. ಇದರಿಂದ ಭಕ್ತರಲ್ಲಿ ಆತಂಕ ಮೂಡುವಂತೆ ಆಗುತ್ತದೆ. ಸ್ವಾಮೀಜಿಗಳು ಆರೋಗ್ಯ ಚೇತರಿಸಿಕೊಂಡು ಮತ್ತೆ ಪ್ರವಚನ ನೀಡಲಿದ್ದಾರೆ ನಮಗೆ ನಂಬಿಕೆ ಇದೆ. ನಮ್ಮ ವೈದ್ಯರು ಅಧಿಕೃತವಾಗಿ ಎಲ್ಲ ಮಾಹಿತಿಯನ್ನು ಆಗಿಂದಾಗ್ಗೆ ತಿಳಿಸುತ್ತಾರೆ. ಆನ್ ಲೈನ್‌ನಲ್ಲಿಯೂ ಅವರ ದರ್ಶನದ ಬಗ್ಗೆ ಆಗಿಂದಾಗ್ಗೆ ತೋರಿಸ್ತಿದ್ದಾರೆ. ಸುಳ್ಳು ಸಂದೇಶಗಳನ್ನು ಹರಡುವ ಸಾಮಾಜಿಕ ಜಾಲತಾಣಗಳ ಮಾಹಿತಿ ನಂಬಬೇಡಿ ಎಂದರು.