ಧರ್ಮಸ್ಥಳದಲ್ಲಿ ಸೌಜನ್ಯ ಪರ ಹೋರಾಟಗಾರರು ಹಾಗೂ ಸ್ಥಳೀಯ ಗ್ರಾಮಸ್ಥರ ನಡುವೆ ಹೊಡೆದಾಟ ನಡೆದಿದ್ದು, ಯೂಟ್ಯೂಬರ್‌ಗಳಿಗೆ ಧರ್ಮದೇಟು ನೀಡಲಾಗಿದೆ. ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಬೆನ್ನಲ್ಲೇ ಮತ್ತೆ ಪರ-ವಿರೋಧ ಚರ್ಚೆ ಶುರುವಾಗಿದೆ.
ಬೆಂಗಳೂರು (ಆ.6): ಧರ್ಮಸ್ಥಳದಲ್ಲಿ ಸೌಜನ್ಯ ಪರ ಹೋರಾಟಗಾರರು ಹಾಗೂ ಸ್ಥಳೀಯ ಗ್ರಾಮಸ್ಥರ ನಡುವೆ ಹೊಡೆದಾಟವಾಗಿದೆ. ಸೌಜನ್ಯ ವಿಚಾರವನ್ನು ಹಿಡಿದುಕೊಂಡು ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಾಧಿಕಾರಿ ಪೀಠಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿರುವ ಗ್ರಾಮಸ್ಥರು ಯೂಟ್ಯೂಬರ್‌ಗಳಿಗೆ ಧರ್ಮದೇಟು ನೀಡಿ ಕ್ಷೇತ್ರದಿಂದ ಓಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಮತ್ತೊಮ್ಮೆ ಪರ ವಿರೋಧದ ಚರ್ಚೆ ಶುರುವಾಗಿದೆ. ಈ ಘಟನೆಯಲ್ಲಿ ಸೌಜನ್ಯ ಪರ ಹೋರಟಗಾರರಲ್ಲಿ ಪ್ರಮುಖವಾಗಿ ನಿಂತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಗ್ಯಾಂಗ್, ಸುವರ್ಣನ್ಯೂಸ್ ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಮೇಲೂ ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಹಾಗೂ ವಿಡಿಯೋ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಸೌಜನ್ಯ ಪರ ಮಾತನಾಡುವ ನಟ ಪ್ರಕಾಶ್ ರಾಜ್, ಧರ್ಮಸ್ಥಳದಲ್ಲಿ ಸೌಜನ್ಯ ಪರ ನ್ಯಾಯ ಕೇಳುತ್ತಾ ಕೆಲಸ ಮಾಡುತ್ತಿರುವ ಪತ್ರಕರ್ತರ ಮೇಲೆ ಹಲ್ಲೆ ಖಂಡನಾರ್ಹ. ಇಂಥ ಗೂಂಡಾಗಳಿಂದಲೇ ಲಕ್ಷಾಂತರ ಜನರು ಪೂಜಿಸುವ ಮತ್ತು ಗೌರವಿಸುವ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕಳಂಕ ಬರುತ್ತಿದೆ. ಸೌಜನ್ಯ ಅನ್ನೋ ನಮ್ಮ ಹೆಣ್ಣುಮಗಳ ಮೇಲೆ ಇಂಥ ದಾರುಣ ಹತ್ಯೆ ಯಾಕೆ ನಡೆಯಿತು ಅಂತಾ ಕೇಳಿದರೆ ಈ ಗೂಂಡಾಗಳಿಗೆ ಯಾಕೆ ಕಿರಿಕಿರಿ ಆಗ್ತಾ ಇದೆ? ಯಾಕೆ ಕೋಪ ಬರ್ತಾ ಇದೆ? ಇವರ ಹಿಂದೆ ಯಾರಿದ್ದಾರೆ? ಯಾರು ಕಳಿಸಿ ಇವರಿಗೆ ಹೀಗೆ ಹೊಡೆಸುತ್ತಿದ್ದಾರೆ? ಅನುಮಾನ ಜಾಸ್ತಿ ಆಗ್ತಾ ಇದೆ. ದಯವಿಟ್ಟು ಪೊಲೀಸರು ಈ ಗೂಂಡಾಗಳನ್ನು ಬಂಧಿಸಿ. ಇದರ ಸತ್ಯಾಸತ್ಯತೆಯನ್ನು ತಿಳಿಸಬೇಕು. ಜನ ಅರ್ಥ ಮಾಡಿಕೊಳ್ಳಿ. ನ್ಯಾಯ ಕೇಳೋದು ನಮ್ಮ ಕರ್ತವ್ಯ, ನಮ್ಮ ಹಕ್ಕು ಎಂದು ಪ್ರಕಾಶ್ ರಾಜ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಆಗಿದ್ದೇನು: ಬಿಗ್‌ಬಾಸ್ ಸ್ಪರ್ಧಿ ರಜತ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಸೌಜನ್ಯ ಮನೆಗೆ ಹೋಗುವ ಪ್ರಯತ್ನ ಮಾಡಿದ್ದರು. ಈ ವೇಳೆ ಅಲ್ಲಿದ್ದ ಕೆಲ ಯೂಟ್ಯೂಬರ್‌ಗಳು ರಜತ್‌ರನ್ನು ನಿಲ್ಲಿಸಿ ಅವರಿಗೆ ಸೌಜನ್ಯ ಪರವಾಗಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಹಂತದಲ್ಲಿ ಅಲ್ಲಿಗೆ ಬಂದ ಭಕ್ತರು ಅವರೊಂದಿಗೆ ಹಲ್ಲೆ ಮಾಡಿದ್ದಾರೆ. ಮಾತುಕತೆ ವಿಕೋಪಕ್ಕೆ ಹೋದ ಬಳಿಕ ಸ್ಥಳೀಯ ಗ್ರಾಮಸ್ಥರು ಯೂಟ್ಯೂಬರ್‌ಗೆ ಧರ್ಮದೇಟು ನೀಡಿದ್ದಾರೆ.
ಇದಕ್ಕೆ ಕಾರಣವನ್ನೂ ನೀಡಿರುವ ಭಕ್ತರು, ಸೋಶಿಯಲ್ ಮೀಡಿಯಾದಲ್ಲಿ ಸೌಜನ್ಯ ಕೇಸ್ ಹಾಗೂ ಎಸ್‌ಐಟಿ ತನಿಖೆ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಎಸ್‌ಐಟಿ ಅವರು ಇಲ್ಲಿಯವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಇವರುಗಳು ಅಲ್ಲಿ ನೂರಾರು ಅಸ್ಥಿಪಂಜರ ಸಿಕ್ಕಿವೆ ಅನ್ನೋ ಅರ್ಥದಲ್ಲಿ ಪೋಸ್ಟ್ ಮಾಡುವ ಮೂಲಕ ಕ್ಷೇತ್ರವನ್ನು ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ಇಲ್ಲಿಯವರೆಗೂ ತಾಳ್ಮೆಯಿಂದ ಇದ್ದೆವು. ಸುಳ್ಳು ಸುದ್ದಿ ಹರಡುವವರ ಮೇಲೆ ಯಾವುದೇ ಕ್ರಮಗಳು ಆಗುತ್ತಿಲ್ಲ. ಕ್ಷೇತ್ರದ ಬಗ್ಗೆ ಸುಳ್ಳು ಹಬ್ಬಿಸುವವರು ಆ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಗ್ರಾಮಸ್ಥರು ಧರ್ಮಸ್ಥಳ ಠಾಣೆಯ ಮುಂದೆ ಭಾರೀ ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳಕ್ಕೆ ಎಸ್‌ಪಿ ಬರಬೇಕು ಎಂದು ಆಗ್ರಹಿಸಿದ್ದಾರೆ.
