ನಗರದಲ್ಲಿರುವ ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳನ್ನು ಸುಂದರಗೊಳಿಸಲು ಸಮಗ್ರ ಯೋಜನೆ ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು : ನಗರದಲ್ಲಿರುವ ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳನ್ನು ಸುಂದರಗೊಳಿಸಲು ಸಮಗ್ರ ಯೋಜನೆ ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ಜಿಬಿಎ ವ್ಯಾಪ್ತಿಯ ವಿವಿಧ ಯೋಜನೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗೆ ಅವಕಾಶವಿರುವ ಪಾಲಿಕೆ ಹಾಗೂ ಬಿಡಿಎ ನಿರ್ಮಿಸಿರುವ ಎಲ್ಲಾ ಮೇಲ್ಸೇತುವೆಗಳ ಕೆಳಭಾಗವನ್ನು ಅಭಿವೃದ್ಧಿಪಡಿಸಲು ಪಟ್ಟಿ ಮಾಡಬೇಕು. ಪಾಲಿಕೆ, ಮೆಟ್ರೋ, ಜಲಮಂಡಳಿ ಹಾಗೂ ಬಿಡಿಎದಿಂದ ಸಸಿಗಳನ್ನು ನೆಟ್ಟು ಸಮರ್ಪಕ ಆರೈಕೆ ಮಾಡಬೇಕು ಎಂದು ಸೂಚಿಸಿದರು.

ತುಷಾರ್ ಗಿರಿ ನಾಥ್ ಸೂಚನೆ

ಜಲಮಂಡಳಿ ತನ್ನ ಎಸ್‌ಟಿಪಿ ಘಟಕಗಳ ಸುತ್ತಲೂ ಸಸಿ ನೆಡುವ ಯೋಜನೆ ರೂಪಿಸಬೇಕು. ರಸ್ತೆ ಬದಿ ಹಾಗೂ ಕೆರೆಗಳ ಸುತ್ತಲೂ ಬಿದಿರು ಸಸಿಗಳನ್ನು ನೆಡಬೇಕು. ಟ್ರೀ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ವೆಚ್ಚದ ಕುರಿತು ವರದಿ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತುಷಾರ್ ಗಿರಿ ನಾಥ್ ಸೂಚನೆ ನೀಡಿದರು.

ಖಾಸಗಿ ಜಾಗಗಳಲ್ಲಿ ಪಾರ್ಕಿಂಗ್‌: ರಸ್ತೆ ಬದಿಗಳಲ್ಲಿರುವ ಖಾಲಿ ಜಾಗಗಳು ಅಥವಾ ಖಾಸಗಿ ನಿವೇಶನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಕುರಿತು ಪರಿಶೀಲಿಸಿ, ಜಾಗದ ಮಾಲೀಕರಿಗೆ ಸೌಲಭ್ಯಗಳು ಮತ್ತು ಪ್ರೋತ್ಸಾಹಧನ ನೀಡುವ ಕುರಿತು ವರದಿ ಸಲ್ಲಿಸುವಂತೆ ತುಷಾರ್ ಗಿರಿ ನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ಪಾರ್ಕಿಂಗ್ ಹೆಚ್ಚಾಗುತ್ತಿವೆ

ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ನಗರದ ರಸ್ತೆ ಬದಿಗಳಲ್ಲಿ ಅನಧಿಕೃತ ಪಾರ್ಕಿಂಗ್ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ನಡೆಸಿ ಅನಧಿಕೃತ ಪಾರ್ಕಿಂಗ್ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ನಗರದಲ್ಲಿ ದ್ವಿತೀಯ ಹಂತದ ತ್ಯಾಜ್ಯ ವರ್ಗಾವಣೆ ಘಟಕಗಳ ನಿರ್ಮಾಣಕ್ಕೆ ಜಾಗದ ಅಭಾವವಿರುವ ಪ್ರದೇಶಗಳಲ್ಲಿ ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹೇಶ್ವರ ರಾವ್ ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಬಿಡಿಎ ಆಯುಕ್ತ ಮಣಿವಣ್ಣನ್, ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ ಜಿ.ಜಗದೀಶ್, ನಗರ ಪಾಲಿಕೆಗಳ ಆಯುಕ್ತರು ಉಪಸ್ಥಿತರಿದ್ದರು.