ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯೂಟ್ಯೂಬರ್‌ಗಳಿಗೆ ಭಕ್ತರಿಂದ ಧರ್ಮದೇಟು. ಸ್ಥಳೀಯ ಆಸ್ಪತ್ರೆಗೆ ದಾಖಲು. ಧರ್ಮಸ್ಥಳದ ಕುರಿತು ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ.

ಧರ್ಮಸ್ಥಳ (ಆ.6): ಸಾಲು ಸಾಲು ಅಪಪ್ರಚಾರ, ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿಗಳನ್ನೇ ಬಿತ್ತರ ಮಾಡುತ್ತಿದ್ದ 30ಕ್ಕೂ ಅಧಿಕ ಯೂಟ್ಯೂಬರ್‌ಗಳ ಮೇಲೆ ಧರ್ಮಸ್ಥಳದ ಭಕ್ತರು ಶ್ರೀಕ್ಷೇತ್ರದಲ್ಲಿಯೇ ಧರ್ಮದೇಟು ನೀಡಿ ಓಡಿಸಿದ್ದಾರೆ. ಕೆಲವರವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಉಜಿರೆಯಲ್ಲಿ ಸುವರ್ಣನ್ಯೂಸ್‌ ವರದಿಗಾರನ ಮೇಲೆ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಗ್ಯಾಂಗ್‌ ಹಲ್ಲೆ ಮಾಡಿದ್ದಾರೆ. ಇದರ ನಡುವೆ, ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ, ಧರ್ಮಸ್ಥಳದ ಕುರಿತು ಅವಮಾನ ಮಾಡುವವರ ಮೇಲೆ ಕ್ರಮವಾಗಲೇಬೇಕು ಎಂದು ಭಕ್ತರು ಧರ್ಮಸ್ಥಳ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.

ಈ ಬಗ್ಗೆ ಹಲವು ಭಕ್ತರು ಮಾತನಾಡಿದ್ದು, 'ಎಸ್‌ಐಟಿ ಇಲ್ಲಿಯವರೆಗೂ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.ಆದ್ರೆ ಇವರು ತಮ್ಮ ತಮ್ಮದೇ ಹೇಳಿಕೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 14 ಎಲುಬು ಸಿಕ್ಕಿದೆ, 104 ಎಲುಬು ಸಿಕ್ಕಿದೆ ಅಂತಾ ಹೇಳ್ತಿದ್ದಾರೆ. ನ್ಯಾಯ ಸಿಗುತ್ತೆ, ಸಿಗುತ್ತೆ ಅಂತಾ ಕಾದು ಕಾದು ಸಾಕಾಗಿದೆ ನಮಗೆ. ಇಲ್ಲಿನ ಪೊಲೀಸ್‌ನವರಿಗೆ ಈಗಲ್ಲ 12-13 ವರ್ಷಗಳಿಂದ ಬಾಯಿಗೆ ಬಂದ ಹಾಗೆ ಬೈತಿದ್ದಾರೆ. ಆದ್ರೆ ಪೊಲೀಸ್‌ ಅವರು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಾವು ಇಲ್ಲಿ ಶಾಂತಿಯಿಂದ ಪ್ರತಿಭಟನೆಗೆ ಮುಂದಾದರೆ, ಮೂರು ಬಸ್ಸಿನಲ್ಲಿ ಪೊಲೀಸ್‌ನವರು ತಂದು ನಿಲ್ಲಿಸುತ್ತಾರೆ. ನಾವೇನಾದರೂ ಕೈಯಲ್ಲಿ ಆಯುಧ ಹಿಡಿದುಕೊಂಡು ಬಂದಿದ್ದೇವಾ? ನಾವು ನ್ಯಾಯ ಕೇಳಲು ಬಂದಿದ್ದೇವೆ.

ಎಸ್‌ಐಟಿ ತನಿಖೆಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದೇವೆ.ನಾವು ಶಾಂತಿ ಪ್ರಿಯರು. ನಾವು ನಿರ್ದೋಷಿಗಳಾಗಬೇಕು. ಟಾಯ್ಲೆಟ್‌ ಕಟ್ಟೋಕೆ ಯೋಗ್ಯತೆ ಇಲ್ಲದವರು ಧರ್ಮಸ್ಥಳದ ಬಗ್ಗೆ ಬೆರಳು ತೋರಿಸ್ತಿದ್ದಾರೆ. ಹೀಗಾದಾಗ ನಮಗೆ ನ್ಯಾಯವ್ಯವಸ್ಥೆಯ ಬಗ್ಗೆ ನಂಬಿಕೆ ಬರೋದು ಹೇಗೆ? ಸುಳ್ಳು ಆರೋಪ ಮಾಡ್ತಾ ಇರೋನನ್ನು ತನಿಖೆ ಮಾಡಬೇಕಲ್ವಾ? ನಮ್ಮ ಮನೆಯಿಂದ ಯಾರಾದರೂ ಕಾಣೆಯಾಗಿದ್ದಾರೆ ಎಂದು ಸ್ಟೇಷನ್‌ಗೆ ಹೋದರೆ, ಪೊಲೀಸರು ಮೊದಲು ಏನು ಕೇಳ್ತಾರೆ? ನಿಮಗೆ ಏನಾದರೂ ಸಮಸ್ಯೆ ಆಗಿದ್ಯಾ ಅಂತಾ ಕೇಳ್ತಾರೆ. ಆದರೆ, ಧರ್ಮಸ್ಥಳದಲ್ಲಿ ಇಷ್ಟು ದೊಡ್ಡ ವ್ಯಕ್ತಿಯ ಮೇಲೆ ಆರೋಪ ಮಾಡುವಾಗ ಆರೋಪ ಮಾಡಿದ ವ್ಯಕ್ತಿಯನ್ನು ತನಿಖೆ ಮಾಡಬೇಕಾ? ಬೇಡ್ವಾ? ಈ ಹೋರಾಟಗಾರರಿಗೆ ಬೆಂಬಲ ಕೊಟ್ಟಿರುವುದೇ ಪೊಲೀಸ್‌ನವರು. ನಮಗೆ ರೌಡಿಸಂ, ಕೆಟ್ಟದ್ದು ಮಾತನಾಡೋದು ಈ ಸಂಸ್ಕೃತಿಯೇ ನಮಗಿಲ್ಲ ಎಂದು ಭಕ್ತರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ತ್ತೊಬ್ಬ ಭಕ್ತರು, ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಯೂಟ್ಯೂಬ್‌ನಲ್ಲಿ ಹಾಕುವವರ ಮೇಲೆ ಕ್ರಮ ಆಗಬೇಕು. ಅವರು ಮಾಡುತ್ತಿರುವ ಯಾವ ಆರೋಪಗಳಿಗೂ ಸಾಕ್ಷಿಗಳಿಲ್ಲ. ಎಲ್ಲಾ ಯೂಟ್ಯೂಬರ್‌ಗಳು ಸಾಕ್ಷಿ ಇಟ್ಟು ಮಾತನಾಡಬೇಕು. ಸಾಕ್ಷಿ ಇಲ್ಲದೆ ಮಾಡುವ ಆಪಾದನೆಗಳು ನಿಲ್ಲಬೇಕು. ಎಸ್‌ಐಟಿ ತನಿಖೆ ಬಳಿಕ ಎಲ್ಲರಿಗೂ ಸತ್ಯ ಗೊತ್ತಾಗುತ್ತದೆ. ನಮಗೆ ಎಲ್ಲರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಕಂತೆ ಕಂತೆ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಎಸ್‌ಪಿ ಇಲ್ಲಿಗೆ ಬರಬೇಕು ಅಥವಾ ಯೂಟ್ಯೂಬರ್‌ಗಳು ಸಾಕ್ಷಿ ನೀಡಬೇಕು. ಇಲ್ಲದೇ ಇದ್ದಲ್ಲಿ ನಾವು ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

13 ವರ್ಷದಿಂದ ಗಿರೀಶ್‌ ಮಟ್ಟಣ್ಣನವರ್‌, ಮಹೇಶ್‌ ಶೆಟ್ಟಿ ಬರೀ ಸುಳ್ಳುಗಳನ್ನೇ ಹೇಳಿ ಧರ್ಮಸ್ಥಳದ ಮಾನ ತೆಗೆದಿದ್ದಾರೆ. ಕ್ಷೇತ್ರಕ್ಕೆ, ಧರ್ಮಾಧಿಕಾರಿ ಪೀಠಕ್ಕೆ, ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ತುಂಬಾ ಕೀಳು ಶಬ್ದಗಳನ್ನು ಬಳಸಿದ್ದಾರೆ. ನಾವು ಇದುವರೆಗೂ ಶಾಂತಿಯಲ್ಲಿದ್ದೆವು. ಎಲ್ಲಾ ನೋವನ್ನು ಅನುಭವಿಸಿಕೊಂಡು ಬಂದಿದ್ದೇವೆ. ಆದರೆ, ಇಂದು ಸಂಜೆಯ ವೇಳೆ ಅವರ 30-40 ಗೂಂಡಾಗಳು ಕ್ಷೇತ್ರದ ಮೇಲೆ ದಾಳಿ ಮಾಡೋಕೆ ಬಂದಿದ್ದರು. ಅವರನ್ನು ತಡೆಯುವಂಥ ಕೆಲಸ ಪೊಲೀಸರು ಮಾಡಲಿಲ್ಲ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ಅವರನ್ನು ಅಲ್ಲಿಂದ ಕಳಿಸೋಕೆ ನಾವು ಬಂದಿದ್ದೆವು. ಆ 30 ಜನರನ್ನೂ ಬಂಧಿಸಬೇಕು ಅನ್ನೋದೇ ನಮ್ಮ ಆಗ್ರಹ ಎಂದು ಇನ್ನೊಬ್ಬ ಭಕ್ತರು ಹೇಳಿದ್ದಾರೆ.