ಇಂದು ಕೆ.ಆರ್.ಪುರ-ವೈಟ್‌ಫೀಲ್ಡ್ 'ನಮ್ಮ ಮೆಟ್ರೋ'ಗೆ ಮೋದಿ ನಿಶಾನೆ
ಪ್ರಧಾನಿ ನರೇಂದ್ರ ಮೋದಿ ಅವರು ಮಾ.25 ರಂದು ಬಹುನಿರೀಕ್ಷಿತ ಕೆ.ಆರ್.ಪುರ-ವೈಟ್‌ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ಮಾರ್ಗ ಹೊಂದಿರುವ ಹೆಗ್ಗಳಿಕೆಗೆ ‘ನಮ್ಮ ಮೆಟ್ರೋ’ ಭಾಜನವಾಗಲಿದೆ.
ಬೆಂಗಳೂರು (ಮಾ.25): ಪ್ರಧಾನಿ ನರೇಂದ್ರ ಮೋದಿ ಅವರು ಮಾ.25 ರಂದು ಬಹುನಿರೀಕ್ಷಿತ ಕೆ.ಆರ್.ಪುರ-ವೈಟ್‌ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ಮಾರ್ಗ ಹೊಂದಿರುವ ಹೆಗ್ಗಳಿಕೆಗೆ ‘ನಮ್ಮ ಮೆಟ್ರೋ’ ಭಾಜನವಾಗಲಿದೆ. ಶನಿವಾರ ಬೆಳಿಗ್ಗೆ 10.25ಕ್ಕೆ ದೆಹಲಿಯಿಂದ ನೇರವಾಗಿ ನಗರಕ್ಕೆ ಆಗಮಿಸುವ ನರೇಂದ್ರ ಮೋದಿ ಅವರು ಪೂರ್ವ ನಿಗದಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ನಗರಕ್ಕೆ ಹಿಂದಿರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಕೆ.ಆರ್.ಪುರದವರೆಗೆ ಮೆಟ್ರೋದಲ್ಲಿ ಸಂಚರಿಸುವ ಮೂಲಕ ಈ ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಸದ್ಯ ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ನೇರಳೆ ಮಾರ್ಗ (25.63 ಕಿ.ಮೀ.) ಹಾಗೂ ನಾಗಸಂದ್ರದಿಂದ ರೇಷ್ಮೆ ಮಂಡಳಿಯವರೆಗೆ ಹಸಿರು ಮಾರ್ಗ (30.4) ಸೇರಿ ಒಟ್ಟಾರೆ 56 ಕಿ.ಮೀ. ನಷ್ಟುಮೆಟ್ರೋ ಸೇವೆಯ ಲ್ಲಿದೆ. ಇದರ ಜತೆಗೀಗ ನೇರಳೆ ಮಾರ್ಗದ ವಿಸ್ತರಿತ ಎರಡನೇ ಹಂತವಾದ ಕೆ.ಆರ್.ಪುರಂ-ವೈಟ್‌ಫೀಲ್ಡ್‌ನ 13.71 ಕಿ.ಮೀ. ಸೇರ್ಪಡೆಯಿಂದ ಒಟ್ಟಾರೆ 69.71 ಕಿ.ಮೀ. ಉದ್ದದ ಮೆಟ್ರೋ ಜನಬಳಕೆಗೆ ಮುಕ್ತ ವಾದಂತಾಗಲಿದೆ.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ನಡುವಿನ ಮಾರ್ಗದ ಕಾಮಗಾರಿ ಪೂರ್ಣಗೊಂಡು ಫೆ.22 ರಿಂದ 25 ರವರೆಗೂ ಸುರಕ್ಷತಾ ಪರೀಕ್ಷೆ ನಡೆದಿತ್ತು. ಈ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ರು ಫೆ.28ರಂದು 58 ಷರತ್ತುಗಳೊಂದಿಗೆ ಬಿಎಂಆರ್‌ಸಿಎಲ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಸಿಗ್ನಲಿಂಗ್, ಟ್ರ್ಯಾಕಿಂಗ್, ನಿಲ್ದಾಣಗಳಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಸೇರಿದಂತೆ ಇತರೆ ಲೋಪದೋಷಗಳನ್ನು ಸರಿಪಡಿಸಿ ಕೊಂಡು ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್ ಸರ್ಕಾರದ ಅನುಮೋದನೆ ಕೋರಿತ್ತು. ನಂತರ ಸರ್ಕಾರ ಅನುಮೋದನೆ ನೀಡಿತ್ತು.
3 ಲಕ್ಷ ಜನರಿಗೆ ಅನುಕೂಲ: ಈ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಪ್ರತಿ 12 ನಿಮಿಷಗಳಿಗೊಂದು ರೈಲು ಸಂಚರಿಸಲಿವೆ. ಸಾಮಾನ್ಯವಾಗಿ ಸ್ವಂತ ವಾಹನದಲ್ಲಿ ಕೆ.ಆರ್.ಪುರದಿಂದ ವೈಟ್‌ಫೀಲ್ಡ್‌ಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಆದರೆ ಮೆಟ್ರೋದಿಂದಾಗಿ ಪ್ರಯಾಣದ ಸಮಯ 24 ನಿಮಿಷಗಳಿಗೆ ತಗ್ಗಲಿದೆ. ಈ ಮಾರ್ಗದಿಂದ ಪ್ರತಿದಿನ 2.5 ರಿಂದ 3 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದೇ ಕಾರಿಡಾರ್‌ನ ಭೈಯಪ್ಪನಹಳ್ಳಿಯ 2 ಕಿ.ಮೀ. ಮಾರ್ಗ ಜುಲೈ ಬಳಿಕ ಜನಬಳಕೆಗೆ ಮುಕ್ತವಾಗುವ ನಿರೀಕ್ಷೆಯಿದೆ.
12 ಮೆಟ್ರೋ ನಿಲ್ದಾಣ: ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ ಮತ್ತು ಕೆ.ಆರ್.ಪುರಂ.
ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಮಾರ್ಗ: ದೇಶದಲ್ಲಿ ದೆಹಲಿ ಮೆಟ್ರೋ (349 ಕಿ.ಮೀ.) ಪ್ರಥಮ ಸ್ಥಾನದಲ್ಲಿದ್ದು, ಹೈದ್ರಾಬಾದ್ (69.1) 2 ನೇ ಸ್ಥಾನದಲ್ಲಿದೆ. ಶನಿವಾರ ‘ನಮ್ಮ ಮೆಟ್ರೋ’ದ ಹೊಸ ಮಾರ್ಗದ ಲೋಕಾರ್ಪಣೆ ಆಗುವುದರಿಂದ ಒಟ್ಟಾರೆ 69.71 ಕಿ.ಮೀ. ಉದ್ದದ ಮೆಟ್ರೋ ಜನ ಬಳಕೆಗೆ ಮುಕ್ತವಾಗಲಿದೆ. ಜೊತೆಗೆ ಹೈದ್ರಾಬಾದ್ ಹಿಂದಿಕ್ಕಿ 2 ನೇ ಸ್ಥಾನಕ್ಕೆ ಏರಲಿದೆ.
ಸುಗಮ ಸಂಚಾರಕ್ಕೆ ಅನುವು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ನಗರದ ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದಾರೆ.
ಕಾಟಂಲ್ಲೂರು ಕ್ರಾಸ್‌ನಿಂದ ಕಾಡುಗೋಡಿ-ಹೋಪ್ ಫಾರಂ ಸರ್ಕಲ್-ವರ್ತೂರು ಕೋಡಿ, ಗುಂಜೂರು-ವರ್ತೂರು-ವೈಟ್‌ಫೀಲ್ಡ್-ಹೋಫ್ ಫಾರಂ ವೃತ್ತ-ಕಾಡುಗೋಡಿ- ಕಾಟಂನಲ್ಲೂರು ಕ್ರಾಸ್, ತಿರುಮಲ ಶೆಟ್ಟಿಹಳ್ಳಿ ಕ್ರಾಸ್‌ನಿಂದ ಚನ್ನಸಂದ್ರ-ಹೋಪ್ ಫಾರಂ ವೃತ್ತ, ಟಿನ್‌ಫ್ಯಾಕ್ಟರಿ ಕಡೆಯಿಂದ ಹೂಡಿ-ಐಟಿಪಿಎಲ್ ಮುಖ್ಯರಸ್ತೆ- ಹೋಫ್ ಫಾರಂ ವೃತ್ತ, ಮಾರತ್‌ಹಳ್ಳಿ ಬ್ರಿಡ್ಜ್-ಕುಂದಲಹಳ್ಳಿ-ವರ್ತೂರು ಕೋಡಿ-ವೈಟ್‌ಫೀಲ್ಡ್ ಕಡೆಗೆ ಸಂಚರಿಸುವ ಭಾರೀ ಗಾತ್ರದ ವಾಹನಗಳ ಸಂಚಾರವನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3ಗಂಟೆ ವರೆಗೆ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು: ಹೊಸಕೋಟೆ-ದೊಡ್ಡಗಟ್ಟಿಗನಬ್ಬಿ-ತಿರುಮಲಶೆಟ್ಟಿಹಳ್ಳಿ- ಚಿಕ್ಕತಿರುಪತಿ ಮೂಲಕ ಸರ್ಜಾಪುರ ಕಡೆಗೆ, ಸರ್ಜಾಪುರ-ಗುಂಜೂರು ಶ್ರೀರಾಮ ದೇವಸ್ಥಾನ-ನೆರಿಗೆ ರಸ್ತೆ-ತಿರುಮಲಶೆಟ್ಟಿಹಳ್ಳಿ -ದೊಡ್ಡಗಟ್ಟಿಗನಬ್ಬಿ ಮೂಲಕ ಹೊಸಕೋಟೆ ಕಡೆಗೆ, ಟಿನ್‌ಫ್ಯಾಕ್ಟರಿ-ಕೆ.ಆರ್.ಪುರಂ-ಭಟ್ಟರಹಳ್ಳಿ-ಹೊಸಕೋಟೆ ಕಡೆಗೆ, ಮಾರತ್‌ಹಳ್ಳಿ-ದೊಡ್ಡನೆಕ್ಕುಂದಿ-ಮಹದೇವಪುರ-ಟಿನ್‌ಫ್ಯಾಕ್ಟರಿ ಭಟ್ಟರಹಳ್ಳಿ ಕಡೆಗೆ ಸಂಚರಿಸಬೇಕು.
ಎಲ್ಲೆಲ್ಲಿ ವಾಹನ ಸಂಚಾರ ನಿರ್ಬಂಧ: ವರ್ತೂರಿ ಕೋಡಿಯಿಂದ ಹೋಫ್ ಫಾರಂ ವೃತ್ತ-ಕಾಡುಗೋಡಿ-ಕನ್ನಮಂಗಲ ಗೇಟ್, ಚನ್ನಸಂದ್ರದಿಂದ ಹೋಫ್ ಫಾರಂ ವೃತ್ತದ ಮೂಲಕ ಹೂಡಿ ಸರ್ಕಲ್, ಕುಂದಲಹಳ್ಳಿ ರಸ್ತೆ-ಗ್ರಾಪೈಟ್ ಜಂಕ್ಷನ್-ವೈದೇಹಿ ಆಸ್ಪತ್ರೆ ವೃತ್ತ-ಬಿಗ್ ಬಜಾರ್ ಜಂಕ್ಷನ್ ಹೋಫ್ ಫಾರಂ ಸರ್ಕಲ್ ವರೆಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೆ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ: ಕಾನೂನು ತಜ್ಞರು ಏನಂತಾರೆ?
ಮಾರ್ಗಗಳು: ವರ್ತೂರು ಕೋಡಿ-ಕುಂದಲಹಳ್ಳಿ ಬ್ರಿಡ್ಜ್-ಹಳೇ ಏರ್‌ಪೋರ್ಚ್ ರಸ್ತೆ ಮೂಲಕ ತಲುಪಬಹುದು, ಚನ್ನಸಂದ್ರ ಸರ್ಕಲ್‌ನಿಂದ ನಾಗೊಂಡನಹಳ್ಳಿ-ಇಮ್ಮಡಿಹಳ್ಳಿ-ಹಗದೂರು ಮೂಲಕ ವರ್ತೂರು ಕೋಡಿ ಕಡೆಗೆ, ಕಾಟಂನಲ್ಲೂರು ಕ್ರಾಸ್‌ನಿಂದ ಕನ್ನಮಂಗಲ ಗೇಟ್-ಶಿಗೇಹಳ್ಳಿ ಗೇಟ್-ಎಚ್‌ಪಿ ಪೆಟ್ರೋಲ್ ಬಂಕ್ ಕಾಡುಗೋಡಿ ನಾಲಾ ರಸ್ತೆ ಮೂಲಕ ಚನ್ನಸಂದ್ರ ಕಡೆಗೆ, ಹೂಡಿ ವೃತ್ತದಿಂದ ಗ್ರಾಫೈಟ್ ರಸ್ತೆ-ಕುಂದಲಹಳ್ಳಿ ರಸ್ತೆ ಕಡೆಗೆ, ಹೂಡಿ ವೃತ್ತದಿಂದ ಅಯ್ಯಪ್ಪನಗರ-ಭಟ್ಟರಹಳ್ಳಿ ಜಂಕ್ಷನ್-ಮೇಡಹಳ್ಳಿ ಬ್ರಿಡ್ಜ್ ಮೂಲಕ ಕಾಟಂನಲ್ಲೂರು ಕ್ರಾಸ್ ಮೂಲಕ ತಲುಪಬಹುದು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೋದಿಯ ಇಂದಿನ ಕಾರ್ಯಕ್ರಮಗಳು
* ಇಂದು ಬೆಳಗ್ಗೆ 10.25 ಕ್ಕೆ ಹೆಚ್ ಎಎಲ್ ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿ.
* 10.30 ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗಲಿರುವ ಮೋದಿ.
* ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಭೇಟಿ ಕೊಡುವ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ.
* 12.20 ಕ್ಕೆ ಕಾರ್ಯಕ್ರಮಗಳನ್ನ ಮುಗಿಸಿ,12.35 ಕ್ಕೆ ಚಿಕ್ಕಬಳ್ಳಾಪುರದಿಂದ ವೈಟ್ ಫೀಲ್ಡ್ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಲ್ಲಿ ಆಗಮನ.
* 1 ಗಂಟೆಗೆ ವೈಟ್ ಫೀಲ್ಡ್ ಹೆಲಿಪ್ಯಾಡ್ ತಲುಪಲಿದ್ದು, ರಸ್ತೆ ಮಾರ್ಗವಾಗಿ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್.
* 1.15 ರಿಂದ 1.45 ರಲ್ಲಿ ಮೆಟ್ರೋ ಉದ್ಘಾಟನೆ ಮಾಡಿ ಸಂಚಾರ.
* 1.50 ಕ್ಕೆ ವೈಟ್ ಫೀಲ್ಡ್ ಹೆಲಿಪ್ಯಾಡ್.
* 1.55 ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣ.