Asianet Suvarna News Asianet Suvarna News

ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ: ಕಾನೂನು ತಜ್ಞರು ಏನಂತಾರೆ?

ಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಲು ಅವಕಾಶವಿರುವ ಸಂದರ್ಭದಲ್ಲೇ ರಾಹುಲ್‌ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕ್ರಮ ಸಂಪೂರ್ಣ ಕಾನೂನು ಬಾಹಿರ ಎಂಬುದಾಗಿ ಕೆಲ ಹಿರಿಯ ವಕೀಲರು ತಿಳಿಸಿದ್ದಾರೆ. 

What Do Legal Experts Think About Rahul Gandhis Lok Sabha Membership Disqualification gvd
Author
First Published Mar 25, 2023, 8:24 AM IST

ಬೆಂಗಳೂರು (ಮಾ.25): ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ದೋಷಿಯಾಗಿ ತೀರ್ಮಾನಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಗುಜರಾತ್‌ನ ಸೂರತ್‌ ಸಿಜೆಂಎಂ ನ್ಯಾಯಾಲಯ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಅವರ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಿ ಲೋಕಸಭೆ ಕಾರ್ಯದರ್ಶಿ ಹೊರಡಿಸಿರುವ ಆದೇಶವು ತೀವ್ರ ವಿವಾದಕ್ಕೆ ಗುರಿಯಾಗಿದ್ದು, ಆ ಆದೇಶದ ಸಿಂಧುತ್ವ ಬಗ್ಗೆ ಕಾನೂನು ತಜ್ಞರು ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ.

ಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಲು ಅವಕಾಶವಿರುವ ಸಂದರ್ಭದಲ್ಲೇ ರಾಹುಲ್‌ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕ್ರಮ ಸಂಪೂರ್ಣ ಕಾನೂನು ಬಾಹಿರ ಎಂಬುದಾಗಿ ಕೆಲ ಹಿರಿಯ ವಕೀಲರು ತಿಳಿಸಿದ್ದಾರೆ. ಇದೇ ವೇಳೆ ಚುನಾಯಿತ ಜನಪ್ರತಿನಿಧಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ, ಆ ಕ್ಷಣದಿಂದಲೇ ಅವರ ಸದಸ್ಯತ್ವ ಅನರ್ಹವಾಗುತ್ತದೆ. ಹೀಗಾಗಿ, ಅಹರ್ನತೆ ಆದೇಶವು ಕಾನೂನುಬದ್ಧವಾಗಿದೆ. ಇನ್ನೂ ಈ ಶಿಕ್ಷೆ ಆದೇಶಕ್ಕೆ ಮೇಲಿನ ಕೋರ್ಟ್‌ ತಡೆ ನೀಡಿದರೆ ಅಥವಾ ಅನರ್ಹ ಆದೇಶವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಪಡೆದುಕೊಂಡರೆ ರಾಹುಲ್‌ ಗಾಂಧಿಯ ಲೋಕಸಭಾ ಸದಸ್ಯತ್ವ ಸದ್ಯಕ್ಕೆ ಸೇಫ್‌ ಆಗಲಿದೆ ಎಂದು ಮತ್ತಷ್ಟುಕಾನೂನು ತಜ್ಞರು ತಿಳಿಸುತ್ತಾರೆ.

ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ: ಇವೆಲ್ಲದಕ್ಕೂ ಕಾರಣ ಮುಳಬಾಗಿಲು ಸಾಕ್ಷಿ ರಘುನಾಥ್‌

ತಡೆಯಾಜ್ಞೆ ಪಡೆದರೆ ಸದಸ್ಯತ್ವ ಸೇಫ್‌: ರಾಹುಲ್‌ ಗಾಂಧಿ ಅವರನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಮೇಲಿನ ಕೋರ್ಟ್‌ ತಡೆಯಾಜ್ಞೆ ನೀಡಿದರೆ, ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿರುವ ಆದೇಶವೂ ಅಮಾನತು ಆಗುತ್ತದೆ. ಆಗ ರಾಹುಲ್‌ ಗಾಂಧಿಯ ಸಂಸತ್‌ ಸದಸ್ಯತ್ವಕ್ಕೆ ಯಾವುದೇ ತೋಂದರೆ ಉಂಟಾಗುವುದಿಲ್ಲ. ಇಲ್ಲವೇ, ಸಂಸತ್‌ ಸದಸ್ಯತ್ವವನ್ನು ಅನರ್ಹಗೊಳಿಸಿದ ಆದೇಶವನ್ನು ಸಹ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ತಡೆಯಾಜ್ಞೆ ಪಡೆಯಲು ಅವಕಾಶವಿದೆ.
- ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಸಂಪೂರ್ಣ ಕಾನೂನು ಬಾಹಿರ: ರಾಹುಲ್‌ ಗಾಂಧಿಗೆ ಶಿಕ್ಷೆ ವಿಧಿಸಿದ ಸೂರತ್‌ ಸಿಜೆಎಂ ನ್ಯಾಯಾಲಯವೇ, ತನ್ನ ಆದೇಶಕ್ಕೆ ಒಂದು ತಿಂಗಳವರೆಗೆ ತಡೆಯಾಜ್ಞೆ ನೀಡಿದೆ. ಹಾಗಾಗಿ, ಶಿಕ್ಷೆ ಆದೇಶ ಜಾರಿಯಲ್ಲಿ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿರುವುದು ಕಾನೂನು ಬಾಹಿರ ಕ್ರಮ. ಆದ್ದರಿಂದ ಅನರ್ಹತೆ ಆದೇಶಕ್ಕೆ ಕಾನೂನಿನಡಿ ಸಿಂಧುತ್ವ ಇಲ್ಲ. ರಾಹುಲ್‌ ಗಾಂಧಿಯು ಸಿಜೆಎಂ ಕೋರ್ಟ್‌ ಆದೇಶಕ್ಕೆ ಮೇಲಿನ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದರೂ ಅನರ್ಹತೆ ಆದೇಶಕ್ಕೆ ತಡೆ ಬೀಳುತ್ತದೆ. ಅನರ್ಹತೆ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ, ರದ್ದಾಗುವ ಸಾಧ್ಯತೆ ಹೆಚ್ಚಿದೆ. ಶಿಕ್ಷೆ ಆದೇಶ ಪ್ರಕಟಗೊಂಡ ಮರು ದಿನವೇ ರಾಹುಲ್‌ ಗಾಂಧಿಯ ಲೋಕಸಭೆ ಸದಸ್ಯ ಸ್ಥಾನವನ್ನು ಅನರ್ಹಗೊಳಿರುವುದು ದುರುದ್ದೇಶಪೂರ್ವಕವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
- ವೈ.ಆರ್‌. ಸದಾಶಿವ ರೆಡ್ಡಿ, ಸಹ ಅಧ್ಯಕ್ಷರು, ಭಾರತೀಯ ವಕೀಲರ ಪರಿಷತ್‌

ಅನರ್ಹತೆ ಆದೇಶ ರಾಜಕೀಯ ಪ್ರೇರಿತ: ಕ್ರಿಮಿನಲ್‌ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದರೆ, ಆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಕ್ತ ಅವಕಾಶ ಇದ್ದೇ ಇರುತ್ತದೆ. ಪ್ರಕರಣವು ಉನ್ನತ ನ್ಯಾಯಾಲಯದಿಂದ ತಾರ್ತಿಕ ಅಂತ್ಯಕಾಣುವರೆಗೂ ಚುನಾಯಿತ ಜನ ಪ್ರತಿನಿಧಿಯ ಸದಸ್ಯತ್ವ ಅನರ್ಹಗೊಳಿಸಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯವಾದ ಸೂರತ್‌ ಸಿಜೆಎಂ ಕೋರ್ಟ್‌ನ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ಪಡೆಯಲು ಸಾಕಷ್ಟುಕಾಲಾವಕಾಶವಿದೆ. ಅದಕ್ಕೂ ಮುನ್ನವೇ ಲೋಕಸಭಾ ಸದಸ್ಯ ಸ್ಥಾನವನ್ನು ಅಹರ್ನಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ಅನರ್ಹಗೊಳಿಸುವ ಮುನ್ನ ಸೂಕ್ತ ಕಾಲಾವಕಾಶ ನೀಡಿ ವಿವರಣೆಯೂ ಪಡೆದಿಲ್ಲ. ಅವಸರದಲ್ಲಿ ಅನರ್ಹತೆ ಆದೇಶ ಹೊರಡಿಸಿರುವುದು ರಾಜಕೀಯ ಪ್ರೇರಿತವಾಗಿದೆ.
- ಹಸ್ಮತ್‌ ಪಾಷ, ಹೈಕೋರ್ಟ್‌ ಹಿರಿಯ ವಕೀಲರು

ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ

ಅನರ್ಹತೆ ಆದೇಶ ಕಾನೂನುಬದ್ಧ: ಕ್ರಿಮಿನಲ್‌ ಪ್ರಕರಣದಲ್ಲಿ ಚುನಾಯಿತ ಜನಪ್ರತಿನಿಧಿಯನ್ನು ದೋಷಿಯಾಗಿ ತೀರ್ಮಾನಿಸಿ ಎರಡು ವರ್ಷ ಕಾಲ ಶಿಕ್ಷೆಗೆ ಗುರಿಪಡಿಸಿದ ಕೂಡಲೇ ಅವರ ಸದಸ್ಯತ್ವ ತನ್ನಿಂದ ತಾನೇ ಅನರ್ಹಗೊಳ್ಳುತ್ತದೆ. ಮೇಲಿನ ನ್ಯಾಯಾಲಯ ತಡೆ ನೀಡುವ ಅಥವಾ ರದ್ದುಪಡಿಸುವರೆಗೆ ಶಿಕ್ಷೆ ಗುರಿಪಡಿಸಿದ ಆದೇಶವು ಚಾಲ್ತಿಯಲ್ಲಿರುತ್ತದೆ. ಇನ್ನೂ ಚುನಾಯಿತರಾಗದವರು ಎರಡು ವರ್ಷ ಶಿಕ್ಷೆಗೆ ಗುರಿಯಾದರೆ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ. ಅದರಂತೆ ರಾಹುಲ್‌ ಗಾಂಧಿಯ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಆದೇಶವು ಕಾನೂನುಬದ್ಧವಾಗಿದೆ.
- ಶ್ಯಾಮ್‌ ಸುಂದರ್‌, ಹೈಕೋರ್ಟ್‌ ಹಿರಿಯ ವಕೀಲರು

Follow Us:
Download App:
  • android
  • ios