ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ರಾಜ್ಯದ ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದೆ ರಾಜ್ಯ ದಲಿತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಂಚನೆ ಮಾಡುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ರಾಜಭವನ ಚಲೋ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.25): ರಾಜ್ಯದ ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದೆ ರಾಜ್ಯ ದಲಿತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಂಚನೆ ಮಾಡುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ರಾಜಭವನ ಚಲೋ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಜನದ್ರೋಹಿ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೀಸಲಾತಿ ಹೆಚ್ಚಳ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹವನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಶುಕ್ರವಾರ ಬೆಳಗ್ಗೆ ರಾಜಭವನ ಚಲೋ ಪ್ರತಿಭಟನೆ ನಡೆಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಯಾತ್ರೆ ಬಾಳೆಕುಂದ್ರಿ ವೃತ್ತದ ಬಳಿ ತಲುಪುವ ವೇಳೆಗೆ ಪೊಲೀಸರು ಅಡ್ಡಗಟ್ಟಿದರು. ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ನಾಯಕರು ವೃತ್ತದಲ್ಲೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪ್ರತಿಭಟನಾ ನಿರತ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಪಡೆದಿದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಶೋಷಿತ ಸಮುದಾಯಗಳಿಗೆ ಮೋಸ ಮಾಡಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂಬ ಮನವಿ ಸಲ್ಲಿಸಿದರು.
ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ
ಕೆಲ ಕಾಲ ವಶಕ್ಕೆ: ಇದಕ್ಕೂ ಮೊದಲು ಬಾಳೆಕುಂದ್ರಿ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಕಿಡಿ ಕಾರಿದ ಡಿ.ಕೆ. ಶಿವಕುಮಾರ್, ‘ಬಂಧನಕ್ಕೆ ಹೆದರುವ ಮಕ್ಕಳಲ್ಲ ನಾವು. ಹೋರಾಟದ ರಕ್ತ ನಮ್ಮ ಮೈಯಲ್ಲಿ ಹರಿಯುತ್ತಿದೆ. ದಲಿತರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟದ ಕೂಗು ನಿಲ್ಲದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಕರೆ ಕೊಟ್ಟ ಬಳಿಕ ಕೇಂದ್ರಕ್ಕೆ ಶಿಫಾರಸು- ಸಿದ್ದು: ಸಿದ್ದರಾಮಯ್ಯ ಮಾತನಾಡಿ, ‘ನಾವು ಪ್ರತಿಭಟನೆಗೆ ಕರೆ ಕೊಟ್ಟಬಳಿಕ ಎಸ್ಸಿ,ಎಸ್ಟಿಮೀಸಲಾತಿ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರದವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ನಿರ್ಧಾರ ಮಾಡಿ ಎಷ್ಟುದಿನ ಆಗಿತ್ತು? ಶೇ.50ಕ್ಕಿಂತ ಹೆಚ್ಚಳ ಮಾಡುವ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸಚಿವರೇ ಉತ್ತರ ನೀಡಿದೆ. ಹಾಗಾದರೆ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಯೂ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ, 25 ಮಂದಿ ಸಂಸದರು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ: ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ ಬಗ್ಗೆ ಅಧ್ಯಯನ ನಡೆಸಲು ಹಿಂದಿನ ಕಾಂಗ್ರೆಸ್ ಸರ್ಕಾರ ನಾಗಮೋಹನ್‌ದಾಸ್ ಅವರ ಸಮಿತಿ ರಚಿಸಿತ್ತು. ಈ ಸಮಿತಿ ಶಿಫಾರಸ್ಸು ಬಂದ ಬಳಿಕ ಜಾರಿ ಮಾಡುವಂತೆ ಆಗ್ರಹ ಮಾಡಿದ್ದೆವು. ವಾಲ್ಮೀಕಿ ಸ್ವಾಮೀಜಿ ಒಂದೂವರೆ ತಿಂಗಳು ಧರಣಿ ಸತ್ಯಾಗ್ರಹ ನಡೆಸಿದ್ದರು. ಸತತ ಹೋರಾಟದ ಬಳಿಕ ವಿಧಾನಮಂಡಲದಲ್ಲಿ ವಿಧೇಯಕ ತಂದಾಗಲೂ ಬೆಂಬಲಿಸಿ ಅನುಮೋದನೆ ಕೊಡಿಸಿದ್ದೆವು. ಇದಾಗಿ ನಾಲ್ಕೈದು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.
ಈ ವಿಚಾರವಾಗಿ ಸಂಸತ್ತಿನಲ್ಲಿ ಪ್ರಶ್ನಿಸಿದಾಗ, ಕೇಂದ್ರ ಮಂತ್ರಿಗಳೇ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ. ಪರಿಶಿಷ್ಟ ಜನರಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿ ಸರ್ಕಾರ ಅವರಿಗೆ ದ್ರೋಹ ಮಾಡಿದೆ. ರಾಜ್ಯದ ಜನರಿಗೆ ದ್ರೋಹ ಬಗೆದಿರುವ ಹಿನ್ನೆಲೆಯಲ್ಲಿ ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬಾರದು. ಕೂಡಲೇ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರನ್ನು ಕೇಳಿದ್ದು, ಈ ವಿಚಾರವಾಗಿ ಪರಿಶೀಲನೆ ನಡೆಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಬಿಎಸ್‌ವೈ ನಿವಾಸದಲ್ಲಿ ಅಮಿತ್ ಶಾ ಉಪಾಹಾರ: ರಾಜಕೀಯ ಸಂದೇಶ ರವಾನೆ
ರಾಜ್ಯ ಸರ್ಕಾರ ತರಾತುರಿಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದು ಚುನಾವಣೆ ಗಿಮಿಕ್ ಎನಿಸುತ್ತದೆಯೇ ಎಂಬ ಪ್ರಶ್ನೆಗೆ, ಮೀಸಲಾತಿ ವಿಚಾರವಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ರಾಜ್ಯಪಾಲರ ಸಹಿ ಹಾಕಿ 5 ತಿಂಗಳಾಗಿದೆ. ಇಷ್ಟುದಿನಗಳ ಕಾಲ ಸುಮ್ಮನಿದ್ದು ಈಗ ಪರಿಶಿಷ್ಟಜಾತಿ ಹಾಗೂ ಪಂಗಡದ ಜನ ರೊಚ್ಚಿಗೆದ್ದು ಸರ್ಕಾರ ಕಿತ್ತೊಗೆಯಲು ಮುಂದಾಗಿರುವಾಗ, ಅನೇಕ ದಲಿತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವಾಗ ಈ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಾವು ಪ್ರತಿಭಟನೆಗೆ ಕರೆ ನೀಡಿದ ಬಳಿಕ ಗುರುವಾರ ರಾತ್ರಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಅವರು ನಮ್ಮ ಹೋರಾಟಕ್ಕೆ ಹೆದರಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.