ಶಿವಮೊಗ್ಗ ಏರ್ಪೋರ್ಟ್ಲ್ಲಿ ಮೊದಲು ಇಳಿಯೋದು ಮೋದಿ ವಿಮಾನ...!
ಫೆ. 27ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವಿಮಾನ ನಿಲ್ದಾಣ ಉದ್ಘಾಟನೆ, 1700 ಕೋಟಿ ಇತರೆ ಕಾಮಗಾರಿ ಲೋಕಾರ್ಪಣೆ.
ಶಿವಮೊಗ್ಗ(ಫೆ.17): ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27ರಂದು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಇಳಿಯಲಿರುವ ಮೊದಲ ವಿಮಾನ ಪ್ರಧಾನಿ ಮೋದಿ ಅವರದ್ದೇ ಆಗಿರಲಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಒಟ್ಟು .1,789 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಶಂಕುಸ್ಥಾಪನೆ ಸೇರಿ ಒಟ್ಟು .3,377 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆಯೂ ನೆರವೇರಲಿದೆ ಎಂದು ತಿಳಿಸಿದರು. ಜತೆಗೆ, ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅವಕಾಶ ಇದ್ದು, 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಸೋಗಾನೆ ವಿಮಾನ ನಿಲ್ದಾಣ ಪ್ರದೇಶದಲ್ಲೇ ಸಮಾರಂಭ ನಡೆಯಲಿದೆ. ಅಲ್ಲೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳೂ ನಡೆಯಲಿದೆ ಎಂದು ಹೇಳಿದರು.
VISL ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಕೇಂದ್ರ ಸರ್ಕಾರ!
ಕೋಟೆಗಂಗೂರಿನಲ್ಲಿ .76 ಕೋಟಿ ವೆಚ್ಚದಲ್ಲಿ ಕೋಚಿಂಗ್ ಡಿಪೋ ಸ್ಥಾಪನೆ ಆಗಲಿದೆ. ಅಲ್ಲೇ .21 ಕೋಟಿ ವೆಚ್ಚದಲ್ಲಿ ಟರ್ಮಿನಲ್ ಡಿಪೋ ಆರಂಭವಾಗಲಿದೆ. ಇವುಗಳಿಗೆ ಪ್ರಧಾನಿ ಅವರೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. .1000 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ. ಹೊಸನಗರ-ಮಾವಿನಕಟ್ಟೆ-ಆಡುಗೋಡಿ-.313.56 ಕೋಟಿ, ಬೈಂದೂರು-ನಾಗೋಡಿ ಅಗಲೀಕರಣ .395 ಕೋಟಿ, ಶಿಕಾರಿಪುರ ಬೈಪಾಸ್ ರಸ್ತೆ .56 ಕೋಟಿ, ತೀರ್ಥಹಳ್ಳಿ-ಮೇಗರವಳ್ಳಿ-ಆಗುಂಬೆ ರಸ್ತೆಗೆ .96.20 ಕೋಟಿ, ಭಾರತೀಪುರ ರಸ್ತೆಗೆ .56 ಕೋಟಿ, ಹೊಳೆಹೊನ್ನೂರು ಭದ್ರಾ ಸೇತುವೆ .4.60 ಕೋಟಿ ವೆಚ್ಚವಾಗಲಿದೆ ಎಂದು ವಿವರಿಸಿದರು.
ಸ್ಮಾರ್ಟ್ಸಿಟಿ ಕಾಮಗಾರಿ ಲೋಕಾರ್ಪಣೆ
ವಿದ್ಯಾನಗರ ಮೇಲ್ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಸ್ಮಾರ್ಟ್ಸಿಟಿಯ 44 ಕಾಮಗಾರಿಗಳನ್ನು ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ 2,25,700 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿಂದೆ ಕೇವಲ 94,359 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ .134 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆ ಆಗಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮೆ ಮಾಡಲಿದ್ದಾರೆ ಎಂದು ಸಂಸದ ರಾಘವೇಂದ್ರ ಮಾಹಿತಿ ನೀಡಿದರು.