ಆಯುಧಪೂಜೆಗೆ ರಂಗೇರಿದ ಮಾರುಕಟ್ಟೆ: ಕೊರೋನಾ ಭೀತಿ ನಡುವೆಯೂ ಹಬ್ಬಕ್ಕೆ ಸಿದ್ಧತೆ ಜೋರು
ಗಗನಕ್ಕೇರಿದ ಹೂವಿನ ಬೆಲೆ| ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ ಜನ| ಬೇಡಿಕೆ ಇದ್ದರೂ ಗುಣಮಟ್ಟದ ಹೂವು ಸಿಗುತ್ತಿಲ್ಲ. ಜತೆಗೆ ಹಬ್ಬವೂ ಇರುವುದರಿಂದ ಹೂವಿನ ಬೆಲೆ ಹೆಚ್ಚಳ| ಮಲ್ಲೇಶ್ವರಂ, ಜಯನಗರ ಸೇರಿದಂತೆ ವಿವಿಧೆಡೆ ವ್ಯಾಪಾರಿಗಳು ಖರ್ಚು ವೆಚ್ಚ ಪರಿಗಣಿಸಿ ಹಬ್ಬ ಹಿನ್ನೆಲೆ ಹೆಚ್ಚಿನ ಬೆಲೆಗೆ ಮಾರಾಟ|
ಬೆಂಗಳೂರು(ಅ.24): ಕೋವಿಡ್-19 ನಡುವೆಯೂ ದಸರಾ, ಆಯುಧ ಪೂಜೆ ಹಿನ್ನೆಲೆಯಲ್ಲಿ ಮಾರುಕಟ್ಟೆ ರಂಗೇರಿದ್ದು, ಹೂವಿನ ಬೆಲೆ ಗಗನಕ್ಕೇರಿದೆ.
ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು, ಹಬ್ಬ ಸಮೀಪಿಸುತ್ತಿದ್ದಂತೆ ಗ್ರಾಹಕರು ಖರೀದಿಯಲ್ಲಿ ನಿರತರಾಗಿದ್ದಾರೆ. ಕೆ.ಆರ್.ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರಂ, ಗಾಂಧಿ ಬಜಾರ್, ಜಯನಗರ ಸೇರಿದಂತೆ ನಗರದ ನಾನಾ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದಕುಂಬಳ, ನಿಂಬೆ ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಭಾನುವಾರ (ಅ.25)ರಂದು ಆಯುಧ ಪೂಜೆ ಬಂದಿದ್ದು, ಕೊರೋನಾ ಸೋಂಕು ಹರಡುವ ಭೀತಿ ಬದಿಗಿಟ್ಟು ಜನರು ಹಬ್ಬಕ್ಕೆ ಸಿದ್ಧತೆ ನಡೆಸಿದ್ದಾರೆ.
ಕೆ.ಆರ್. ಮಾರುಕಟ್ಟೆಯಲ್ಲಿ ಮಲ್ಲಿಗೆ ಕೆ.ಜಿ. 800-1000 ರು., ಕನಕಾಂಬರ ಕೆ.ಜಿ. 1000 ರು, ಸೇವಂತಿ ಕೆ.ಜಿ. 80ರಿಂದ 200 ರು., ರೋಜಾ ಕೆ.ಜಿ. 200 ರು., ಸುಗಂಧರಾಜ ಕೆ.ಜಿ. 250-300 ರು., ಕಾಕಡ ಕೆ.ಜಿ. 700 ರು., ಚೆಂಡು ಹೂವು ಕೆ.ಜಿ. 50 ರು.ಗೆ ಮಾರಾಟವಾಗುತ್ತಿದೆ. ಬೇಡಿಕೆ ಇದ್ದರೂ ಗುಣಮಟ್ಟದ ಹೂವು ಸಿಗುತ್ತಿಲ್ಲ. ಜತೆಗೆ ಹಬ್ಬವೂ ಇರುವುದರಿಂದ ಹೂವಿನ ಬೆಲೆ ಹೆಚ್ಚಾಗಿದೆ. ಮಲ್ಲೇಶ್ವರಂ, ಜಯನಗರ ಸೇರಿದಂತೆ ವಿವಿಧೆಡೆ ವ್ಯಾಪಾರಿಗಳು ಖರ್ಚು ವೆಚ್ಚ ಪರಿಗಣಿಸಿ ಹಬ್ಬ ಹಿನ್ನೆಲೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರಿನ KR Market ಆರಂಭವಾಗುವುದು ಡೌಟ್!
ಮಲ್ಲೇಶ್ವರಂ ಮಾರುಕಟ್ಟೆಯ ವ್ಯಾಪ್ತಿಯಲ್ಲೂ ಶುಕ್ರವಾರ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಬಿಳಿ ಸೇವಂತಿಗೆ ಮಾರು 250 ರು., ಹಳದಿ ಸೇವಂತಿ ಮಾರು 250 ರು., ಕೆಂಪು ಸೇವಂತಿ ಮಾರು 200 ರು., ಮಲ್ಲಿಗೆ ಮಾರು 350 ರು., ಮಲ್ಲಿಗೆ ದಿಂಡು 100 ರು., ಮಲ್ಲಿಗೆ ಹಾರ 400 ರು., ಗುಲಾಬಿ ಹಾರ 1000 ರು., ಸುಗಂದ ರಾಜ ಹಾರ 300 ರು., ಬೂದು ಕುಂಬಳಕಾಯಿ ಕೆ.ಜಿ. 40, ಬಾಳೆಕಂದು ಜೋಡಿ 30 ರು.ಕ್ಕೆ ಖರೀದಿಯಾಗುತ್ತಿದೆ. ದಸರಾ ಹಬ್ಬಕ್ಕೆಂದು ರಾಶಿಗಟ್ಟಲೆ ಬೂದಗುಂಬಳಕಾಯಿ ಮಾರುಕಟ್ಟೆಗೆ ಬಂದಿದೆ. ಇನ್ನು ಹಾಪ್‌ಕಾಮ್ಸ್‌ನಲ್ಲಿ ಯಾಲಕ್ಕಿ ಬಾಳೆ 72 ರು., ಆಪಲ್ ಡೆಲೀಷಿಯಸ್ 135 ರು., ಸೀತಾಫಲ (ಗೋಲ್ಡನ್) 200 ರು. ನಿಗದಿಯಾಗಿದೆ.
ಕೆಲವರು ಶುಕ್ರವಾರವೇ ಮಳಿಗೆ, ಗೋದಾಮು, ಕಚೇರಿ, ವಾಹನಗಳಿಗೆ ಪೂಜೆ ಮಾಡಿದ್ದಾರೆ. ಹೀಗಾಗಿ ಶುಕ್ರವಾರ ಮುಂಜಾನೆ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಸಿಹಿ ಮಾರಾಟ ಮಳಿಗೆಗಳಲ್ಲೂ ಖರೀದಿ ಜೋರಾಗಿ ನಡೆದಿದೆ. ಆಯುಧಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿ ಮತ್ತಿತರರಿಗೆ ಸಿಹಿ ಜತೆಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಕಡ್ಲೆಪುರಿಗೆ ಹೆಚ್ಚು ಬೇಡಿಕೆಯಿದ್ದು, ಒಂದು ಸೇರಿಗೆ 6-10 ರೂ.ವರೆಗೆ ಮಾರಾಟವಾಗುತ್ತಿದೆ. ಜತೆಗೆ ಬಾಳೆಕಂಬ, ಅರಿಶಿನ-ಕುಂಕುಮ, ಕರ್ಪೂರ ಮತ್ತಿತರ ಪೂಜಾ ಸಾಮಗ್ರಿಗಳ ಬೆಲೆಯೂ ದುಬಾರಿಯಾಗಿದೆ.
ಮಳೆಗೆ ಹೂವಿನ ಬೆಳೆ ಹಾಳಾಗಿದೆ. ಗುಣಮಟ್ಟದ ಹೂವು ಬರುತ್ತಿಲ್ಲ. ತೇವಾಂಶಯುಕ್ತ ಹೂವು ಬರುತ್ತಿದೆ. ಮಲ್ಲಿಗೆ ಅನ್‌ಸೀಸನ್ ಇರುವುದರಿಂದ ಬೆಲೆ ಹೆಚ್ಚಿದೆ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ದಿವಾಕರ್ ಹೇಳಿದ್ದಾರೆ.