ಮೇಕೆದಾಟು ಯೋಜನೆ ವಿರುದ್ಧ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ತಿರುಗೇಟು ನೀಡಿ ಡ್ಯಾಂ ನಿರ್ಮಿಸಿಯೆ ತೀರುತ್ತೇವೆಂದು ಸಿಎಂ ಹೇಳಿರುವುದನ್ನು ಸ್ವಾಗತಿಸಿದ ಕನ್ನಡಪರ ಸಂಘಟನೆಗಳು 

ಚಿಕ್ಕಬಳ್ಳಾಪುರ (ಆ.02): ಮೇಕೆದಾಟು ಯೋಜನೆ ವಿರುದ್ಧವಾಗಿ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನೀಡಿರುವ ಬೆದರಿಕೆಗೆ ರಾಜ್ಯದ ಸಿಎಂ ಬೊಮ್ಮಾಯಿ ತಿರುಗೇಟು ನೀಡಿ ಡ್ಯಾಂ ನಿರ್ಮಿಸಿಯೆ ತೀರುತ್ತೇವೆಂದು ಹೇಳಿರುವುದನ್ನು ಸ್ವಾಗತಿ ಕನ್ನಡಪರ ಸಂಘಟನೆಗಳು ನಗರದಲ್ಲಿ ಭಾನುವಾರ ಬೊಮ್ಮಾಯಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನಡೆಸಿದವು.

ನಗರದ ಸರ್‌ಎಂವಿ ವೃತ್ತದಲ್ಲಿ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸೇರಿದಂತೆ ಮಾಜಿ ಸಚಿವ ಸುಧಾಕರ್‌ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಡಾ.ಕೆ.ಸುಧಾಕರ್‌ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡಿದರು.

ಮೇಕೆದಾಟು ಯೋಜನೆಗೆ ಅವಕಾಶ ಬೇಡ: ಮೋದಿಗೆ ಅಣ್ಣಾ ಡಿಎಂಕೆ ಮನವಿ!

ಯೋಜನೆಗೆ ಅನಗತ್ಯ ತೊಂದರೆ : ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರು, ಈ ಹಿಂದೆ ಜಲ ಸಂಪನ್ನೂಲ ಸಚಿವರಾಗಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಿದ್ದು ಅವರಿಗೆ ಈ ಬಗ್ಗೆ ಸಾಕಷ್ಟುಅನುಭವ ಇದೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೇ ಕಟ್ಟುತ್ತೇವೆ ಎಂದು ಘಂಟಾ ಘೋಷವಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೀಡಿರುವ ಹೇಳಿಕೆ ಕನ್ನಡಿಗರಿಗೆ ಸಂತಸ ತಂದಿದೆ. ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆಜೆ ಚಾಲನೆ ನೀಡಿ ರೈತರ ಹಾಗೂ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಒದಗಿಸಬೇಕೆಂದರು.

ಡಾ.ಸುಧಾಕರ್‌ ಪರ ಜೈಕಾರ: ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸುಧಾಕರ್‌ ಬೆಂಬಲಿಗರು ಸುಧಾಕರ್‌ ಪರ ಜೈಕಾರ ಕೂಗಿದರು. ಸುಧಾಕರ್‌ ರವರು ಜಿಲ್ಲೆಯ ಅಂತರ್ಜಲ ವೃದ್ದಿಗೆ ವಿಶೇಷ ಕಾಳಜಿ ವಹಿಸಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಹೆಬ್ಬಾಳ ನಾಗವಾರ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಅಧುನಿಕ ಭಗೀರಥರಾಗಿದ್ದಾರೆಂದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಕೆ.ವಿ.ಮಂಜುನಾಥ, ಕರವೇ ಸಿಂಹ ಸೇನೆ ಜಿಲ್ಲಾಧ್ಯಕ್ಷ ಶ್ರೀಧರ್‌ಬಾಬು, ಮುಖಂಡರಾದ ಆನಂದ್‌, ಎಸ್‌.ಪಿ.ಶ್ರೀನಿವಾಸ್‌, ಡ್ಯಾನ್ಸ್‌ ಶ್ರೀನಿವಾಸ್‌ ಸೇರಿದಂತೆ ಬಿಜೆಪಿ ಮುಖಂಡರು, ಸುಧಾಕರ್‌ ಅಭಿಮಾನಿಗಳಿದ್ದರು.